ಬೆಂಗಳೂರು: ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಯು ವಿಧಾನ ಪರಿಷತ್ತಿನ ವಿಪಕ್ಷದ ನಾಯಕರನ್ನಾಗಿ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಿದೆ.
ಪರಿಷತ್ ವಿಪಕ್ಷ ನಾಯನಾಗಿದ್ದ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಈಗ ಬಿಜೆಪಿಯು ವಿಪಕ್ಷ ನಾಯಕನ ಸ್ಥಾನಕ್ಕೆ ಛಲವಾದಿ ನಾರಾಯಣ ಸ್ವಾಮಿ ಅವರನ್ನು ನೇಮಿಸಿದೆ. ವಿಪಕ್ಷ ನಾಯಕನ ಹುದ್ದೆ ರೇಸ್ನಲ್ಲಿದ್ದ ಸಿಟಿ ರವಿ ಮತ್ತು ರವಿಕುಮಾರ ಅವರನ್ನು ಬಿಟ್ಟು ಛಲವಾದಿ ನಾರಾಯಣ ಸ್ವಾಮಿ ಅವರನ್ನು ಹೈಕಮಾಂಡ್ ಪರಿಗಣಿಸಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿ ಛಲವಾದಿ ನಾರಾಯಾಣಸ್ವಾಮಿಗೆ ಅಭಿನಂದನೆ ತಿಳಿಸಿದ್ದಾರೆ. ಪರಿಶಿಷ್ಟ ಸಮುದಾಯಗಳ ಹಾಗೂ ಸಾಂವಿಧಾನಿಕ ಹಕ್ಕುಗಳ ಪರ ನಿರಂತರ ದನಿಯಾಗಿ ನಿಂತು ಹೋರಾಟ ನಡೆಸಿಕೊಂಡು ಬಂದ ಛಲವಾದಿ ನಾರಾಯಣ ಸ್ವಾಮಿ ಅವರ ನಾಯಕತ್ವ ಹಾಗೂ ಪಕ್ಷ ಬದ್ಧತೆಯನ್ನು ಗುರುತಿಸಿ ವಿಧಾನ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದ ಬಿಜೆಪಿ ವರಿಷ್ಠರು ಈಗ ಅವರನ್ನು ವಿಧಾನ ಪರಿಷತ್ತಿನ ವಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ ‘ಸಾಮಾಜಿಕ ನ್ಯಾಯ’ ನಮ್ಮ ಪಕ್ಷದ ಆದ್ಯತೆ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.