ಬೆಳಗಾವಿ :
ಕರ್ತೃತ್ವಶಕ್ತಿಯಿಂದ ನೂರಾರು ಸಂಸ್ಥೆಗಳನ್ನು ಹುಟ್ಟುಹಾಕಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ವಿಶೇಷವಾಗಿ ಆರೋಗ್ಯಸೇವಾ ಕ್ಷೇತ್ರಗಳಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ವ್ಯಕ್ತಿ ಡಾ. ಪ್ರಭಾಕರ ಕೋರೆ ಅವರು ಎಂದು ಲಿಂಗರಾಜ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಹೇಳಿದರು.
ಬೆಳಗಾವಿಯ ಸ್ವಾಮಿ ವಿವೇಕಾನಂದ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕರ ಸೇವಾ ಕೇಂದ್ರದಲ್ಲಿ ಡಾ.ಪ್ರಭಾಕರ ಕೋರೆಯವರ ೭೬ನೇ ಹುಟ್ಟುಹಬ್ಬದ ನಿಮಿತ್ತವಾಗಿ ಸಿಹಿತಿಂಡಿಗಳನ್ನು ವಿತರಿಸಿ ಮಾತನಾಡಿದರು. ಶಿಕ್ಷಣದಿಂದ ಆರೋಗ್ಯದವರೆಗೆ, ಸಂಪ್ರದಾಯಕ ಶಿಕ್ಷಣದಿಂದ ವೈಜ್ಞಾನಿಕ ಕ್ಷೇತ್ರದವರೆಗೆ, ಅಧ್ಯಯನದಿಂದ ಸಂಶೋಧನೆಯವರೆಗೆ, ಶಿಕ್ಷಣದ ಬೇಕುಬೇಡಿಕೆಗಳನ್ನು ನಿತ್ಯ ಪೂರೈಸುವುದರ ಮೂಲಕ ಶಿಕ್ಷಣದ ರೂಪರೇಷೆಗಳಿಗೆ ನೂತನ ಭಾಷ್ಯ ಬರೆದವರು ಡಾ.ಕೋರೆಯವರು.
ಶಿಕ್ಷಣದಿಂದಲೇ ಸಮಾಜದಲ್ಲಿ ಆರೋಗ್ಯಪೂರ್ಣ ವಾತಾವರಣ ನಿರ್ಮಾಣವಾಗಲು ಸಾಧ್ಯ. ಶಿಕ್ಷಣವೇ ಸಮಾಜ ನಿರ್ಮಾಣಕ್ಕೆ ಮೂಲತಳಹದಿ ಎಂಬ ತತ್ವವನ್ನು ಬಲವಾಗಿ ನಂಬಿರುವ ಡಾ. ಕೋರೆ ಅವರು ಶೈಕ್ಷಣಿಕ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ. ಮಾತ್ರವಲ್ಲದೆ ಸಹಕಾರಿ, ಕೃಷಿ ಕ್ಷೇತ್ರದಲ್ಲಿಯು ಸಲ್ಲಿಸಿರುವ ಕೊಡುಗೆ ಅಪಾರ. ಭಗವಂತನು ಅವರಿಗೆ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯವನ್ನು ಕರುಣಿಸಲಿ ಅವರಿಂದ ಇನ್ನಷ್ಟು ಜನಪರವಾದ ಕೆಲಸಗಳು ಜರುಗಲೆಂದು ಶುಭಕೋರಿದರು.
ಡಾ.ಜಿ.ಎನ್.ಶೀಲಿ, ಡಾ.ಮಲ್ಲಣ್ಣಾ, ಪಿಯು ಪ್ರಾಚಾರ್ಯ ಗಿರಿಜಾ ಹಿರೇಮಠ, ಲಕ್ಷ್ಮೀ ಬಿರಾದಾರ ಪ್ರೊ.ರವೀಂದ್ರ ಬಡಿಗೇರ, ಮೊದಲಾದವರು ಉಪಸ್ಥಿತರಿದ್ದರು.