ಭುವನೇಶ್ವರ: ಬಿಜೆಪಿ-ಬಿಜೆಡಿ ನಡುವೆ ಚುನಾವಣಾ ಪೂರ್ವ ಮೈತ್ರಿಯ ಮಾತುಕತೆ ಅಪೂರ್ಣವಾಗಿದ್ದು, ರಾಜ್ಯದ ಎಲ್ಲಾ 147 ವಿಧಾನಸಭೆ ಹಾಗೂ 21 ಲೋಕಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಒಡಿಶಾ ಬಿಜೆಪಿ ಅಧ್ಯಕ್ಷ ಮನಮೋಹನ ಸಮಾಲ್ ಹೇಳಿದರು.
ಶುಕ್ರವಾರ ರಾತ್ರಿ ಹಿರಿಯ ನಾಯಕರೊಂದಿಗೆ ದೆಹಲಿಯಿಂದ ಭುವನೇಶ್ವರಕ್ಕೆ ಆಗಮಿಸಿದ ಅವರು, ಮೈತ್ರಿಯ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನಾವು ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ಮುಂದಿನ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆ ಮಾತುಕತೆ ನಡೆಸಲು ನಾವು ದೆಹಲಿಗೆ ತೆರೆಳಿದ್ದೆವು. ಮೈತ್ರಿ ಅಥವಾ ಸೀಟು ಹಂಚಿಕೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದ್ದು, ಎರಡೂ ಚುನಾವಣೆನ್ನು ಬಿಜೆಪಿ ಸ್ವಂತ ಬಲದಲ್ಲಿ ಎದುರಿಸಲಿದೆ.
ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಮಾತುಕತೆ ನಡೆಸಲು ಗುರುವಾರ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದ ಬಿಜೆಡಿ ನಾಯಕರಾದ ವಿ.ಕೆ ಪಾಂಡಿಯನ್ ಹಾಗೂ ಪ್ರಣಬ್ ಪ್ರಕಾಶ್ ದಾಸ್ ಭುವನೇಶ್ವರಕ್ಕೆ ಮರಳಿದ್ದಾರೆ. ಚರ್ಚೆಯ ಫಲಿತಾಂಶದ ಬಗ್ಗೆ ಇವರಿಬ್ಬರೂ ಮೌನ ವಹಿಸಿದ್ದಾರೆ.
ಸೀಟು ಹಂಚಿಕೆ ಸಂಬಂಧ ಉಭಯ ಪಕ್ಷಗಳ ನಡುವಿನ ಮಾತುಕತೆ ಅಪೂರ್ಣವಾಗಿದೆ ಎಂದು ಮೂಲಗಳು ತಿಳಿಸಿವೆ. 147 ಕ್ಷೇತ್ರಗಳ ಪೈಕಿ 100ಕ್ಕೂ ಅಧಿಕ ಸೀಟುಗಳಲ್ಲಿ ಸ್ಪರ್ಧಿಸುವುದಾಗಿ ಬಿಜೆಡಿ ಚರ್ಚೆ ವೇಳೆ ಹೇಳಿತ್ತು. ಇದನ್ನು ಬಿಜೆಪಿ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.
ಸದ್ಯ ಬಿಜೆಡಿಗೆ 114 ಶಾಸಕರ ಬಲ ಇದ್ದು, 112 ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನು ಚರ್ಚೆ ವೇಳೆ ಮುಂದಿಟ್ಟಿತ್ತು.
‘ಬಿಜೆಡಿಯು ಸುಮಾರು ಶೇ 75ರಷ್ಟು ಸೀಟುಗಳಿಗೆ ಬೇಡಿಕೆ ಇಟ್ಟಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ರಾಜ್ಯದಲ್ಲಿ ಪಕ್ಷಕ್ಕೆ ಋಣಾತ್ಮಕವಾಗಿ ಪರಿಣಮಿಸಲಿದೆ’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
21 ಲೋಕಸಭಾ ಕ್ಷೇತ್ರಗಳ ಪೈಕಿ 14ಕ್ಕೆ ಬಿಜೆಪಿ ಬೇಡಿಕೆ ಇಟ್ಟಿದೆ. ಇದನ್ನು ಬಿಜೆಡಿ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ. 2019ರ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಡಿ ಹಾಗೂ 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
10ಕ್ಕೂ ಕಡಿಮೆ ಸೀಟುಗಳಲ್ಲಿ ಸ್ಪರ್ಧೆ ಮಾಡುವುದು ಆತ್ಮಾಹುತಿ ಮಾಡಿಕೊಂಡಂತೆ ಎಂದು ಬಿಜೆಡಿಯ ಹಿರಿಯ ನಾಯಕರೊಬ್ಬರು ಹೇಳಿದರು.