ಬೆಳಗಾವಿ:
ಬೆಳಗಾವಿ ಕೇಂದ್ರಿತವಾಗಿ ಆರಂಭವಾಗಿರುವ ಭಗವದ್ಗೀತೆ ಅಭಿಯಾನವನ್ನು ಯಶಸ್ವಿಗೊಳಿಸಲಾಗುವುದು ಎಂದು ಅಭಿಯಾನದ ರಾಜ್ಯ ಸಮಿತಿಯ ಗೌರವಾಧ್ಯಕ್ಷ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಕಳೆದ 17 ವರ್ಷಗಳಿಂದ ರಾಜ್ಯಾದ್ಯಂತ ಭಗವದ್ಗೀತೆ ಅಭಿಯಾನ ನಡೆಸುತ್ತಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳೊಂದಿಗೆ ಮಂಗಳವಾರ ಸಂಜೆ ಬೆಳಗಾವಿಯಲ್ಲಿ ಚರ್ಚಿಸಿದ ಅವರು, ಅಭಿಯಾನ ಯಾವುದೇ ವಿಘ್ನಗಳಿಲ್ಲದೆ ಯಶಸ್ವಾಗಿ ನಡೆಯಲಿದೆ. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಸ್ವಾಮೀಜಿಗಳ ಮಾರ್ಗದರ್ಶನದಂತೆ ಶ್ಲೋಕ ಪಠಣ, ಪ್ರವಚನ, ವಿಚಾರಸಂಕಿರಣ, ಗೀತಾ ಸಮನ್ವಯ ಕಾರ್ಯಕ್ರಮ ಹಾಗೂ ಮಹಾಸಮರ್ಪಣೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಸುವ್ಯವಸ್ಥಿತವಾಗಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಭಗವದ್ಗೀತೆ ಅಭಿಯಾನದ ಯಶಸ್ಸಿಗೆ ನಮ್ಮ ಸಂಪೂರ್ಣ ತಂಡ ಕೆಲಸ ಮಾಡಲಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಶ್ಲೋಕ ಕೇಂದ್ರಗಳನ್ನು ಆರಂಭಿಸಲಾಗುವುದು. ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಅವರು ತಿಳಿಸಿದರು.
ಭಗವದ್ಗೀತೆ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ.ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್ ಮೊದಲಾದವರು ಇದ್ದರು.