ಬೆಳಗಾವಿ : ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಇದೀಗ ಬೆಳಗಾವಿಯಲ್ಲಿ ಮನೆ ಮಾಡಿದ್ದಾರೆ.
ಬೆಳಗಾವಿಯ ಕುಮಾರಸ್ವಾಮಿ ಲೇಔಟ್ ನಲ್ಲಿ ಅವರು ಯುಗಾದಿಯ ಶುಭದಿನದಂದೇ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ. ಎರಡು ಮಹಡಿಗಳ ಮನೆಯನ್ನು ಜಗದೀಶ ಶೆಟ್ಟರ್ ಬಾಡಿಗೆ ಪಡೆದುಕೊಂಡಿದ್ದಾರೆ.
ಜಗದೀಶ ಶೆಟ್ಟರ್ ಕುಟುಂಬ ಈ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಿ ಮನೆ ಪ್ರವೇಶಿಸಿದೆ.
ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್, ಸಂಸದೆ ಮಂಗಲಾ ಅಂಗಡಿ, ಶ್ರದ್ದಾ ಶೆಟ್ಟರ್, ಪುತ್ರ ಸಂಕಲ್ಪ ಶೆಟ್ಟರ್ ಸೇರಿದಂತೆ ಗಣ್ಯ ಮಾನ್ಯರು ಉಪಸ್ಥಿತರಿದ್ದರು.
ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಹೊರಗಿನವರು, ಅವರು ಬೆಳಗಾವಿಯವರಲ್ಲ. ಬೆಳಗಾವಿಯಲ್ಲಿ ನಿಮ್ಮ ಅಡ್ರೆಸ್ ಎಲ್ಲಿದೆ ಹೇಳಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇತ್ತೀಚಿಗೆ ಜಗದೀಶ ಶೆಟ್ಟರ್ ಅವರಿಗೆ ಬಹುದೊಡ್ಡ ಸವಾಲು ಹಾಕಿದ್ದರು. ಇದು ಚುನಾವಣೆಯ ಈ ಸಂದರ್ಭದಲ್ಲಿ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಜಗದೀಶ ಶೆಟ್ಟರ್ ಹೊಸಮನೆ ಪ್ರವೇಶಿಸುವ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿದ್ದಾರೆ. ಜಗದೀಶ ಶೆಟ್ಟರ್ ಅವರು ಹೊಸ ಮನೆ ಪ್ರವೇಶ ಮಾಡಿ ಮಾತನಾಡಿ, ಯುಗಾದಿ ಶುಭದಿನದಂದು ಬೆಳಗಾವಿಯಲ್ಲಿ ಹೊಸ ಮನೆಗೆ ಪ್ರವೇಶ ಮಾಡಿದ್ದೇನೆ. ಬೆಳಗಾವಿಯಲ್ಲಿ ಕಚೇರಿ ತೆರೆಯುತ್ತೇನೆ. ವಿರೋಧಿಗಳಿಗೆ ನಾನು ಉತ್ತರ ಕೊಡಲು ಮನೆ ಮಾಡಿಲ್ಲ. ಅವರು ನನ್ನನ್ನು ಟೀಕಿಸುವ ಮೊದಲು ನಾನು ಹೇಳಿದಂತೆ ಮನೆ ಮಾಡಿದ್ದೇನೆ. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದಾಗ ನನ್ನ ಹೇಳಿಕೆಯನ್ನು ಅವರು ಗಮನಿಸಿರಲಿಲ್ಲ ಎನಿಸುತ್ತದೆ. ನಾನು ಬಿಜೆಪಿ ಬಿಟ್ಟಾಗ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿಯನ್ನು ಎಂದೂ ಟೀಕಿಸಿರಲಿಲ್ಲ. ಸುಳ್ಳು ಹೇಳಿಕೆಗಳನ್ನು ನೀಡಬೇಡಿ ಎಂದು ಹೆಬ್ಬಾಳ್ಕರ್ ಅವರಿಗೆ ತಾಕೀತು ಮಾಡಿದರು.
ಬೆಳಗಾವಿಯಲ್ಲಿ ನನಗೆ ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತದೆ ಎಂದು ನಾನು ಎಂದು ಅಂದುಕೊಂಡಿರಲಿಲ್ಲ. ಎಲ್ಲೆಡೆ ಅಪಾರ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿದೆ. ನೀವು ನಿಶ್ಚಿತವಾಗಿ ಗೆದ್ದೇ ಗೆಲ್ಲುತ್ತೀರಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ. ನನ್ನ ಜೀವನದಲ್ಲಿ ಹಲವು ಚುನಾವಣೆ ಎದುರಿಸಿದ್ದೇನೆ. ಆದರೆ ಬೆಳಗಾವಿಯಲ್ಲಿ ಸಿಕ್ಕಷ್ಟು ಇಷ್ಟೊಂದು ಜನರ ಪ್ರೀತಿ ಎಂದು ಸಿಕ್ಕಿರಲಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಯಾವ ವಿಷಯದಲ್ಲಿ ಚರ್ಚೆ ಆಗಬೇಕು ಅದು ಆಗುತ್ತಿಲ್ಲ. ನಾನು ಅವರನ್ನು ಟೀಕಿಸುತ್ತಿಲ್ಲ. ಟೀಕೆ ಮಾಡುವುದರಿಂದ ದೊಡ್ಡವರಾಗಬಹುದು ಎಂದು ಅವರು ನನ್ನ ಮೇಲೆ ಟೀಕೆ ಮಾಡುತ್ತಿರಬಹುದು. ಆದರೆ ನಾನು ಅವರನ್ನು ಟೀಕೆ ಮಾಡಲು ಹೋಗುವುದಿಲ್ಲ. ಟೀಕೆ ಬಿಟ್ಟು ನೀವು ನಿಮ್ಮ ಪಕ್ಷದ ಪ್ರಧಾನಿ ಯಾರು ಎನ್ನುವುದು ತಿಳಿಸಿ ಎಂದು ಟಾಂಗ್ ನೀಡಿದರು. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸಿಗುತ್ತಿರುವ ಬೆಂಬಲಕ್ಕೆ ಪ್ರತಿಕ್ರಿಸಿದ ಜಗದೀಶ್ ಶೆಟ್ಟರ್ , ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬೆಂಬಲ ಸಿಗುತ್ತಿದೆ. ನನಗೆ ಟಿಕೆಟ್ ಘೋಷಣೆ ಆಗುವ ಸಾಕಷ್ಟು ಮೊದಲು ನೀವು ಬೆಳಗಾವಿಯಿಂದ ಸ್ಪರ್ಧಿಸಲೇಬೇಕು ಎಂದು ಅನೇಕರು ಹೇಳಿದ್ದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಲೋಕಸಭಾ ಚುನಾವಣೆ ರಾಷ್ಟ್ರೀಯ ಅಜೆಂಡಾದಲ್ಲಿದ್ದು ಇದು ಜಾತಿ ಧರ್ಮದ ಆಧಾರದ ಮೇಲೆ ನಡೆಯುವ ಚುನಾವಣೆಯಲ್ಲ ಎಂದು ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.