ಬೆಂಗಳೂರು :
ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಗೊಂದಲಕ್ಕೆ ಚುನಾವಣಾಧಿಕಾರಿಗಳು ಶನಿವಾರ ಮಧ್ಯರಾತ್ರಿ ತೆರೆ ಎಳೆದಿದ್ದು, ಬಿಜೆಪಿಯ ಸಿ.ಕೆ.ರಾಮಮೂರ್ತಿ ಅವರು ವಿಜಯಿ ಎಂದು ಘೋಷಣೆ ಮಾಡಿದ್ದಾರೆ. ಇದರಿಂದ ಬೇಸರಗೊಂಡ ಕಾಂಗ್ರೆಸ್ನ ಸೌಮ್ಯ ರೆಡ್ಡಿ ಅವರು ಕಣ್ಣೀರು ಹಾಕಿದ್ದಾರೆ.
ಮತ ಎಣಿಕೆ ಗೊಂದಲದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಎಸ್ಎಸ್ಎಂಆರ್ವಿ ಕಾಲೇಜಿನ ಮತ ಎಣಿಕೆ ಕೇಂದ್ರ ಬಳಿ ಜಮಾಯಿಸಿ, ಪರಸ್ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಜಯನಗರ ಕ್ಷೇತ್ರದ ಮತ ಎಣಿಕೆಯು ಸುತ್ತಿನಿಂದಲೂ ಹಾವು-ಏಣಿಯಾಟ ನಡೆಯುತ್ತಲೇ ಇತ್ತು. 16 ಸುತ್ತಿನ ಮತ ಎಣಿಕೆ ಕಾರ್ಯ ಮುಗಿದ ಬಳಿಕ ಕಾಂಗ್ರೆಸ್ನ ಸೌಮ್ಯಾರೆಡ್ಡಿ ಅವರು 294 ಮತಗಳಿಂದ ಮುನ್ನಡೆ ಸಾಧಿಸಿರುವುದನ್ನು ಚುನಾವಣಾ ಫಲಿತಾಂಶದ ವೆಬ್ಸೈಟ್ನಲ್ಲಿ ಪ್ರಕಟಿಸಲಾಯಿತು. ಆಗ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು ಅಂಚೆ ಮತಗಳ ಮರು ಎಣಿಕೆಗೆ ಒತ್ತಾಯಿಸಿದರು. ಒಟ್ಟು ಮೂರು ಬಾರಿ ಮರು ಎಣಿಕೆ ಮಾಡಲಾಯಿತು.
ಮೊದಲ ಸಲ ಮತ್ತು ಎರಡನೇ ಬಾರಿಯ ಮರು ಎಣಿಕೆಯಲ್ಲಿ ಸೌಮ್ಯಾರೆಡ್ಡಿಮುಂದಿದ್ದರು. ಆದರೆ ಅಂತಿಮ ಮರು ಎಣಿಕೆಯಲ್ಲಿ ಮೊದಲಿಗೆ ತಿರಸ್ಕೃತಗೊಳಿಸಿದ್ದ 200 ಅಂಚೆ ಮತಗಳನ್ನು ಸಿಂಧುಗೊಳಿಸಿದ್ದರಿಂದ ಬಿಬಿಎಂಪಿ ಮಾಜಿ ಕಾರ್ಪೋರೇಟರ್, ಬಿಜೆಪಿಯ ಸಿ.ಕೆ.ರಾಮಮೂರ್ತಿ 16 ಮತಗಳ ಮುನ್ನಡೆ ಸಾಧಿಸಿದರು. ಇದಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಫಲಿತಾಂಶ ಪ್ರಕಟಿಸಿರಲಿಲ್ಲ.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ಇವಿಎಂ ಮತ್ತು ಅಂಚೆ ಮತಗಳನ್ನು ಪರಿಶೀಲಿಸಿ, ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು 16 ಮತಗಳಿಂದ ಜಯ ಗಳಿಸಿದ್ದಾರೆಂದು ಘೋಷಿಸಿದರು. ಇದಕ್ಕೂ ಮುನ್ನ ಡಿಕೆ ಸುರೇಶ್, ಡಿ.ಕೆ. ಶಿವಕುಮಾರ ಮತ ಎಣಿಕೆ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದರು.