ಪಾಟ್ನಾ: ಬಿಹಾರದ ರಾಜಕಾರಣದಲ್ಲಿ ಸುಮಾರು ಮೂರು ದಶಕಗಳ ಕಾಲ ಲಾಲು ಪ್ರಸಾದ ಯಾದವ್ ಅವರ ಆರ್ಜೆಡಿ ಪಕ್ಷದ ಏಳಿಗೆಗೆ ಶಕ್ತಿಯಾಗಿದ್ದ ‘ಎಂವೈ’ (ಮುಸ್ಲಿಂ-ಯಾದವ್) ಸಮೀಕರಣವು ಈಗ ಬದಲಾಗಿದೆ. 2025ರ ಬಿಹಾರ ಚುನಾವಣೆಯಲ್ಲಿ, ಹೊಸ ‘ಎಂವೈಇ’ (ಮಹಿಳೆ, ಯುವಜನತೆ ಮತ್ತು ಅತಿ ಹಿಂದುಳಿದ ವರ್ಗ-EBC) ಸಮೀಕರಣವು ಹೊರಹೊಮ್ಮಿದ್ದು, ಇದು ಈ ಸಲದ ಚುನಾವಣೆಯಲ್ಲಿ ಎನ್ಡಿಎಗೆ ಅಭೂತಪೂರ್ವ ಜಯ ತಂದುಕೊಟ್ಟಿದೆ.
ಜಾತಿ ಆಧಾರದ ಮೇಲೆ ಹೆಚ್ಚಾಗಿ ನೋಡಲಾಗುತ್ತಿದ್ದ ಬಿಹಾರ ಚುನಾವಣೆಯಲ್ಲಿ, ಸಾಮಾಜಿಕ ಕಲ್ಯಾಣ, ಲಿಂಗ ಸಮಾನತೆ ಮತ್ತು ಆಕಾಂಕ್ಷೆಗಳನ್ನು ಆಧರಿಸಿದ ಈ ಹೊಸ ಗಣಿತವು ಎನ್ಡಿಎಗೆ ಬಹುದೊಡ್ಡ ಗೆಲುವು ತಂದುಕೊಟ್ಟಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಬಿಹಾರದ ಕೆಲವು ಪಕ್ಷಗಳು ‘ಎಂವೈ’ ಎಂಬ ಓಲೈಕೆ ಸೂತ್ರವನ್ನು ಸೃಷ್ಟಿಸಿದ್ದವು. ಆದರೆ ಇಂದಿನ ಗೆಲುವು ಹೊಸ ಸಕಾರಾತ್ಮಕ ‘ಎಂವೈ’ ಸೂತ್ರವನ್ನು ನೀಡಿದೆ, ಅದು ಮಹಿಳೆಯರು ಮತ್ತು ಯುವ ಸಮೂಹ. ಬಿಹಾರವು ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ, ಮತ್ತು ಇದರಲ್ಲಿ ಪ್ರತಿಯೊಂದು ಧರ್ಮ ಮತ್ತು ಪ್ರತಿಯೊಂದು ಜಾತಿಯ ಯುವಕರು ಸೇರಿದ್ದಾರೆ. ಅವರ ಆಸೆಗಳು, ಅವರ ಆಕಾಂಕ್ಷೆಗಳು ಮತ್ತು ಕನಸುಗಳು ಜಂಗಲ್ ರಾಜ್ ಜನರ ಹಳೆಯ ಕೋಮುವಾದಿ ‘ಎಂವೈ’ ಸೂತ್ರವನ್ನು ಸಂಪೂರ್ಣವಾಗಿ ನಾಶಪಡಿಸಿವೆ…” ಎಂದು ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಈ ಅಂಶವನ್ನು ಒತ್ತಿ ಹೇಳಿದ್ದಾರೆ.


