ಬೆಳಗಾವಿ : ಮಾನ್ಯ ರಾಜ್ಯಪಾಲರ ಹೆಸರಿನಿಂದ ಇದ್ದ ಜಮೀನು ಕಬಳಿಸಿದ ಪ್ರಕರಣ ಮತ್ತು ಸರ್ಕಾರದ ಆದೇಶವಾಗಿದ್ದರೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಬಿಮ್ಸ್ ಪ್ರಕರಣ ಹಾಗೂ ಸರ್ಕಾರಕ್ಕೆ ಸೇರಿದ 762 ಎಕರೆ 20 ಗುಂಟೆ ಜಮೀನು ನುಂಗಿದ ಭೂಗಳ್ಳರ ಪ್ರಕರಣಗಳನ್ನು ತನಿಖೆ ಮಾಡುವಂತೆ ದಾಖಲೆಗಳ ಸಮೇತವಾಗಿ ಮಾನ್ಯ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ‘ರಾಜ್ಯಪಾಲರ ಹೆಸರಿನಲ್ಲಿದ್ದ ಭೂಕಬಳಿಕೆ, ಖೊಟ್ಟಿ ದಾಖಲೆ ಸಲ್ಲಿಸಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು, ಸರ್ಕಾರಕ್ಕೆ ಸೇರಿದ 762 ಎಕರೆ, 20 ಗುಂಟೆ ಜಮೀನು ಕಬಳಿಸಿದ ಪ್ರಕರಣಗಳ ಕುರಿತು ಲೋಕಾಯುಕ್ತರು ತನಿಖೆ ಮಾಡಿ, ಭ್ರಷ್ಟರಿಗೆ ಶಿಕ್ಷೆ ನೀಡಬೇಕು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಶ್ರಯ ಯೋಜನೆಗಾಗಿ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯಲ್ಲಿ ರಾಜ್ಯಪಾಲರ ಹೆಸರಿನಲ್ಲಿ 6 ಎಕರೆ ಭೂಮಿ ಖರೀದಿಸಲಾಗಿತ್ತು. 2022ರಲ್ಲಿ ಪೋಡಿ ಮತ್ತು ಕ್ಷೇತ್ರ ದುರಸ್ತಿ ವೇಳೆ, ರಾಜ್ಯಪಾಲರ ಹೆಸರಿನಲ್ಲಿ 37 ಗುಂಟೆ ಮಾತ್ರ ದಾಖಲಿಸಿ ಅಂದಿನ ಜಿಲ್ಲಾಧಿಕಾರಿ, ಕಂದಾಯ, ಭೂಮಾಪನ ಇಲಾಖೆಯ ಅಧಿಕಾರಿಗಳು ವಂಚಿಸಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ₹10 ಕೋಟಿ ನಷ್ಟ ಮಾಡಿದ್ದಾರೆ. ಅವರ ವಿರುದ್ಧ 2025ರ ಏಪ್ರಿಲ್ 3ರಂದು ಸರ್ಕಾರಕ್ಕೆ ದೂರು ನೀಡಿದ್ದರೂ ಕ್ರಮವಾಗಿಲ್ಲ’ ಎಂದು ದೂರಿದರು.
‘ಖಾನಾಪುರ ತಾಲ್ಲೂಕಿನ ಜಾಂಬೋಟಿ ಹೋಬಳಿಯ ಹುಳಂದ ಗ್ರಾಮದ ಸರ್ವೆ ಸಂಖ್ಯೆ 3ರಲ್ಲಿ 508 ಎಕರೆ, 20 ಗುಂಟೆ ಜಮೀನಿತ್ತು. ಪಹಣಿ ಪತ್ರಿಕೆಯಲ್ಲಿ ಈ ಭೂಮಿ ಮಾಲೀಕರು ‘ಊರಿನ ಎಲ್ಲಾ ಜನರು’ ಎಂದು ದಾಖಲಾಗಿತ್ತು. ಖಾನಾಪುರ ತಹಶೀಲ್ದಾರ್ 2024ರ ಅ.15ರಂದು ಕಂದಾಯ ನಿಯಮ ಗಾಳಿಗೆ ತೂರಿ ಪಹಣಿಪತ್ರ ತಿದ್ದುಪಡಿ ಮಾಡಿದ್ದಾರೆ. ‘ಊರಿನ ಎಲ್ಲಾ ಜನರು’ ಎಂಬುದನ್ನು ಕಡಿಮೆಗೊಳಿಸಿ ಕರ್ತವ್ಯಲೋಪ ಎಸಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಕೊಟ್ಟರೂ ಕ್ರಮ ಜರುಗಿಸಿಲ್ಲ’ ಎಂದು ಆರೋಪಿಸಿದರು.
‘ರಾಯಬಾಗ ತಾಲ್ಲೂಕಿನ ದೇವನಕಟ್ಟಿ ಗ್ರಾಮದ ಸರ್ವೆ ಸಂಖ್ಯೆ 59ರಲ್ಲಿ 152 ಎಕರೆ, 20 ಗುಂಟೆ ಮತ್ತು ಸರ್ವೆ ಸಂಖ್ಯೆ 79ರಲ್ಲಿ 101 ಎಕರೆ, 20 ಗುಂಟೆ ಜಮೀನು ಕರ್ನಾಟಕ ಸರ್ಕಾರದ ಹೆಸರಿಗೆ ದಾಖಲಾಗಬೇಕಿತ್ತು. ಆದರೆ, ಹಣದ ಆಮಿಷ, ರಾಜಕೀಯ ಒತ್ತಡಕ್ಕೆ ಒಳಗಾದ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಹೆಸರು ದಾಖಲಿಸಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಕಂದಾಯ ಸಚಿವರಿಗೆ ದೂರು ನೀಡಿದ್ದರೂ ಕ್ರಮವಾಗಿಲ್ಲ’ ಎಂದು ದೂರಿದರು.
‘ಬಿಮ್ಸ್ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯೊಬ್ಬರು, ಖೊಟ್ಟಿ ಸೇವಾನುಭವ ಪ್ರಮಾಣಪತ್ರ ನೀಡಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ವಿಚಾರಣೆ ನಡೆದು ತಪ್ಪೆಸಗಿದ್ದು ಖಚಿತವಾದ ನಂತರ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. 2016ರ ಮಾರ್ಚ್ 12ರಿಂದ ಈವರೆಗೆ ಬಿಮ್ಸ್ನಲ್ಲಿ ಪಡೆದ ವೇತನ ಮರುಪಾವತಿ ಮಾಡಿಕೊಳ್ಳುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ–2, 2019ರ ಆ.23ರಂದು ಆದೇಶ ಹೊರಡಿಸಿದ್ದರು. ಆದರೆ, ಈವರೆಗೂ ಬಿಮ್ಸ್ ಅಧಿಕಾರಿಗಳು ಕ್ರಮ ವಹಿಸಿಲ್ಲ’ ಎಂದು ಆಪಾದಿಸಿದರು.