ಪ್ರಯಾಗರಾಜ್: 12 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಬೃಹತ್ ಧಾರ್ಮಿಕ ಸಮಾಗಮವಾದ ‘ಮಹಾ ಕುಂಭಮೇಳ’ಕ್ಕೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಪುಷ್ಯ ಹುಣ್ಣಿಮೆಯ ಪವಿತ್ರ ದಿನವಾದ ಸೋಮವಾರ ಚಾಲನೆ ಸಿಗಲಿದೆ. ಪುಣ್ಯಸ್ನಾನದೊಂದಿಗೆ ಆರಂಭವಾಗಲಿರುವ ಕುಂಭಮೇಳ ಫೆ.26ರ ಶಿವರಾತ್ರಿಯಂದು 45 ದಿನಗಳ ಬಳಿಕ ಸಂಪನ್ನಗೊಳ್ಳಲಿದೆ.
ಪ್ರಯಾಗರಾಜ್ನಲ್ಲಿ ನಡೆಯುವ ಮಹಾ ಕುಂಭ ಮೇಳದ ವೇಳೆ ಅಯೋಧ್ಯೆಯ ರಾಮಮಂದಿರಕ್ಕೂ ಅಪಾರ ಭಕ್ತರು ಭೇಟಿ ನೀಡುವ ಸಾಧ್ಯತೆ ಇದೆ. ಅಯೋಧ್ಯೆಯಿಂದ ಪ್ರಯಾಗರಾಜ್ 160 ಕಿಮೀ ದೂರದಲ್ಲಿದ್ದು, ರಸ್ತೆ ಮೂಲಕ 4 ಗಂಟೆಗಳ ಪ್ರಯಾಣವಾಗಿದೆ. ಜನವರಿ 13ರಿಂದ ಫೆಬ್ರವರಿ 12ರವರೆಗೆ ಸುಮಾರು ಎರಡೂವರೆ ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಗ್ರಾಜ್ ಮಹಾಕುಂಭಕ್ಕೆ ಭೇಟಿ ನೀಡುವ ಶೇ. 5ರಿಂದ 10ರಷ್ಟು ಭಕ್ತರು ಅಯೋಧ್ಯೆಗೆ ಬರುವ ನಿರೀಕ್ಷೆ ಇದೆ. ಮಹಾಕುಂಭಕ್ಕೆ ಒಟ್ಟಾರೆ 40 ಕೋಟಿ ಜನರ ನಿರೀಕ್ಷೆ ಮಾಡಲಾಗುತ್ತಿದೆ. ಪೌಶ್ ಪೂರ್ಣಿಮಾ (ಜನವರಿ 13)ರಿಂದ ಮಾಘಿ ಪೂರ್ಣಿಮಾ (ಫೆಬ್ರವರಿ 12) ವರೆಗಿನ ಅವಧಿಯಲ್ಲಿ 2.5 ಕೋಟಿಯಿಂದ 3 ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಈ ಬಾರಿಯ ಕುಂಭಮೇಳಕ್ಕೆ ದಾಖಲೆ 35- 40 ಕೋಟಿ ಜನರ ಆಗಮನದ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಅಭೂತಪೂರ್ವ ಸಿದ್ಧತೆಗಳನ್ನು ನಡೆಸಿದೆ. ದೇಶ ವಿದೇಶಗಳಿಂದ ಆಗಮಿಸುವ ಭಕ್ತರಿಗೆ ಎಲ್ಲಾ ಮೂಲಸೌಕರ್ಯ ಒದಗಿಸುವುದರ ಜೊತೆಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಿದೆ.
ಪ್ರಯಾಗ್ರಾಜ್ ನಗರದ ನದಿ ತಟದ ಸಮೀಪದಲ್ಲೇ 10000 ಎಕರೆ ಪ್ರದೇಶದಲ್ಲಿ ಮಹಾಕುಂಭ ನಗರ ಸ್ಥಾಪಿಸಲಾಗಿದ್ದು, ಅಲ್ಲಿ ವಸತಿ, ಶೌಚಾಲಯ, ಚಿಕಿತ್ಸೆ, ಭದ್ರತೆ, ಧಾರ್ಮಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆಯ ಬಳಿಕದ ಮೊದಲ ಕುಂಭವಾಗಿರುವುದರಿಂದ ಇದು ಇನ್ನಷ್ಟು ಮಹತ್ವ ಪಡೆದಿದೆ.
ಪ್ರಯಾಗ್ನಲ್ಲಿ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾಗಮ:
1.5 ತಿಂಗಳಲ್ಲಿ 40 ಕೋಟಿ ಜನರ ಭೇಟಿ ನಿರೀಕ್ಷೆ
45 ದಿನಗಳ ಕಾಲ ನಡೆಯಲಿರುವ ಕುಂಭಮೇಳ
ಮೇಳದಲ್ಲಿ 40 ಕೋಟಿ ಜನರ ಸ್ನಾನ ನಿರೀಕ್ಷೆ
10 ಸಾವಿರ ಎಕರೆ ವಿಸ್ತೀರ್ಣದಲ್ಲಿ ಮಹಾಕುಂಭನಗರ ಸ್ಥಾಪನೆ,
12 ವರ್ಷಕ್ಕೊಮ್ಮೆ ನಡೆಯುತ್ತೆ ಮಹಾಕುಂಭಮೇಳ.
144 ವರ್ಷಗಳಿಗೊಮ್ಮೆ ಜರುಗುವ, ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವವಾದ ‘ಮಹಾ ಕುಂಭ ಮೇಳ’ಕ್ಕೆ ಉತ್ತರ
ಪ್ರದೇಶದ ಪ್ರಯಾಗರಾಜ್ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಲಕ್ಷಾಂತರ ಸಾಧು-ಸಂತರು, ಅಘೋರಿಗಳು ಮತ್ತು ಕೋಟ್ಯಂತರ ಭಕ್ತರು ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯುವ ಈ ‘ಆಧ್ಯಾತ್ಮಿಕ ಮಹಾಸಾಗರ’ದಲ್ಲಿ ಭಕ್ತಿಭಾವದಿಂದ ಮಿಂದೇಳಲಿದ್ದಾರೆ.
2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ, ಅಂದರೆ ಒಟ್ಟು 45 ದಿನಗಳ ಕಾಲ ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಮಹಾಕುಂಭಮೇಳವು ಶತಮಾನದ ಅತಿದೊಡ್ಡ ಧಾರ್ಮಿಕ ಸಮಾರಂಭವಾಗಿದೆ. ಈ ಮಹಾ ಉತ್ಸವದ ಸುಗಮ ನಿರ್ವಹಣೆಗಾಗಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಅಭೂತಪೂರ್ವ ಸಿದ್ಧತೆಗಳನ್ನು ಮಾಡಿದೆ. ಸುಮಾರು 40 ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಸರ್ಕಾರವು ನೂರು ಕೋಟಿ ಜನ ಸೇರುವುದಕ್ಕೆ ಎಷ್ಟು ಸೌಲಭ್ಯಗಳು ಬೇಕೋ ಅಷ್ಟು ಸವಲತ್ತುಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದೆ.
ಸಾಂಸ್ಕೃತಿಕ ವೈವಿಧ್ಯ
ಕುಂಭಮೇಳವು ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯ ಜತೆಜತೆಗೆ ಭಾರತದ ಸಾಂಸ್ಕೃತಿಕ ವೈವಿಧ್ಯವನ್ನು ಕೂಡ ಪ್ರತಿಬಿಂಬಿಸುತ್ತದೆ. ದೇಶದ ವಿವಿಧ ರಾಜ್ಯಗಳ ಜನರು ಮಾತ್ರವಲ್ಲದೆ, ವಿದೇಶಗಳಿಂದಲೂ ಲಕ್ಷಾಂತರ ಮಂದಿ ಆಗಮಿಸಿ ಈ ಮೇಳದಲ್ಲಿ ಭಾಗವಹಿಸುತ್ತಾರೆ. ನಾನಾ ಭಾರತೀಯ ಸಮುದಾಯಗಳ ಜನರು ಇಲ್ಲಿ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುತ್ತಾರೆ.
ಲಕ್ಷಾಂತರ ಟೆಂಟ್ಗಳು
ಗಂಗಾ ನದಿಯ ದಡದಲ್ಲಿ ತಾತ್ಕಾಲಿಕ ಬೃಹತ್ ಟೆಂಟ್ ಸಿಟಿಯನ್ನು ನಿರ್ಮಿಸಲಾಗಿದೆ. ಸುಮಾರು 1.6 ಲಕ್ಷ ಟೆಂಟ್ ಗಳನ್ನು ನಿರ್ಮಿಸಲಾಗುತ್ತಿದೆ.
ಕುಂಭಮೇಳದ ಇತಿಹಾಸ ಪುರಾಣಗಳಲ್ಲಿ ಬೇರೂರಿದೆ.
ಸಮುದ್ರಮಂಥನದ ಸಮಯದಲ್ಲಿ ಅಮೃತದ ಕುಂಭಕ್ಕಾಗಿ ದೇವರುಗಳು ಮತ್ತು ರಾಕ್ಷಸರ ನಡುವೆ ಹೋರಾಟ ನಡೆಯಿತು ಎಂಬುದು ಪ್ರತೀತಿ. ಈ ಹೋರಾಟದಲ್ಲಿ ಅಮೃತದ ಕುಂಭದಿಂದ ನಾಲ್ಕು ಹನಿಗಳು ಭೂಮಿಗೆ ಬಿದ್ದವು ಎಂದು ನಂಬಲಾಗಿದೆ. ಈ ಸ್ಥಳಗಳೇ ಕುಂಭಮೇಳ ನಡೆಯುವ ಹರಿದ್ವಾರ, ಪ್ರಯಾಗ್ರಾಜ್, ಉಜ್ಜಯಿನಿ, ನಾಸಿಕ್. ಈ ನಾಲ್ಕು ಸ್ಥಳಗಳಲ್ಲಿ ಕುಂಭಮೇಳವು ಒಂದು ಚಕ್ರದಲ್ಲಿ ನಡೆಯುತ್ತದೆ. ಪ್ರತಿ ಸ್ಥಳದಲ್ಲಿ 12 ವರ್ಷಗಳಿಗೊಮ್ಮೆ ಪುನರಾವರ್ತನೆಯಾಗುತ್ತದೆ.
ಪ್ರಮುಖ ಅಮೃತ ಸ್ನಾನಗಳು
1. ಮಕರ ಸಂಕ್ರಾಂತಿ ಶಾಹಿ ಸ್ನಾನ (ಜನವರಿ 14/15)
2. ಮೌನಿ ಅಮಾವಾಸ್ಯೆ ಶಾಹಿ ಸ್ನಾನ (ಜನವರಿ 29)
3. ವಸಂತ ಪಂಚಮಿ ಶಾಹಿ ಸ್ನಾನ (ಫೆಬ್ರವರಿ 3)
4. ಮಾಘ ಪೂರ್ಣಿಮೆ ಶಾಹಿ ಸ್ನಾನ (ಫೆಬ್ರವರಿ 12)
5. ಮಹಾ ಶಿವರಾತ್ರಿ ಶಾಹಿ ಸ್ನಾನ (ಫೆಬ್ರವರಿ 26)
ಡಿಜಿಟಲ್ ಸ್ಪರ್ಶ, ಭಕ್ತರ ಹರ್ಷ
ಈ ಸಲದ ಮಹಾ ಕುಂಭ ಮೇಳವು ಆಧ್ಯಾತ್ಮಿಕತೆ ಮತ್ತು ಆಧುನಿಕ ಆವಿಷ್ಕಾರಗಳ ಅಭೂತಪೂರ್ವ ಮಿಶ್ರಣ ಆಗಲಿದೆ. ಕಾರ್ಯಕ್ರಮಗಳ ನಿಗದಿತ ಸ್ಥಳವನ್ನು ಸುಲಭವಾಗಿ ಪತ್ತೆ ಮಾಡಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ಹಿಡಿದು ಭದ್ರತಾ ವ್ಯವಸ್ಥೆಯನ್ನು ಖಾತರಿಪಡಿಸುವವರೆಗೆ ಪ್ರತಿಯೊಂದಕ್ಕೂ ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ.