ಬೆಳಗಾವಿ : ಗುರುಪೂರ್ಣಿಮಾ ಸ್ಮರಣಾರ್ಥವಾಗಿ ವೃದ್ಧರಿಗೆ ಭಕ್ತಿ ಸಂಗೀತದ ರಸದೌತಣ ಉಣಬಡಿಸುವ ಉದ್ದೇಶದಿಂದ ನಾದಸುಧಾ ಸುಗಮ ಸಂಗೀತ ಶಾಲೆಯ ಸಂಸ್ಥಾಪಕ ಹಾಗೂ ನಿರ್ದೇಶಕ ಡಾ. ಸತ್ಯನಾರಾಯಣ ಅವರು ಬೆನಕನಹಳ್ಳಿಯಲ್ಲಿರುವ ಘರ್ ಕುಲ್ ವೃದ್ಧಾಶ್ರಮದ ದೇವಸ್ಥಾನದ ಆವರಣದಲ್ಲಿ ಭಜನಾಮೃತ ಭಕ್ತಿ ಸಂಗೀತದ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕನ್ನಡ, ಹಿಂದಿ ಭಕ್ತಿಗೀತೆಗಳು ಹಾಗೂ ಮರಾಠಿ ಅಭಂಗಗಳನ್ನು ನಾದಸುಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಸುಮಧುರ ಹಾಗೂ ಭಕ್ತಿ ಪೂರ್ವಕವಾಗಿ ಸತತ ಎರಡು ಗಂಟೆಗಳ ಕಾಲ ಹಾಡಿ, ನೆರೆದಿದ್ದ ಆಶ್ರಮದ ಮಂಡಳಿ ಸದಸ್ಯರು ಹಾಗೂ ವಯೋವೃದ್ಧರನ್ನು ಮಂತ್ರಮುಗ್ಧರನ್ನಾಗಿಸಿದರು. ಪ್ರತಿಯೊಂದು ಕೃತಿಯ ನಂತರ ಚಪ್ಪಾಳೆಗಳ ಸುರಿಮಳೆಯನ್ನೇ ಹರಿಸುವಂತೆ ಮಾಡಿದರು.
ಪ್ರಾಸಂಗಿಕವಾಗಿ ಇಲ್ಲಿಯವರೆಗೆ ನಾದ ಸುಧಾ ಸಂಗೀತ ಶಾಲೆಯ 16 ವರ್ಷದ ಅವಧಿಯಲ್ಲಿ, ಒಟ್ಟಾರೆ 299 ಕಾರ್ಯಕ್ರಮ ಮುಗಿಸಿ ಈಗ ಇದು 300 ನೇ ಕಾರ್ಯಕ್ರಮ ಆಗಿದ್ದು ಈ ದಿನದ ಭಜನಾಮೃತ ಬಹಳ ಸೊಗಸಾಗಿ ಮೂಡಿ ಬಂತು ಎಂದು ನೆರೆದಿದ್ದ ಪ್ರೇಕ್ಷಕರು ಅಭಿಪ್ರಾಯ ಪಟ್ಟರು.
ಅತಿಥಿಗಳಾಗಿ ಆಗಮಿಸಿದ್ದ ಸಂಗೀತ ವಿದ್ವಾನ್ ಎಂ. ಜಿ. ರಾವ್ ಹಾಗೂ ಸ್ವಾಮಿ ಛಾಯಾ ಪ್ರತಿಷ್ಠಾನ ಕಾರ್ಯದರ್ಶಿ ಎನ್.ಬಿ.ದೇಶಪಾಂಡೆ ಹಾಗೂ ಸಮಿತಿಯ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಎನ್.ಬಿ.ದೇಶಪಾಂಡೆ ಮಾತನಾಡಿ, ಇಂತಹ ಭಜನಾ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಮಾಡಿದರೆ ವಯೋವೃದ್ಧರಲ್ಲಿ ಚೈತನ್ಯ ಮೂಡಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ವಿದ್ವಾನ್ ಎಂ.ಜಿ. ರಾವ್ ಅವರು ನಾದಸುಧಾ ಮಕ್ಕಳು ಹಾಗೂ ಮಾತೆಯರು ಕನ್ನಡ, ಹಿಂದಿ, ಮರಾಠಿ ಕೃತಿಗಳನ್ನು ಬಹಳ ಸೊಗಸಾಗಿ ಪ್ರಸ್ತುತಪಡಿಸಿದರು. ಪ್ರತಿ ಗುರುಪೂರ್ಣಿಮಾ ಸಂದರ್ಭದಲ್ಲಿ ಇದೇ ದೇವಳದ ಆವರಣದಲ್ಲಿ ನಾದಸುಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳೇ ಇಲ್ಲಿ ಬಂದು ಭಕ್ತಿ ಸಂಗೀತದ ಕಾರ್ಯಕ್ರಮ ನೀಡಬೇಕು ಎಂದರು.
ನಾದಸುಧಾ ಸಂಸ್ಥಾಪಕ ಡಾ.ಸತ್ಯನಾರಾಯಣ ಅವರು ಸ್ವಾಗತಿಸಿದರು. ಮಹಾದೇವಿ ಬೆಳಕೂಡ ನಿರೂಪಿಸಿ, ವಂದಿಸಿದರು.