ಬೆಂಗಳೂರು :
ಬೆಂಗಳೂರನ್ನು ಗ್ಲೋಬಲ್ ನಗರವಾಗಿ ನಿರ್ಮಾಣ ಮಾಡಲು ಪಣತೊಟ್ಟಿರುವ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ಪ್ರದಕ್ಷಣೆ ಹಾಕಿ ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿದ ಪ್ರದೇಶಗಳಲ್ಲಿ ರಾಜಕಾಲುವೆಗಳ ಪರಿಶೀಲನೆ ಮಾಡುವ ಮೂಲಕ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಬಿಡಿಎ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಗುರುವಾರ ಸಭೆ ಮಾಡಿದ ಬಳಿಕ ಬೆಂಗಳೂರು ಪ್ರದಕ್ಷಣೆ ಆರಂಭಿಸಿದ ಡಿಸಿಎಂ ಶಿವಕುಮಾರ್ ಅವರು, ಯಮಲೂರು, ಬೆಳ್ಳಂದೂರು ಕೆರೆ, ಸರ್ಜಾಪುರ ನೆರೆ ಪ್ರದೇಶ, ಗುಂಜೂರು ರಾಜಕಾಲುವೆ ಹಾಗೂ ವರ್ತೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತರಾದ ತುಷಾರ್ ಗುರುನಾಥ್, ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಇದ್ದರು.
ದಿವ್ಯಶ್ರೀ ರಾಜಕಾಲುವೆ ಒತ್ತುವರಿ ಪರಿಶೀಲನೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳ ವಿರುದ್ಧ ಗರಂ ಆದರು.
“12 ಮೀಟರ್ ಇರುವ ರಾಜಕಾಲುವೆ 7 ಮೀಟರ್ ಗೆ ಕಡಿಮೆ ಮಾಡಲಾಗಿರುವುದನ್ನು ಗಮನಿಸಿ, ಈ ರೀತಿ ಆದರೆ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೂಡಲೇ ಇದನ್ನು ತೆರವುಗೊಳಿಸಿ ಕಚ್ಚಾ ಕಾಲುವೆ ನಿರ್ಮಿಸಿ” ಎಂದು
ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣ ಹಾಗೂ ಮಳೆ ಬಂದಾಗ ನೀರು ಎಲ್ಲಿಯೂ ನಿಲ್ಲದೆ ಸರಾಗವಾಗಿ ಸಾಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳ್ಳಂದೂರು ಕೆರೆ ಪ್ರದೇಶಕ್ಕೆ ಭೇಟಿ ನೀಡಿದಾಗ ಸಚಿವರ ಸಮ್ಮುಖದಲ್ಲಿ ಸ್ಲೂಯಿಸ್ ಗೇಟ್ (ತ್ಯಾಜ್ಯ ತಡೆಯುವ ಗೇಟ್) ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಾಗ, “ಮಳೆಗಾಲ ಆರಂಭವಾಗುತ್ತಿದೆ. ಇಷ್ಟು ಹೊತ್ತಿಗೆ ಇದೆಲ್ಲವನ್ನೂ ಸಿದ್ಧಪಡಿಸಿಕೊಳ್ಳಬೇಕಿತ್ತು. ತುರ್ತು ಸಂದರ್ಭದಲ್ಲಿ ಇದನ್ನು ಹೇಗೆ ನಿಭಾಯಿಸುತ್ತೀರಿ” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಆದಷ್ಟು ಬೇಗ ಸ್ಲೂಯಿಸ್ ಗೇಟ್ ಸರಿಪಡಿಸುವಂತೆ ಸೂಚಿಸಿದರು.
ಪ್ರತಿ ವರ್ಷ ನೆರೆಗೆ ಸಿಲುಕುವ ಸರ್ಜಾಪುರದ ಸ್ಥಳಗಳಿಗೆ ಭೇಟಿ ರೇನ್ ಬೋ ಡ್ರೈವ್ ವಿಲ್ಲಾ ಮುಂದಿನ ರಸ್ತೆ ಒಳಚರಂಡಿ ಕಾಮಗಾರಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಮಳೆಗಾಲದಲ್ಲಿ ನೀರು ನಿಲ್ಲುವ ಬಗ್ಗೆ ದೂರು ನೀಡಿದರು.