ಬೆಳಗಾವಿ :
ಸ್ವಸ್ಥವಾದ ಮನಸ್ಸಿನ ತಳಹದಿಯ ಮೇಲೆ ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭಾವೈಕ್ಯತೆಯೆಂಬ ನಾಲ್ಕು ಸ್ಥಂಭಗಳನ್ನು ನಿರ್ಮಿಸಿ ಅದರ ಮೇಲೆ ಆದರ್ಶ ಸಮಾಜವೆಂಬ ಭವನ ನಿರ್ಮಿಸುವುದು ಭವದ್ಗೀತಾ ಅಭಿಯಾನದ ಉದ್ದೇಶವಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.
ನಗರದ ಸಂತಮೀರಾ ಶಾಲೆಯ ಮಾಧವ ಸಭಾಗೃಹದಲ್ಲಿ ಮಂಗಳವಾರ ರಾಜ್ಯ ಮಟ್ಟದ ಭವದ್ಗೀತಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಭಗವದ್ಗೀತೆ ಸಮಾಜದಲ್ಲಿ ಹೆಚ್ಚಾಗಿ ಧರ್ಮಗ್ರಂಥವೆಂದು ಪರಿಚಯವಾಗಿದೆ. ಆದರೆ ವಾಸ್ತವದಲ್ಲಿ ಭಗವದ್ಗೀತೆ ಚಿತ್ತಸ್ವಾಸ್ಥ್ಯದ ಗ್ರಂಥವೂ ಆಗಿದೆ. ಪ್ರಾಚೀನ ಭಾರತದಲ್ಲಿ ಯೋಗವು ಚಿತ್ತ ಸ್ವಾಸ್ಥ್ಯದ ಉಪಾಯವಾಗಿತ್ತು. ಈ ಯೋಗವನ್ನು ಭಗವದ್ಗೀತೆ ಹೇಳುತ್ತದೆ ಎಂದರು.
ಭಗವದ್ಗೀತೆಯಲ್ಲಿ ಕರ್ಮ ಯೋಗ, ಜ್ಞಾನ ಯೋಗ, ಭಕ್ತಿಯೋಗ ಮತ್ತು ಧ್ಯಾನ ಯೋಗವು ಸಂಪೂರ್ಣವಾಗಿ ಅಡಕವಾಗಿದೆ. ಈ ನಾಲ್ಕು ಯೋಗಗಳ ಮೂಲಕ ಭಗವದ್ಗೀತೆ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡುವ ಸಂಸ್ಕಾರವನ್ನು ಕೊಡುತ್ತದೆ ಎಂದರು.
ಮನಸ್ಸು ಮತ್ತು ವ್ಯಕ್ತಿತ್ವದ ದೋಷದಿಂದ ಅನೇಕ ದೈಹಿಕ ಹಾಗೂ ಮಾನಸಿಕ ರೋಗಗಳು ಉಂಟಾಗುತ್ತಿವೆ. ವ್ಯಕ್ತಿತ್ವ ವಿಕಸನದ ಮೂಲಕ ಮನಸ್ಸು ಅರಳಬೇಕು. ದೇಶದೆಲ್ಲೆಡೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಆಧ್ಯಾತ್ಮ ಶಕ್ತಿಯಿಲ್ಲದೆ ನೈತಿಕತೆ ಇಲ್ಲ, ಹಾಗಾಗಿ ಜನರಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ತುಂಬಿ ನೈತಿಕತೆಯನ್ನು ಮೇಲೆತ್ತಬೇಕು.
ಭಾಷೆ, ಧರ್ಮ, ಜಾತಿ, ಮತ, ಪಂಥಗಳಲ್ಲಿ ಒಡೆದು ಹೋಗುತ್ತಿರುವ ಸಮಾಜವನ್ನು ಒಗ್ಗೂಡಿಸಲು ಭಗವದ್ಗೀತೆ ಸಹಕಾರಿಯಾಗಿದೆ. ರಾಷ್ಟ್ರೀಯ ಭಾವೈಕ್ಯತೆಗೆ ಸವಾಲಾಗುವ ಸಮಸ್ಯೆಗಳು ಉದ್ಭವವಾಗುತ್ತಲೇ ಇರುವುದು ಕಳವಳಕಾರಿ. ಸುಶಿಕ್ಷಿತರು ಸಹ ಹಿಂಸಾವಾದಕ್ಕೆ ತಿರುಗುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಶಿಕ್ಷಣದಲ್ಲಿ ಸಂಸ್ಕಾರವನ್ನು ತುಂಬಲು ಭಗವದ್ಗೀತೆ ಸಹಕಾರಿಯಾಗುತ್ತದೆ ಎಂದರು.
ಡಿ.23ರಂದು ಮಹಾಸಮರ್ಪಣೆ
2007ರಲ್ಲಿ ಭಗವದ್ಗೀತಾ ಅಭಿಯಾನ ಪ್ರಾರಂಭಗೊಂಡಿದ್ದು ಪ್ರತಿ ವರ್ಷ ಬೇರೆ ಬೇರೆ ಜಿಲ್ಲೆಗಳನ್ನು ಕೇಂದ್ರವಾಗಿರಿಸಿಕೊಂಡು ರಾಜ್ಯಾದ್ಯಂತ ನಡೆಯುತ್ತ ಬರುತ್ತಿದೆ. ಈ ಬಾರಿ ಬೆಳಗಾವಿ ನಗರ ಮತ್ತು ವಿವಿಧ ತಾಲೂಕುಗಳು ಸೇರಿ ಒಂದು ಸಾವಿರಕ್ಕೂ ಹೆಚ್ಚು ಪ್ರವಚನಗಳು ನಡೆಯಲಿವೆ. ಡಿ.22ಕ್ಕೆ ಬೆಳಗಾವಿ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಪ್ರತ್ಯೇಕವಾಗಿ ಸಮಗ್ರ ಗೀತಾ ಪಾರಾಯಣ ನಡೆಯಲಿದೆ. ಡಿ.23ರಂದು ಲಿಂಗರಾಜ ಕಾಲೇಜು ಮೈದಾನಲ್ಲಿ ಸಮರ್ಪಣಾ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಗಳು ವಿವರಿಸಿದರು.
*ಪರಂಪರೆಯ ಪ್ರತೀಕಪರಂಪರೆಯ ಪ್ರತೀಕ*
ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ನಮ್ಮ ದೇಶದ ಇತಿಹಾಸ 5 ಸಾವಿರ ವರ್ಷಕ್ಕೂ ಹಿಂದಿನದು ಎಂದು ಭಾಷಣದಲ್ಲಿ ಹೇಳುತ್ತೇವೆ. ಆದರೆ ಅದಕ್ಕೂ ಮೊದಲಿಂದಲೂ ಭಾರತದಲ್ಲಿ ಭವ್ಯವಾದ ಪರಂಪರೆ ಇತ್ತು. ದೇಶದ ಸಂಸ್ಕೃತಿ ಪರಂಪರೆಯನ್ನು ಇಡೀ ವಿಶ್ವವೇ ಮೆಚ್ಚಿದೆ ಎಂದರು.
ಭಗವದ್ಗೀತೆ ದೇಶದ ಭವ್ಯ ಪರಂಪರೆಯನ್ನು ಎತ್ತಿ ಹಿಡಿಯುವ ಮಹಾನ್ ಗ್ರಂಥವಾಗಿದೆ. ಹಾಗಾಗಿ ಭಗವದ್ಗೀತೆಯ ಅಭಿಯಾನವು ದೇಶದ ಪರಂಪರೆಯ ಅಭಿಯಾನವಾಗಿದೆ ಎಂದರು.
ಸ್ವರ್ಣವಲ್ಲೀ ಶ್ರೀಗಳು ಕಳೆದ 17 ವರ್ಷಗಳಿಂದ ಈ ಅಭಿಯಾನವನ್ನು ನಡೆಸುವ ಮೂಲಕ ಭಗವದ್ಗೀತೆಯ ಮೌಲ್ಯವನ್ನು ಜನ ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗುತ್ತಿರುವುದು ಶ್ಲಾಘನೀಯ. ದೇಶದ ಸಂಸ್ಕತಿಯನ್ನು ಎತ್ತಿ ಹಿಡಿಯುವ ಈ ಅಭಿಯಾನ ಬೆಳಗಾವಿಯಿಂದ ಆರಂಭಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಭಗವದ್ಗೀತೆಯ ಪಠಣವೇ ಜನರನ್ನು ಮಂತ್ರಮುಗ್ಧಗೊಳಿಸುತ್ತದೆ. ಶಾಲಾ ವಿದ್ಯಾರ್ಥಿಗಳು ಅತ್ಯಂತ ಸ್ಪುಟವಾಗಿ ಭಗವದ್ಗೀತೆಯನ್ನು ಪಠಿಸುವುದು ನೋಡಿದಾಗ ಅತ್ಯಂತ ಸಂತಸವಾಗುತ್ತದೆ. ಈ ಮಕ್ಕಳನ್ನು ನೋಡಿದಾಗ ದೇಶಕ್ಕೆ ಭವಿಷ್ಯವಿದೆ ಎಂಬ ಭರವಸೆ ಮೂಡುತ್ತದೆ ಎಂದರು.
ಬದುಕು ಅರಿಯುವ ಗ್ರಂಥ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜನ ಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ಅರವಿಂದರಾವ್ ಜಿ. ದೇಶಪಾಂಡೆ ಮಾತನಾಡಿ, ಭಗವದ್ಗೀತೆಯನ್ನು ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಹೇಳುವ ಉಪದೇಶ. ಆದರೆ ಇಂದು ಪ್ರತಿ ಮನುಷ್ಯನ ಮನಸ್ಸಿನಲ್ಲೂ ಯುದ್ಧ ನಡೆದಿದೆ. ಇದಕ್ಕೆ ಭಗವದ್ಗೀತೆಯಲ್ಲಿ ಉತ್ತರ ಸಿಗುತ್ತದೆ ಎಂದರು.
ಜಗತ್ತಿನ ಅತಿ ಹೆಚ್ಚು ಭಾಷೆಗೆ ತರ್ಜುಮೆಯಾದ ಮತ್ತು ಅತಿ ಹೆಚ್ಚು ವಾಖ್ಯಾನವನ್ನು ಬರೆಯಲ್ಪಟ್ಟ ಏಕೈಕ ಗ್ರಂಥ ಭಗವದ್ಗೀತೆ ಎಂಬುದು ಹೆಮ್ಮೆಯ ಸಂಗತಿ ಎಂದರು.
ಇಂದು ಯುರೋಪ್ ಸೇರಿದಂತೆ ಜಗತ್ತಿನ ಹಲವಾರು ದೇಶಗಳಲ್ಲಿ ಭಗವದ್ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಲಾಗುತ್ತಿದೆ. ಮುಂದೊಂದು ದಿನ ಭಗವದ್ಗೀತೆ ಕಲಿಸಲು ನಮಗೆ ವಿದೇಶದಿಂದ ಶಿಕ್ಷಕರು ಬರುವ ದುರಂತ ಎದುರಾಗಬಾರದು. ನಮ್ಮಲ್ಲೂ ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಕ್ರಮವಾಗಬೇಕು ಎಂದರು.
ಆರ್ಷ ವಿದ್ಯಾ ಕೇಂದ್ರದ ಶ್ರೀ ಚಿತ್ಪ್ರಕಾಶಾನಂದ ಸ್ವಾಮೀಜಿ ಮಾತನಾಡಿ, ಭಗವದ್ಗೀತೆಯ ಅಧ್ಯಯನ ಜತೆಗೆ ಅದರ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಕಾರ್ಯ ಆಗಬೇಕು ಎಂದರು. ಭಗವದ್ಗೀತೆಯ ಒಂದೊಂದು ಶ್ಲೋಕ ಕಿವಿಯಲ್ಲಿ ಬಿದ್ದರೆ ಕೋಟಿ ಯಜ್ಞದ ಪುಣ್ಯ ಲಭಿಸುತ್ತದೆ ಎಂದರು.
ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ,ಭಗವದ್ಗೀತೆ ಎಂದರೆ ಶ್ರೀ ಕೃಷ್ಣನ ವ್ಯಕ್ತಿತ್ವ. ಶ್ರೀ ಕೃಷ್ಣ ಮತ್ತು ಭಗವದ್ಗೀತೆಯನ್ನು ಅರ್ಥ ಮಾಡಿಕೊಂಡರೆ ಸಮಾಜದ ಸಾಮರಸ್ಯ ಸಾಧ್ಯ ಎಂದರು.
ಭಗವದ್ಗೀತೆಯ 10ನೇ ಅಧ್ಯಾಯವನ್ನು ಪಠಣ ಮಾಡಲಾಯಿತು. ಸೋಂದಾ ಶ್ರೀ ಸ್ವರ್ಣವಲ್ಲಿ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಎನ್. ಹೆಗಡೆ, ಶಿಕ್ಷಣ ತಜ್ಞ ಗೋಪಾಲ ಜಿನಗೌಡ ಉಪಸ್ಥಿತರಿದ್ದರು. ಗೀತಾ ಅಭಿಯಾನದ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ ಸ್ವಾಗತಿಸಿದರು. ಸಂಚಾಲಕ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಕಾರ್ಯದರ್ಶಿ ಎಂ.ಕೆ.ಹೆಗಡೆ ಇತರರು ಇದ್ದರು.
*ಅರವಿಂದರಾವ್ ದೇಶಪಾಂಡೆ ನನ್ನ ಗುರು – ಲಕ್ಷ್ಮೀ ಹೆಬ್ಬಾಳಕರ್*
ಜನ ಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಅವರನ್ನು ನಾನು ಸದಾ ನನ್ನ ಗುರುಗಳನ್ನಾಗಿ ಸ್ವೀಕರಿಸಿದ್ದೇನೆ. ಅವರನ್ನು ಇದುವರೆಗೂ ಭೇಟಿಯಾಗಿರಲಿಲ್ಲ, ಮಾತಾಡಿರಲಿಲ್ಲ. ಏಕಲವ್ಯನು ದ್ರೋಣಾಚಾರ್ಯರರನ್ನು ತನ್ನ ಗುರುವನ್ನಾಗಿ ಸ್ವೀಕರಿಸಿದ ಮಾದರಿಯಲ್ಲಿ ನಾನು ಅರವಿಂದರಾವ್ ದೇಶಪಾಂಡೆ ಅವರನ್ನು ಆರಾಧನಾ ಭಾವದಿಂದ ನೋಡುತ್ತ ಬಂದಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.