ಉತ್ತಮ ಕೃತಿಗಳ ರಚನೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಪ್ರಭಾವ ಬೀರುವುದು ಒಂದು ಹಂತ; ತನ್ನ ಬರವಣಿಗೆಯ ಮೂಲಕ ಬದುಕಿನ ಇತರ ಕ್ಷೇತ್ರಗಳನ್ನು ಪ್ರಭಾವಿಸಿ ಸಾಮಾಜಿಕ ಬದಲಾವಣೆಗಳಿಗೆ / ಸ್ಥಿತ್ಯಂತರಗಳಿಗೆ ಕಾರಣ ಆಗುವುದು ಇನ್ನೊಂದು ಹಂತ. ಆ ಹಂತವನ್ನು ತಲಪಿದಾಗ ಒಬ್ಬ ಬರಹಗಾರನನ್ನು ಯಶಸ್ವೀ ಬರಹಗಾರ/ಚಿಂತಕ ಎಂದು ಪರಿಗಣಿಸಬಹುದು. ಈ ನೆಲೆಯಿಂದ ಸಾಹಿತಿ, ಚಿಂತಕ ಡಾ. ಎಸ್. ಎಲ್. ಭೈರಪ್ಪ ಅವರನ್ನು ಓರ್ವ ಕ್ರಾಂತಿಕಾರಿ ಲೇಖಕ ಎಂದು ಹೇಳಬಹುದು. ಇಂಥವರ ಬರವಣಿಗೆಯನ್ನು ನೋಡಿಯೇ ‘ಸಾಹಿತ್ಯ ಎಂಬುದು ಸಮಕಾಲೀನ ಇತಿಹಾಸ’ ಎಂಬ ಮಾತು ಹುಟ್ಟಿದೆ ಅನಿಸುತ್ತದೆ.
ಡಾ. ಶಿವರಾಮ ಕಾರಂತರನ್ನು ಬಿಟ್ಟರೆ ‘ರಾಜಗುರು’ ಎಂಬ ಹಂತವನ್ನು ತಲಪಿದವರು ಡಾ. ಎಸ್. ಎಲ್. ಭೈರಪ್ಪ ಅವರು. ಭೈರಪ್ಪ ಅವರು ಯಾವುದೇ ವಿಷಯದ ಬಗ್ಗೆ ಮಾತಾಡಿದರೆ, ಅವರು ಸಮಾಜದ ಪ್ರತಿಧ್ವನಿ ಎಂಬಂತೆ, ಸರಕಾರಗಳು ಆ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದವು. ಯಾವುದೇ ವಿಚಾರವನ್ನು ಆಳವಾಗಿ, ತಲಸ್ಪರ್ಶಿಯಾಗಿ ವಿಶ್ಲೇಷಿಸುವುದು ಭೈರಪ್ಪ ಅವರ ವಿಶೇಷತೆ. ಹಾಗಾಗಿಯೇ ಸಾಹಿತಿ ಎಂಬ ಅವರ ಹೆಸರಿನ ಜೊತೆಗೆ ‘ಚಿಂತಕ’ ಎಂಬ ಉಪಾಧಿಯೂ ಸೇರಿಕೊಂಡಿದೆ.
ಓರ್ವ ಕಾದಂಬರಿಕಾರನಾಗಿ ಡಾ. ಎಸ್. ಎಲ್. ಭೈರಪ್ಪ ಅವರದು ಅತ್ಯಂತ ಯಶಸ್ವೀ ಕಸಬುಗಾರಿಕೆ. ಅವರ ಕಾದಂಬರಿಗಳಾದ ವಂಶವೃಕ್ಷ, ಗೃಹಭಂಗ, ದಾಟು, ಪರ್ವ, ಸಾರ್ಥ ಮೊದಲಾದವುಗಳು ಚಿರಕಾಲ ಉಳಿಯಬಲ್ಲ ಕೃತಿಗಳು. ಭಾರತದ ಎಲ್ಲ ಭಾಷೆಗಳಿಗೆ ಮತ್ತು ವಿದೇಶಗಳ ಎಂಟು ಹತ್ತು ಭಾಷೆಗಳಿಗೆ ಇವು ಅನುವಾದಗೊಂಡಿವೆ.
ಹೆಚ್ಚಾಗಿ ಕಲ್ಪನೆ ಮತ್ತು ಹಗಲುಗನಸಿನ ಲೋಕದಲ್ಲಿ ವಿಹರಿಸುತ್ತಿದ್ದ ಕನ್ನಡದ ಕಾದಂಬರಿ ಪ್ರಕಾರವನ್ನು ವೈಚಾರಿಕ ಮಜಲುಗಳೆಡೆಗೆ ವಿಸ್ತರಿಸಿ ಜ್ಞಾನಮುಖಿಯಾಗಿಸಿದವರು ಎಸ್.ಎಲ್. ಭೈರಪ್ಪನವರು. ತನ್ನ ವೈಚಾರಿಕ ಮಂಥನದ ದೆಸೆಯಿಂದಾಗಿ ಆಳವಾದ ವಿಷಯ ವಿಶ್ಲೇಷಣೆಯ ಮೂಲಕ ಪ್ರಬುದ್ಧ ಓದುಗ ವಲಯವೊಂದನ್ನು ಅವರು ಸೃಷ್ಟಿಸಿಕೊಂಡರು. ಹಾಗಾಗಿ ಅವರ ಬರಹಗಳಿಗೆ ಮೆಚ್ಚುಗೆಯ ಜೊತೆಗೆ ಟೀಕೆಗಳೂ ಕೇಳಿಬಂದವು. ಟೀಕೆಗಳೆಂದರೆ ಶ್ರೀಗಂಧವನ್ನು ತೇಯುವುದು ಎಂದು ಅರ್ಥ.
ತನ್ನ ಕೃತಿಗಳಿಗೆ ಸಮಸಾಮಯಿಕ ವಸ್ತು ವಿಷಯಗಳನ್ನು ಆಯ್ದುಕೊಳ್ಳುತ್ತ, ಅದಕ್ಕೆ ವಾಸ್ತವಿಕತೆಯ ಸ್ಪರ್ಶ ಕೊಡಲು ಸ್ಥಳ ಪರಿಶೀಲನೆ ಮಾಡಿ ಚಾರಿತ್ರಿಕ ಅಧ್ಯಯನ ಕೈಗೊಂಡ ಬಳಿಕವೇ ಬರವಣಿಗೆಗೆ ತೊಡಗುತ್ತಿದ್ದರು. ಚಾರಿತ್ರಿಕ / ಪೌರಾಣಿಕ ವಿಷಯಗಳಾದರೆ ಈ ಕಾಲಕ್ಕೆ ಅದನ್ನು ಸಂಗತಗೊಳಿಸಿ ವಿಷಯ ವಿಶ್ಲೇಷಣೆ ನಡೆಸುತ್ತಿದ್ದರು. ಹಾಗಾಗಿ ಅವರ ಕಾದಂಬರಿಗಳು ಕಲ್ಪನಾ ಲೋಕದ ವಿಹಾರವಾಗದೆ ನಿಜಾರ್ಥದಲ್ಲಿ ಸಮಾಜದ ವಿಶ್ಲೇಷಣೆ ಆಗಿರುತ್ತಿದ್ದವು.
ಭೈರಪ್ಪ ಓರ್ವ ಕಷ್ಟಸಹಿಷ್ಣು ಜೀವಿ. ಬದುಕಿನ ಕುಲುಮೆಯಲ್ಲಿ ಬೆಂದವರು.ಬಡತನದ ಬೇಗೆ ಸಂಕಟಗಳನ್ನು ಸ್ವತಃ ಅನುಭವಿಸಿದವರು. ಅವರ ಬರವಣಿಗೆಯಲ್ಲಿ ಕೃತಕತೆ ಇರಲಿಲ್ಲ. ಬರೆದಂತೆ ಬದುಕಿದವರು ಅಥವಾ ಬದುಕಿದಂತೆ ಬರೆದವರು. ಅವರು ಕನ್ನಡದ ಸಾಕ್ಷಿಪ್ರಜ್ಞೆಯಂತೆ ಇದ್ದರು.
ನಾನು ಎಸ್. ಎಲ್. ಭೈರಪ್ಪ ಅವರನ್ನು ಹತ್ತಿರದಿಂದ ವೈಯಕ್ತಿಕವಾಗಿ ಬಲ್ಲವನು. ನಾನು ಮೈಸೂರು ಆಕಾಶವಾಣಿ ಕೇಂದ್ರದಲ್ಲಿದ್ದಾಗ ಅವರೊಂದಿಗೆ ಒಡನಾಡಿದ ದಿನಗಳು ಈಗಲೂ ಹಸುರಾಗಿವೆ. ಅವರನ್ನು ಚಿಂತನ ಕಾರ್ಯಕ್ರಮಗಳಿಗೆ, ಸಾಹಿತ್ಯದ ಕುರಿತಾದ ಭಾಷಣಗಳಿಗೆ, ಸಂದರ್ಶನಕ್ಕೆ ಆಕಾಶವಾಣಿಗೆ ಹಲವಾರು ಬಾರಿ ಕರೆಸಿಕೊಂಡಿದ್ದೆವು. ಅವರ ಮನೆಗೆ ಕೆಲವು ಸಲ ಭೇಟಿ ಇತ್ತು ಅವರ ಆತಿಥ್ಯ ಸ್ವೀಕರಿಸಿದ್ದೆ. ಸಮಯ ಸಂದರ್ಭ ಸಿಕ್ಕಿದಾಗ ಸಾಹಿತ್ಯದ ಕುರಿತು, ಸಾಹಿತ್ಯಕ್ಷೇತ್ರದ ವಿದ್ಯಮಾನಗಳ ಕುರಿತು ಮಾತಾಡುತ್ತಿದ್ದೆವು.
ಡಾ. ಎಸ್. ಎಲ್. ಭೈರಪ್ಪ ಸಾಹಿತ್ಯಕ್ಷೇತ್ರದ ಓರ್ವ ದಿಗ್ಗಜ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಕಾದಂಬರಿಲೋಕದ ಮಜಲುಗಳನ್ನು ದಿಗಂತದೆತ್ತರಕ್ಕೆ ವಿಸ್ತರಿಸಿದ ಓರ್ವ ಮಹಾನ್ ಲೇಖಕ ಎಂದು ಅವರ ಹೆಸರು ಸ್ಥಾಯಿಯಾಗಲಿದೆ.
-ಡಾ| ವಸಂತಕುಮಾರ ಪೆರ್ಲ