ಬೆಂಗಳೂರು:ಬಸವಣ್ಣನವರಿಗೆ ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬರೇ ಮಸಿ ಬಳಿದಿಲ್ಲ. ಇಡೀ ಬಿಜೆಪಿ ಪಕ್ಷವೇ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿದೆ. ಯತ್ನಾಳ್ ಇತಿಹಾಸವೇ ಬಿಜೆಪಿ ಇತಿಹಾಸ. ಹೀಗಾಗಿ ಅವರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಪ್ರಶ್ನೆಗಳಿಗೆ ಭಾನುವಾರ ಉತ್ತರಿಸಿದರು.
“ಯತ್ನಾಳ್ ಅವರಂತಹ ಮುತ್ತು ರತ್ನವನ್ನು ಬಿಜೆಪಿಯವರು ತಮ್ಮ ಬಳಿಯೇ ಇಟ್ಟುಕೊಳ್ಳಲಿ. ಇದು ಆ ಪಕ್ಷದ ಆಂತರಿಕ ವಿಚಾರ. ಅದಕ್ಕೆ ನಾವು ತಲೆ ಹಾಕುವುದಿಲ್ಲ. ಯತ್ನಾಳ್ ಹೇಳಿಕೆಯನ್ನು ಯಡಿಯೂರಪ್ಪ, ವಿಜಯೇಂದ್ರ, ಅಶೋಕ, ಕೇಂದ್ರ ಸಚಿವ ಸೋಮಣ್ಣ ಹಾಗೂ ಬೊಮ್ಮಾಯಿ ಅವರ್ಯಾರು ಖಂಡಿಸಿದ್ದಾರೆಯೇ? ಯಾರೂ ಸಹ ಖಂಡಿಸಿಲ್ಲ. ಇದು ಬಿಜೆಪಿ ಬಸವಣ್ಣನವರ ವಿರೋಧಿ ಎಂಬುದನ್ನು ನಿರೂಪಿಸುತ್ತದೆ” ಎಂದು ಹೇಳಿದರು.
“ಬಸವಣ್ಣನವರ ಬಗ್ಗೆ ಹುಚ್ಚರಂತೆ ಮಾತನಾಡಿರುವ ಯತ್ನಾಳ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಅನೇಕ ಮಠಾಧೀಶರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದರು.
“ಬಸವಣ್ಣನವರ ಚಿಂತನೆಯೇ ಕಾಂಗ್ರೆಸ್ ಪಕ್ಷದ ಚಿಂತನೆ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದಾಗ ಬಸವಣ್ಣನವರ ಜಯಂತಿಯಂದೇ ಪ್ರಮಾಣ ವಚನ ತೆಗೆದುಕೊಂಡರು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿದ್ದು, ಬಸವಣ್ಣನವರ ಜಯಂತಿಗೆ ಶಕ್ತಿ ಕೊಟ್ಟಿದ್ದು, ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಯಾವ ಜನತಾದಳ, ಬಿಜೆಪಿ, ಜನಸಂಘವೂ ಈ ಕೆಲಸ ಮಾಡಿಲ್ಲ” ಎಂದರು.
“ನಮ್ಮ ಸಂವಿಧಾನದ ಮೂಲ ಶಕ್ತಿ ಹಾಗೂ ಆಶಯವಾದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಚಿಂತನೆಯನ್ನು ಮೊದಲು ಪ್ರತಿಪಾದಿಸಿದವರು ಬಸವಣ್ಣನವರು. ನಮ್ಮ ಪಕ್ಷದ ಸಿದ್ಧಾಂತಕ್ಕೂ ಬಸವಣ್ಣನವರಿಗೂ ಅವಿನಾಭಾವ ಸಂಬಂಧವಿದೆ ಇದನ್ನು ನಾವು ಉಳಿಸಿ, ಬೆಳೆಸಿ, ರಕ್ಷಣೆ ಮಾಡಿಕೊಂಡು ಹೋಗುತ್ತೇವೆ” ಎಂದು ಹೇಳಿದರು.
ನಿಮ್ಮ ಹಾಗೂ ವಿಜಯೇಂದ್ರ ಅವರ ನಡುವಿನ ಸ್ನೇಹದ ಬಗ್ಗೆ ಹಾಗೂ ಅವರ ಪತ್ರಗಳಿಗೆ ಸಹಿ ಹಾಕಿರುವ ವಿಡಿಯೋಗಳಿದ್ದು, ಅವುಗಳನ್ನು ಬಹಿರಂಗ ಮಾಡುತ್ತೇನೆ ಎಂಬ ಯತ್ನಾಳ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಈ ರಾಜ್ಯದ ಉಪಮುಖ್ಯಮಂತ್ರಿ. ಈ ಹಿಂದೆ ಯಡಿಯೂರಪ್ಪನವರು ಅವರ ಕ್ಷೇತ್ರದ ಕೆಲಸಗಳ ಕುರಿತು ಒಂದಷ್ಟು ಪತ್ರಗಳಿಗೆ ಸಹಿ ಹಾಕಿಸಿಕೊಂಡು ಹೋಗಿದ್ದರು” ಎಂದು ಹೇಳಿದರು.
“ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನನ್ನ ಕ್ಷೇತ್ರದ ಕೆಲಸವನ್ನು ಮಾಡಿಕೊಡುವುದಾಗಿ ಸದನದಲ್ಲಿ ಮಾತು ಕೊಟ್ಟಿದ್ದರು. ಆದರೆ ಮಾಡಿಕೊಟ್ಟಿರಲಿಲ್ಲ. ಆದಕಾರಣ ನಾನೇ ಖುದ್ದಾಗಿ ಭೇಟಿ ಮಾಡಿದ್ದೆ. ನಾನು ಅವರ ಕ್ಷೇತ್ರಕ್ಕೆ ಕೆಲಸ ಮಾಡಿಕೊಡಬಹುದು, ಮುಂದಕ್ಕೂ ಮಾಡಬಹುದು. ಏಕೆಂದರೆ ಅದು ನನ್ನ ಕರ್ತವ್ಯ. ನಾನು ಸಚಿವನಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡುವಾಗ, ಯಾವುದೇ ತಾರತಮ್ಯವಿಲ್ಲದೆ, ಸಂವಿಧಾನದ ಆಶಯಗಳ ಅಡಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣವಚನ ತೆಗೆದುಕೊಂಡಿರುತ್ತೇನೆ” ಎಂದರು.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ನಡುವೆ ಭಿನ್ನಾಭಿಪ್ರಾಯವಿದ್ದರೂ ಅವರು ತೋರಿಸಿಕೊಳ್ಳುತ್ತಿಲ್ಲ. ಆದರೆ ಬಿಜೆಪಿಯ ಜಗಳ ಬೀದಿರಂಪವಾಗಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಎಂದಿಗೂ ವ್ಯಕ್ತಿಗತವಾಗಿ ಹೋಗುವವನಲ್ಲ. ವ್ಯಕ್ತಿ ಪೂಜೆಯನ್ನೂ ಮಾಡುವವನಲ್ಲ. ಬದಲಾಗಿ ಪಕ್ಷದ ಪೂಜೆ ಮಾಡುವವನು. ನಾನು ಇಲ್ಲದೇ ಹೋದರೂ ಪಕ್ಷ ಇದ್ದೇ ಇರುತ್ತದೆ, ಕೊನೆಯದಾಗಿ ಪಕ್ಷವೇ ಮುಖ್ಯ” ಎಂದರು.
ಡಿ.5ರಂದು ಕಾಂಗ್ರೆಸ್ ನೇತೃತ್ವದಲ್ಲೇ ಹಾಸನದಲ್ಲಿ ಸಮಾವೇಶ: ಡಿಸಿಎಂ ಡಿ.ಕೆ. ಶಿವಕುಮಾರ್
“ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲೇ ಡಿ.5ರಂದು ಹಾಸನದಲ್ಲಿ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ನನ್ನ ನೇತೃತ್ವದಲ್ಲಿಯೇ ಕಾಂಗ್ರೆಸ್ ಪಕ್ಷ ವಹಿಸಿಕೊಳ್ಳಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
“ಪಕ್ಷದ ಅನೇಕ ನಾಯಕರು, ಮುಖಂಡರು ಹಾಸನದಲ್ಲಿ ಸಮಾವೇಶ ಮಾಡಲು ತಿಳಿಸಿದ್ದಾರೆ. ನಮ್ಮ ಪಕ್ಷದ ವತಿಯಿಂದ ಸಚಿವರುಗಳು, ಜಿಲ್ಲಾ ಮಂತ್ರಿಗಳು ಸಮಾವೇಶದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಮಾವೇಶಕ್ಕೆ ಅನೇಕ ಸಂಘಟನೆಗಳು ಸಮುದಾಯಗಳು ಬೆಂಬಲ ಸೂಚಿಸಿವೆ. ಇವರ ಬೆಂಬಲವನ್ನು ನಾವು ಸ್ವೀಕರಿಸುತ್ತೇವೆ.
ನಾನು ನಾಲ್ಕು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದೆ. ಮುಖ್ಯಮಂತ್ರಿಗಳು ದೆಹಲಿ ಪ್ರವಾಸದಲ್ಲಿದ್ದರು. ದೇಶದಲ್ಲಾಗುತ್ತಿರುವ ವಿದ್ಯಮಾನ ಹಾಗೂ ಸಂವಿಧಾನ ರಕ್ಷಣೆಗೆ ಕಾರ್ಯಕ್ರಮ ರೂಪಿಸಲು ಎಐಸಿಸಿ ನಾಯಕರು ಮಾರ್ಗದರ್ಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ನಾಲ್ಕು ಜಿಲ್ಲೆಗಳ ನಾಯಕರು ಹಾಗೂ ಪದಾಧಿಕಾರಿಗಳ ಜತೆ ಇದರ ಪೂರ್ವಭಾವಿ ಸಭೆಯನ್ನು ಭಾನುವಾರ (ಇಂದು) ಕೆಪಿಸಿಸಿ ಕಚೇರಿಯಲ್ಲಿ ನಡೆಸಲಾಗಿದೆ. ಸಮಾವೇಶಕ್ಕೆ ಪಕ್ಷದ ಎಲ್ಲಾ ನಾಯಕರಿಗೂ ಆಹ್ವಾನ ನೀಡಲಾಗುವುದು.
ಸಮಾನತೆ, ಸಂವಿಧಾನದ ಬಗ್ಗೆ ಗೌರವ ಹೊಂದಿರುವವರು, ಸ್ವಾಭಿಮಾನಿಗಳಿಗೆ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಸಧ್ಯದಲ್ಲೇ ನಾನು ಹಾಗೂ ಕೆಪಿಸಿಸಿ ತಂಡ ಸಮಾವೇಶ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ತಯಾರಿಯನ್ನು ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಲಾಗುವುದು.
ಜನರ ಕಲ್ಯಾಣ, ಸಂವಿಧಾನ ರಕ್ಷಣೆ, ಸ್ವಾಭಿಮಾನ ರಕ್ಷಣೆ, ಸರ್ಕಾರದ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಮಾಡಲಾಗುತ್ತಿದೆ. ಸರ್ಕಾರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಜನ ಈಗಾಗಲೇ ತೀರ್ಪು ಕೊಟ್ಟಿದ್ದಾರೆ. ಎಐಸಿಸಿ ನಾಯಕರ ನಿರ್ದೇಶನದಂತೆ ಮುಂದಿನ ಎರಡು ತಿಂಗಳ ಕಾಲ ಒಂದಲ್ಲಾ ಒಂದು ರೀತಿ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿನ ಯಶಸ್ಸು ಮುಂದುವರೆಸಿಕೊಂಡು ಹೋಗಲು ಪಕ್ಷ ಸಂಘಟನೆ ಮಾಡಲಾಗುವುದು. ಚುನಾವಣೆ ಬಂದಾಗ ಸಿದ್ಧತೆ ಮಾಡಿಕೊಳ್ಳುವುದಲ್ಲ. ಚುನಾವಣೆ ಮುಗಿದ ಮರು ದಿನದಿಂದಲೇ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು.
ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಪ್ರತಿ ವಿಭಾಗವಾರು ತಲುಪಿಸಲು ಪಕ್ಷವು ತೀರ್ಮಾನ ಮಾಡಿದೆ.
ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲಿಯೇ ಅದನ್ನು ಹುಡುಕಬೇಕು ಎನ್ನುವುದು ನಮ್ಮ ತತ್ವ. ಹಾಸನದಲ್ಲಿ ಒಂದು ವಿಧಾನಸಭಾ ಕ್ಷೇತ್ರವನ್ನು ಗೆದ್ದಿದ್ದೆವು. ಆದರೆ ಲೋಕಸಭೆಯಲ್ಲಿ ಜನ ಶಕ್ತಿ ತುಂಬಿದರು. ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಅತ್ಯಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದ್ದೇವೆ. ಒಂದಷ್ಟು ಕಡೆ ಲೋಕಸಭೆಯಲ್ಲಿ ಸೋತಿದ್ದೇವೆ.
ಶೀಘ್ರದಲ್ಲಿಯೇ ಸಂಡೂರು, ಶಿಗ್ಗಾವಿಯಲ್ಲಿ ಮತದಾರರರಿಗೆ ಕೃತಜ್ಞತಾ ಸಮಾವೇಶವನ್ನು ಆಯೋಜಿಸುವ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಲಾಗಿದೆ. ವಿಧಾನಸಭಾ ಅಧಿವೇಶನ ನಡೆಯುವ ಮಧ್ಯಲ್ಲಿಯೇ ಭಾನುವಾರದಂದು ಚನ್ನಪಟ್ಟಣದಲ್ಲಿ ಅಭಿನಂದನಾ ಸಮಾವೇಶ ಆಯೋಜಿಸುವಂತೆ ಸುರೇಶ್ ಹಾಗೂ ಯೋಗೇಶ್ವರ್ ಅವರಿಗೆ ಸೂಚಿಸಿದ್ದೇವೆ.”
*ಪ್ರಶ್ನೋತ್ತರ*
ಕೆಲ ಸಚಿವರು ಈ ಸಮಾವೇಶಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದು, ಈಗ ಸಮಾವೇಶದ ಸ್ವರೂಪ ಬದಲಾಗಿದ್ದು ಏಕೆ ಎಂದು ಕೇಳಿದಾಗ, “ಈ ಸಮಾವೇಶದ ಸ್ವರೂಪ ಎಲ್ಲಿ ನಿರ್ಧಾರವಾಗಿತ್ತು? ಪಕ್ಷದ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳೇ ಹೊರತು ಮೈತ್ರಿ ಪಕ್ಷದ ಸಿಎಂ ಅಲ್ಲ. ಇಲ್ಲಿ ಒಂದೇ ಪಕ್ಷ, ಒಂದೇ ಚಿಹ್ನೆ ಇದೆ. ಕೆಲವರ ವೈಯಕ್ತಿಕ ಅಭಿಪ್ರಾಯವೇ ಬೇರೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜತೆ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
ಕೆಲ ಸಚಿವರು ಮೈಸೂರು ಜಿಲ್ಲಾಧ್ಯಕ್ಷರ ಜತೆ ಪ್ರತ್ಯೇಕ ಸಭೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಕೊನೆ ಘಳಿಗೆಯಲ್ಲಿ ಈ ಸಭೆ ತೀರ್ಮಾನ ಮಾಡಲಾಗಿದೆ. ನಿನ್ನೆ ದೆಹಲಿಯಿಂದ ಆಗಮಿಸಿ ಮಹಾತ್ಮಾ ಗಾಂಧೀಜಿ ಅವರ ಕಾರ್ಯಕ್ರಮದ ಸಭೆ ಮಾಡಿದ್ದೇನೆ. ನಮ್ಮ ಬಳಿ ಅನುಮತಿ ಪಡೆದೆ ಆ ನಾಯಕರು ಮೈಸೂರಿನಲ್ಲಿ ಸಭೆ ಮಾಡುತ್ತಿದ್ದಾರೆ. ನೀವುಗಳು (ಮಾಧ್ಯಮ ಪ್ರತಿನಿಧಿಗಳು) ನಿಮ್ಮ ಮಾಧ್ಯಮ ಸಂಸ್ಥೆಗಳಿಗಿಂತ ಹೇಗೆ ದೊಡ್ಡವರಲ್ಲವೋ, ಹಾಗೆ ನಾವುಗಳು ಪಕ್ಷಕ್ಕಿಂತ ದೊಡ್ಡವರಲ್ಲ. ಎಲ್ಲರಿಗಿಂತ ಪಕ್ಷ ದೊಡ್ಡದು ಎಂದು ಎಲ್ಲರಿಗೂ ಗೊತ್ತಿದೆ” ಎಂದು ತಿಳಿಸಿದರು.
ಹೈಕಮಾಂಡ್ ಗೆ ಹೋಗಿರುವ ಅನಾಮಧೇಯ ಪತ್ರ ಇಷ್ಟೆಲ್ಲಾ ಕೆಲಸ ಮಾಡಿದೆಯೇ ಎಂದು ಕೇಳಿದಾಗ, “ನನಗೆ ಯಾವ ಪತ್ರದ ಬಗ್ಗೆ ಗೊತ್ತಿಲ್ಲ. ಎಐಸಿಸಿ ಅಧ್ಯಕ್ಷರಿಗೆ ಬರೆಯಲಾಗಿದೆ ಎಂಬ ಪತ್ರ ಯಾರ ಸೃಷ್ಟಿಯೋ ಗೊತ್ತಿಲ್ಲ. ಯಾರೂ ಕೂಡ ನನ್ನ ಬಳಿ ಈ ವಿಚಾರವಾಗಿ ಚರ್ಚೆ ಮಾಡಿಲ್ಲ” ಎಂದು ತಿಳಿಸಿದರು.
ಸಚಿವ ಚಲುವರಾಯಸ್ವಾಮಿ ಅವರು ಸಭೆಯಿಂದ ಬೇಗ ನಿರ್ಗಮಿಸಿದರು ಎಂದು ಕೇಳಿದಾಗ, “ಅವರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯುತ್ತಿದೆ. ಅವರಿಗೆ ಪೂರ್ವನಿಗದಿತ ಕಾರ್ಯಕ್ರಮ ಇದ್ದ ಕಾರಣ ಅವರು ಬೇಗ ಹೊರಟಿದ್ದಾರೆ. ಈ ಸಭೆಯಲ್ಲಿ ಅವರು ಮೊದಲು ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡು ನಂತರ ತೆರಳಿದ್ದಾರೆ” ಎಂದು ತಿಳಿಸಿದರು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ಇದನ್ನು ಮಾಡುತ್ತಿದ್ದೀರಾ ಎಂದು ಕೇಳಿದಾಗ, “ನಾವು ಯಾವುದೋ ಒಂದು ಉದ್ದೇಶ ಇಟ್ಟುಕೊಂಡು ವೇದಿಕೆ ಸಿದ್ಧ ಮಾಡಬೇಕಲ್ಲವೇ. ಚುನಾವಣೆ ಸಧ್ಯದಲ್ಲೇ ನಡೆಯಲಿರುವುದಂತೂ ನಿಜ. ಅದನ್ನು ನಿಲ್ಲಿಸಲು ಆಗುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಫೆಬ್ರವರಿ ವೇಳೆಗೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದರು.
ಈ ಸಮಾವೇಶ ಹಾಸನಕ್ಕೆ ಸೀಮಿತವೇ ಅಥವಾ ರಾಜ್ಯಾದ್ಯಂತ ಮಾಡುತ್ತೀರಾ ಎಂದು ಕೇಳಿದಾಗ, “ನಾವು ರಾಜ್ಯಾದ್ಯಂತ ತಲುಪಬೇಕು. ಹಾಸನ ಕಾರ್ಯಕ್ರಮ ನಂತರ ಬೆಳಗಾವಿಯಲ್ಲಿ ದೊಡ್ಡ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ನಾಳೆ ಸಭೆ ಮಾಡಿ ನಂತರ ಹೆಚ್ಚಿನ ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದರು.
ಫೆಬ್ರವರಿಯಲ್ಲಿ ಸಂಪುಟ ವಿಸ್ತರಣೆ ಆಗುವುದೇ ಎಂದು ಕೇಳಿದಾಗ, “ನಾನು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಹೊರತು, ಮುಖ್ಯಮಂತ್ರಿಯಲ್ಲ. ಸಧ್ಯಕ್ಕೆ ಈ ಬಗ್ಗೆ ಚರ್ಚೆ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ಅಧಿವೇಶನವಿದೆ. ಒಂದು ಸಚಿವ ಸ್ಥಾನ ಮಾತ್ರ ಬಾಕಿ ಇದೆ. ಈ ಬಗ್ಗೆ ಸಿಎಂ ಉತ್ತರ ನೀಡಿದ್ದಾರೆ. ಬೇರೆ ಯಾವುದೇ ಸ್ಥಾನ ಖಾಲಿ ಇಲ್ಲ” ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಖಾಲಿ ಇಲ್ಲ ಎಂದು ಹೇಳುತ್ತಿದ್ದೀರಾ ಎಂದು ಕೇಳಿದಾಗ, “ನಾನು ನನ್ನ ಭಾಷೆಯಲ್ಲಿ ಹೇಳಿದ್ದೇನೆ, ನೀವು ಏನು ವಿಶ್ಲೇಷಣೆ ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ” ಎಂದು ತಿಳಿಸಿದರು.
ನಿಮ್ಮ ಮೂಲಕ ಹೈಕಮಾಂಡ್ ಸಚಿವರ ಕಾರ್ಯಗಳ ಬಗ್ಗೆ ವರದಿ ಪಡೆಯುತ್ತಿದೆ ಎಂದು ಕೇಳಿದಾಗ, “ನಾನು ಕಳಿಸುವುದೇನಿಲ್ಲ. ನಮ್ಮ ಹೈಕಮಾಂಡ್ ನಾಯಕರು ಅವರದೇ ಆದ ವ್ಯವಸ್ಥೆ ಹೊಂದಿದ್ದು, ಎಲ್ಲರ ಮಾಹಿತಿ ಪಡೆಯುತ್ತಿದ್ದಾರೆ. ಯಾರು ಯಾವ ಕೆಲಸ ಮಾಡುತ್ತಿದ್ದಾರೆ, ಕಾರ್ಯಕರ್ತರು, ಜನರನ್ನು ಭೇಟಿ ಮಾಡುತ್ತಿದ್ದಾರೆ ಮಾಹಿತಿ ಪಡೆಯುತ್ತಿದ್ದಾರೆ” ಎಂದು ತಿಳಿಸಿದರು.
ಚಂದ್ರಶೇಖರನಾಥ ಸ್ವಾಮೀಜಿ ಅವರ ಮೇಲೆ ಎಫ್ ಐಆರ್ ಆಗಿದೆ ಎಂದು ಕೇಳಿದಾಗ, “ಮುಖ್ಯಮಂತ್ರಿಗಳು ಈ ಬಗ್ಗೆ ಉತ್ತರ ನೀಡಿದ್ದಾರೆ. ಸ್ವಾಮೀಜಿಗಳು ಯಾರ ಹಕ್ಕಿನ ಬಗ್ಗೆಯೂ ಪ್ರಶ್ನೆ ಮಾಡುವುದು ಬೇಡ ಎಂದು ಮನವಿ ಮಾಡುತ್ತೇನೆ. ಮಾನವ ಧರ್ಮ ಹಾಗೂ ಸಂವಿಧಾನಕ್ಕೆ ಆದ್ಯತೆ ನೀಡೋಣ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಮೇಲೆ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೋಸ್ಟರ್ ಅಂಟಿಸಿದ್ದಕ್ಕೆ ಕೇಸು ದಾಖಲಿಸಿಲ್ಲವೇ?” ಎಂದರು.
ಸ್ವಾಮೀಜಿ ಮೇಲೆ ಕೇಸ್ ದಾಖಲಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಅಶೋಕ ಹೇಳಿದ್ದಾರೆ. ಜೆಡಿಎಸ್ ಸರ್ಕಾರ ಬಾಲಗಂಗಾಧರನಾಥ ಸ್ವಾಮೀಜಿ ಮೇಲೆ ಪ್ರಕರಣ ದಾಖಲಿಸಿದಾಗ ಅಶೋಕ, ಬಿಜೆಪಿ ನಾಯಕರು ಎಲ್ಲಿ ಹೋಗಿದ್ದರು? ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ನಿರ್ಮಲಾನಂದ ಸ್ವಾಮೀಜಿ ಅವರ ಫೋನ್ ಟ್ಯಾಪಿಂಗ್ ಮಾಡಿದಾಗ ಏಕೆ ಮಾತನಾಡಲಿಲ್ಲ? ಈ ಬಗ್ಗೆ ಸಿಬಿಐ ವರದಿ ಇದೆ. ಇದರ ಬಗ್ಗೆ ಗೊತ್ತಿದೆಯೇ? ಅದರ ಬಗ್ಗೆ ಅವರು ಯಾಕೆ ಮಾತನಾಡುತ್ತಿಲ್ಲ. ಸುಮ್ಮನೆ ಒಣ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ. ಬೆಂಕಿ ಹಚ್ಚಿ ಬೀಡಿ ಸೇದುವ ಪ್ರಯತ್ನ ನಿಲ್ಲಿಸಲಿ” ಎಂದು ತಿಳಿಸಿದರು.