ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಎನ್ಡಿಎ ತನ್ನ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದ್ದು, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜನತಾದಳ (ಯುನೈಟೆಡ್) ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಭಾನುವಾರ ತಿಳಿಸಿದ್ದಾರೆ.
ಎನ್ಡಿಎ ಸೀಟು ಹಂಚಿಕೆಯ ಸೂತ್ರದ ಭಾಗವಾಗಿ ಇತರ ಎನ್ಡಿಎ ಅಂಗ ಪಕ್ಷಗಳಾದ, ಕೇಂದ್ರ ಸಚಿವ ಚಿರಾಗ ಪಾಸ್ವಾನ ಅವರ ಲೋಕ ಜನಶಕ್ತಿ ಪಾರ್ಟಿ (ರಾಮ ವಿಲಾಸ) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ರಾಷ್ಟ್ರೀಯ ಲೋಕ ಮೋರ್ಚಾ (RLM) ಮತ್ತು ಹಿಂದುಸ್ತಾನಿ ಅವಾಮ್ ಮೋರ್ಚಾ (HAM) ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಕಳೆದ ವರ್ಷ ಹರಿಯಾಣದಲ್ಲಿ ಬಿಜೆಪಿಗೆ ಸತತ ಮೂರನೇ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಹಾರ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ ಅವರು, ಬಿಹಾರದಲ್ಲಿನ ಎನ್ಡಿಎ ಮಿತ್ರಪಕ್ಷಗಳು ಸೀಟು ಹಂಚಿಕೆಯನ್ನು ಸ್ವಾಗತಿಸಿದ್ದು, ಮಾತುಕತೆ ಸೌಹಾರ್ದಯುತ ವಾತಾವರಣದಲ್ಲಿ ನಡೆದಿದೆ ಎಂದು ಹೇಳಿದ್ದಾರೆ.
“ಎನ್ಡಿಎ ಮಿತ್ರಪಕ್ಷಗಳು ಸೌಹಾರ್ದಯುತ ವಾತಾವರಣದಲ್ಲಿ ಸೀಟುಗಳ ಹಂಚಿಕೆಯನ್ನು ಪೂರ್ಣಗೊಳಿಸಿವೆ. ಎನ್ಡಿಎ ಅಂಗಪಕ್ಷಗಳ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಇದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ. ಬಿಹಾರ ಚುನಾವಣೆಗೆ ಸಿದ್ಧವಾಗಿದೆ ಮತ್ತು ಎನ್ಡಿಎ ಸರ್ಕಾರವು ಮತ್ತೆ ರಚನೆಯಾಗಲಿದೆ,” ಎಂದು ಧರ್ಮೇಂದ್ರ ಪ್ರಧಾನ ಟ್ವೀಟ್ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿ(ಯು) (JD(U)) ಬಿಜೆಪಿಯಷ್ಟೇ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲು. ಪ್ರಧಾನ ಅವರ ಈ ಪ್ರಕಟಣೆ, ಎನ್ಡಿಎ ಘಟಕಗಳ ನಡುವಿನ ಸೀಟು ಹಂಚಿಕೆ ಜಟಾಪಟಿಗೆ ತೆರೆ ಎಳೆದಿದೆ. ವಿಶೇಷವಾಗಿ ಕೇಂದ್ರ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ (Jitan Ram Manjhi) ನೇತೃತ್ವದ ಹೆಚ್ಎಎಂ (HAM) ಮತ್ತು ಆರ್ಎಲ್ಎಂ (RLM) ನವೆಂಬರ್ 6 ಮತ್ತು 11 ರಂದು ನಡೆಯಲಿರುವ ಎರಡು ಹಂತದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬೆದರಿಕೆ ಹಾಕಿದ್ದವು.
2020 ರಲ್ಲಿ, ಜೆಡಿ(ಯು) 115 ಸ್ಥಾನಗಳಲ್ಲಿ ಮತ್ತು ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು, ಆದರೆ ಚಿರಾಗ ಪಾಸ್ವಾನ್ ಪಕ್ಷವು ಪ್ರತ್ಯೇಕವಾಗಿ ಸ್ಪರ್ಧಿಸಿತ್ತು.
ಆರಂಭದಲ್ಲಿ ಮಾಂಝಿ ಅವರ ಹೆಚ್ಎಎಂ ಪಕ್ಷವು ಕನಿಷ್ಠ 15 ಸ್ಥಾನಗಳನ್ನು ಕೇಳಿತ್ತು. ನಂತರ ಪಕ್ಷಕ್ಕೆ ಏಳರಿಂದ ಎಂಟು ಸ್ಥಾನಗಳನ್ನು ನೀಡಬಹುದು ಎಂದು ವರದಿಯಾಗಿತ್ತು.
ಭಾನುವಾರ ದೆಹಲಿಯಲ್ಲಿ ಬಿಜೆಪಿ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ಎನ್ಡಿಎ ಸೀಟು ಹಂಚಿಕೆ ಸೂತ್ರಕ್ಕೆ ಮಾಂಝಿ ಒಪ್ಪಿಗೆ ನೀಡಿದ್ದಾರೆ. ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಭವಿಷ್ಯದಲ್ಲಿ ಹೆಚ್ಎಎಂ ಪಕ್ಷಕ್ಕೆ ಒಂದು ಎಂಎಲ್ಸಿ ಸ್ಥಾನ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಸೀಟು ಹಂಚಿಕೆ ವಿಚಾರದಲ್ಲಿ ತನ್ನ ಘಟಕ ಪಕ್ಷಗಳ ಜೊತೆ ಯಾವುದೇ ಬಿರುಕು ಇದೆ ಎಂಬುದನ್ನು ನಿರಾಕರಿಸಿದೆ ಮತ್ತು ಪ್ರತಿ ಪಕ್ಷಕ್ಕೆ ಸೀಟು ಹಂಚಿಕೆಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದೆ. “ಎಲ್ಲವೂ ಚೆನ್ನಾಗಿದೆ ಮತ್ತು ಎಲ್ಲವೂ ಪೂರ್ಣಗೊಂಡಿದೆ. ಸೋಮವಾರ ಪತ್ರಿಕಾಗೋಷ್ಠಿ ಇರಲಿದೆ ಮತ್ತು ಎಲ್ಲವನ್ನೂ ಬಹಿರಂಗಪಡಿಸಲಾಗುವುದು,” ಎಂದು ಆರ್ಜೆಡಿ ಶಾಸಕ ಭಾಯಿ ವಿರೇಂದ್ರ ಹೇಳಿದ್ದಾರೆ.