ಪಾಟ್ನಾ : ಬಿಹಾರದ ಬಹು ನಿರೀಕ್ಷಿತ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್ಗಳಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ನೇತೃತ್ವದ ಎನ್ಡಿಎ ಮೈತ್ರಿಕೂಟವು ಭಾರೀ ಮುನ್ನಡೆ ಸಾಧಿಸಿದೆ. ಆರ್ಜೆಡಿ ನೇತೃತ್ವದ ಮಹಾಘಟಬಂಧನ ಹಿನ್ನಡೆಯಲ್ಲಿದೆ.
ಬಿಹಾರದಲ್ಲಿ ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳು ಎನ್ಡಿಎಗೆ ಸ್ಪಷ್ಟ ಮುನ್ನಡೆ ನೀಡಿದ್ದವು. 243 ಕ್ಷೇತ್ರಗಳಾದ್ಯಂತ ಸ್ಪರ್ಧಿಸಿರುವ 2,616 ಅಭ್ಯರ್ಥಿಗಳ ಭವಿಷ್ಯವನ್ನು ಈ ಫಲಿತಾಂಶಗಳು ನಿರ್ಧರಿಸಲಿವೆ. ರಾಜ್ಯದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ನಿತೀಶಕುಮಾರ ಅವರು ದಾಖಲೆಯ ಐದನೇ ಅವಧಿಗೆ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಜೆಡಿ(ಯು) ಸುಪ್ರಿಮೋ ಅವರ ಎರಡು ದಶಕಗಳ ‘ಸುಶಾಸನ’ (ಉತ್ತಮ ಆಡಳಿತ) ಭರವಸೆಯು ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ ಮತದಾರರ ಮೇಲೆ ಪ್ರಭಾವ ಬೀರುತ್ತದೆಯೇ ಎಂಬುದರ ಮೇಲೆ ಫಲಿತಾಂಶ ನಿಂತಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಇತ್ತೀಚಿನ ಮಾಹಿತಿ ಪ್ರಕಾರ, ಆಡಳಿತಾರೂಢ ಎನ್ಡಿಎ ಮೈತ್ರಿಕೂಟವು ಸುಲಭವಾಗಿ ಬಹುಮತದ ಗಡಿಯನ್ನು ದಾಟಿದ್ದು, 180 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ತೇಜಸ್ವಿ ಯಾದವ್ ಅವರ ಆರ್ಜೆಡಿ (RJD) ನೇತೃತ್ವದ ಮಹಾಘಟಬಂಧನ ಎರಡನೇ ಸ್ಥಾನದಲ್ಲಿದ್ದು, 80 ಸ್ಥಾನಗಳಲ್ಲಿ ಮುಂದಿದೆ. ಅಚ್ಚರಿಯೆಂದರೆ, ಪ್ರಶಾಂತ ಕಿಶೋರ ಅವರ ಹೊಸ ಪಕ್ಷವಾದ ಜನ ಸುರಾಜ್ ಪಾರ್ಟಿ (JSP) ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ (AIMIM) ಒಂದು ಸ್ಥಾನದಲ್ಲಿ ಮುಂದಿದೆ.
ಪಕ್ಷಗಳ ಮುನ್ನಡೆ:
ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ (BJP)76, ಜೆಡಿ(ಯು) 78, ಎಲ್ಜೆಪಿ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಬಹುಮತಕ್ಕೆ 122 ಸ್ಥಾನಗಳು ಬೇಕಿವೆ. ಮಹಾಘಟಬಂಧನದಲ್ಲಿ ಆರ್ಜೆಡಿ 38, ಕಾಂಗ್ರೆಸ್ 11 ಸ್ಥಾನಗಳಲ್ಲಿ ಹಾಗೂ ಎಡಪಕ್ಷಗಳು 8 ಸ್ಥಾನಗಳಲ್ಲಿ ಮುಂದಿವೆ. ಜನ ಸುರಾಜ್ ಪಾರ್ಟಿ (JSP)3, ಎಐಎಂಐಎಂ (AIMIM)1 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಿ ಎರಡು ಹಂತಗಳ ಮತದಾನದಲ್ಲಿ, ಬಿಹಾರವು ದಾಖಲೆಯ 66.91 ಪ್ರತಿಶತ ಮತದಾನವನ್ನು ದಾಖಲಿಸಿದೆ. 1951ರ ನಂತರ ಇದೇ ಅತಿ ಹೆಚ್ಚು ಮತದಾನ ಪ್ರಮಾಣವಾಗಿದೆ. ಈ ಬಾರಿ ಮತದಾರರ ಪಟ್ಟಿಯಲ್ಲಿ ಕಡಿಮೆ ಇದ್ದರೂ, ಮಹಿಳೆಯರು ಪುರುಷರಿಗಿಂತ 4.3 ಲಕ್ಷಕ್ಕೂ ಹೆಚ್ಚು ಮತಗಳನ್ನು ಚಲಾಯಿಸಿದ್ದಾರೆ.ಮೊದಲ ಹಂತದಲ್ಲಿ ಮಹಿಳಾ ಮತದಾನವು 69% ಮತ್ತು ಎರಡನೇ ಹಂತದಲ್ಲಿ 74% ಆಗಿತ್ತು. ಈ ಹೆಚ್ಚಳವು ನಿತೀಶಕುಮಾರ ನೇತೃತ್ವದ ಎನ್ಡಿಎಗೆ ಹೆಚ್ಚು ಅನುಕೂಲವಾಗಿದೆ ಎಂದು ಭಾವಿಸಲಾಗಿದೆ.


