ಬೆಳಗಾವಿ : ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಚುನಾವಣಾ ಸಾಕ್ಷರತಾ ಕ್ಲಬ್ (ಇ.ಎಲ್.ಸಿ )ಗೆ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ. ಜ. 25ರಂದು ಬೆಳಗಾವಿಯಲ್ಲಿ ನಡೆದ ಹದಿನೈದನೇ ರಾಷ್ಟ್ರೀಯ ಮತದಾರರ ದಿನಾಚರಣೆ-2025ರ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.
ಇದರ ಪ್ರಯುಕ್ತ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಅವರು ಮಾತನಾಡುತ್ತಾ, ಈ ಒಂದು ಚುನಾವಣಾ ಸಾಕ್ಷರತಾ ಕ್ಲಬ್ ಅನ್ನು ಮಹಾವಿದ್ಯಾಲಯದ ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಡಾ. ಮಲ್ಲೇಶ ದೊಡ್ಡ ಲಕ್ಕಣ್ಣವರ ಹಾಗೂ ಪ್ರಕಾಶ ಕಮತಿ ಅವರು ಕಳೆದ ಕೆಲವು ವರ್ಷಗಳಿಂದ ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಪ್ರಶಸ್ತಿ ಕಾಲೇಜಿಗೆ ಬಂದಿರುವುದು ಅತ್ಯಂತ ಸಂತಸ ತಂದಿದೆ ಎಂದು ಅವರನ್ನು ಅಭಿನಂದಿಸಿದರು.
ಕಾಲೇಜಿನ ಒಟ್ಟು ವಿದ್ಯಾರ್ಥಿಗಳ ಮತದಾನದ ಕುರಿತಾದ ಮಾಹಿತಿ, ದತ್ತಾಂಶಗಳನ್ನು ನಮ್ಮ ಕಾಲೇಜಿನ ಇ.ಎಲ್.ಸಿ. ಹೊಂದಿದೆ. ಚುನಾವಣಾ ಸಾಕ್ಷರತದ ಕುರಿತು ವಿಚಾರ ಸಂಕಿರಣ, ಜಾಥಾ ಹಮ್ಮಿಕೊಳ್ಳುತ್ತಾ, ಮಹಾವಿದ್ಯಾಲಯ ತನ್ನ ಕರ್ತವ್ಯವನ್ನು ನಿಭಾಯಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಚುನಾವಣೆ, ಮತದಾನ, ಮತದಾರರ ಕುರಿತು ಸದಾ ಜ್ಞಾನವನ್ನು ನೀಡುತ್ತಿದೆ.
ಜಿಲ್ಲಾ ಆಡಳಿತದೊಂದಿಗೆ ಸ್ಪಂದಿಸುತ್ತಾ, ಕಾಲಕಾಲಕ್ಕೆ ಅವರು ಕೇಳುವ ಎಲ್ಲಾ ಮಾಹಿತಿಗಳನ್ನು ನೀಡುತ್ತಾ ಬಂದಿದ್ದೇವೆ. ಇತ್ತೀಚಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಗಿನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರ ನೇತೃತ್ವದ ಉನ್ನತ ಅಧಿಕಾರಿಗಳ ತಂಡ ನಮ್ಮ ಕಾಲೇಜಿಗೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಮತದಾರರ ವ್ಯವಸ್ಥಿತವಾದ ಮಾಹಿತಿಯ ಸಂಗ್ರಹಣೆಯನ್ನು ಒಳಗೊಂಡ ಪಟ್ಟಿಯನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿರುವುದನ್ನು ಪ್ರಾಚಾರ್ಯರು ನೆನಪಿಸಿಕೊಂಡರು.
ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಡಾ. ಶ್ರೀಕಾಂತ್ ಮುಚ್ಚಂಡಿ ನಿರೂಪಿಸಿದರು, ಶಿವಾನಂದ ಕಾಂಬಳೆ ವಂದಿಸಿದರು.