ಬೆಳಗಾವಿ :ಇಲ್ಲಿನ ಶಾಹುನಗರದ ಯುವತಿ ತನ್ನ ತಾಯಿಯ ಮೊಬೈಲ್ ನಿಂದ ಬೆಂಗಳೂರಿನ ಟಿಸಿಎಸ್ ಕಂಪನಿ ಕಚೇರಿಗೆ ಹುಸಿ ಬಾಂಬ್ ಕರೆ ಮಾಡಿದ್ದರಿಂದ
ಬೆಂಗಳೂರು ಪೊಲೀಸರು ಬೆಳಗಾವಿಗೆ ಆಗಮಿಸಿ ಮೊಬೈಲ್ ಕರೆ ಮಾಡಿದ ಯುವತಿಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದರು.
ಶೃತಿ ಶೆಟ್ಟಿ ಮತ್ತು ಆಕೆಯ ಪೋಷಕರನ್ನು ಪೊಲೀಸರು ವಿಚಾರಿಸಿದ್ದಾರೆ.
ಯುವತಿಯ ತಂದೆ ಬೆಳಗಾವಿ ಮಹಾನಗರ ಪಾಲಿಕೆಯ ಮಾಜಿ ನಗರಸೇವಕರಾಗಿದ್ದಾರೆ.
ಇದೀಗ ಪುತ್ರಿಯ ಹುಸಿ ಬಾಂಬ್ ಕರೆ ಹಿನ್ನೆಲೆಯಲ್ಲಿ ಆಕೆಯ ತಂದೆ- ತಾಯಿಗೆ ಬೆಂಗಳೂರಿಗೆ ಬಂದು ಪೊಲೀಸ್ ತನಿಖೆ ಎದುರಿಸುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಯುವತಿಯನ್ನು ಸಹಾ ಬೆಂಗಳೂರಿಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯುವತಿ ಈ ಮೊದಲು ಈ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿದ್ದು ಯಾವುದೋ ಕಾರಣಕ್ಕೆ ಸಂಬಳ ನೀಡದ ಹಿನ್ನೆಲೆಯಲ್ಲಿ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.