ಸುವರ್ಣ ವಿಧಾನಸೌಧ ಹೊರತುಪಡಿಸಿ ಪ್ರತಿಯೊಂದು ಸೌಲಭ್ಯ ನೆರೆಯ ಹುಬ್ಬಳ್ಳಿ-ಧಾರವಾಡದ ಪಾಲಾಗುತ್ತಿದೆ. ನ್ಯಾಯಯುತವಾಗಿ ಬೆಳಗಾವಿಗೆ ದಕ್ಕಬೇಕಿದ್ದ ಐಐಟಿ, ಏಮ್ಸ್, ಕಾನೂನು ವಿಶ್ವವಿದ್ಯಾಲಯ, ನ್ಯಾಯಾಲಯ ಪೀಠ,ವಂದೇ ಭಾರತ ವೇಗದ ರೈಲು ಸಂಚಾರ ಸೇರಿದಂತೆ ಪ್ರತಿಯೊಂದರಲ್ಲೂ ಬೆಳಗಾವಿಗೆ ಘೋರ ಅನ್ಯಾಯವಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಪ್ರಭಾವಿ ರಾಜಕಾರಣಿಗಳ ಕೊರತೆಯಿಂದ ಸದಾ ಈ ಭಾಗವನ್ನು ಮರೆಯುವ ಜಾಣ ಕುರುಡುತನವನ್ನು ಸರ್ಕಾರ ಅನುಸರಿಸುತ್ತಿದೆ.
ಬೆಳಗಾವಿ :
ಸದಾ ಅಭಿವೃದ್ಧಿಯಿಂದ ಬೆಳಗಾವಿಯನ್ನು ಹೊರಗೆ ಇಡುತ್ತ ಬಂದಿರುವ ರಾಜ್ಯ ಸರ್ಕಾರ ಇದೀಗ ಮತ್ತೊಂದು ಮಹತ್ವದ ಯೋಜನೆಯಿಂದ ಈ ಮಹಾನಗರವನ್ನು ವಂಚಿಸಿದೆ. ಮಹತ್ವಾಕಾಂಕ್ಷಿಯ ಟೆಕ್ ಸಿಟಿ ಯೋಜನೆಯಲ್ಲೂ ಬೆಳಗಾವಿ ಹೆಸರು ನಾಪತ್ತೆಯಾಗಿದ್ದು, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಇದೀಗ ಗಡಿನಾಡಿನ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.
ಬೆಂಗಳೂರು, ಮಂಗಳೂರು, ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಮೈಸೂರುಗಳಲ್ಲಿ ಜ್ಞಾನ ಮತ್ತು ಮಾಹಿತಿ- ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜನ ನೀಡಲು ಈ ಮಹಾನಗರಗಳಲ್ಲಿ ಟೆಕ್ ಸಿಟಿ ಗಳನ್ನು ಯೋಜನಾಬದ್ಧವಾಗಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನವೀನ ತಂತ್ರಜ್ಞಾನ ಬಳಸಿಕೊಂಡು ಈ ಮಹಾನಗರಗಳಲ್ಲಿ ತಂತ್ರಜ್ಞಾನ ನಗರಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ. ಆದರೆ, ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಳಗಾವಿಯನ್ನು ಈ ಪಟ್ಟಿಯಿಂದ ಕೈ ಬಿಟ್ಟಿರುವುದು ಸರ್ಕಾರದ ಘೋರ ಅನ್ಯಾಯದ ಪರಮಾವಧಿ ಎನ್ನಬಹುದು.
*ಹೆಸರಿಗೆ ಮಾತ್ರ ಅಧಿವೇಶನ :*
ಯಾವುದೇ ಪಕ್ಷದ ಆಡಳಿತ ಇರಲಿ, ಬೆಳಗಾವಿಯನ್ನು ಸದಾ ಕಡೆಗಣಿಸಲಾಗುತ್ತದೆ ಎನ್ನುವುದು ಇದೀಗ ಮತ್ತೆ ಸಾಬೀತಾಗಿದೆ.
ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸುವುದು ಮಾತ್ರ ಅಭಿವೃದ್ಧಿಯಲ್ಲ, ಸರಕಾರ ಬೆಳಗಾವಿಗೆ ದೊಡ್ಡ ಕೈಗಾರಿಕೆಗಳನ್ನು ನೀಡಬೇಕು ಎಂದು ನಾಗರಿಕರು, ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಜನರ ಬೇಡಿಕೆ ಮಾತ್ರ ಕಾಗದದಲ್ಲೇ ಉಳಿದುಕೊಂಡು ಬರುತ್ತದೆ.
ಕರ್ನಾಟಕ ಸರ್ಕಾರ ಇದೀಗ ಆರು ಹೊಸ ಹೈಟೆಕ್ ನಗರಗಳನ್ನು ಮತ್ತು ಸ್ಟಾರ್ಟ್ಅಪ್ ಪಾರ್ಕ್ ನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಟೆಕ್ ಶೃಂಗಸಭೆಯ 25 ನೇ ಆವೃತ್ತಿಯಲ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದರು. ಆರು ಹೈಟೆಕ್ ನಗರಗಳ ಹೆಸರು ಘೋಷಣೆ ಮಾಡಿದ್ದಾರೆ. ಆದರೆ, ಇದರಲ್ಲಿ ಪ್ರಮುಖ ನಗರವಾದ ಬೆಳಗಾವಿಯನ್ನು ಮರೆಯಲಾಗಿದೆ.
ಪ್ರತಿ ಬಾರಿಯೂ ಬೆಳಗಾವಿಯನ್ನು ಅಧಿಕಾರದಲ್ಲಿರುವ ಸರ್ಕಾರ ನಿರ್ಲಕ್ಷಿಸುತ್ತದೆ, ಅದು ಬಿಜೆಪಿ, ಕಾಂಗ್ರೆಸ್ ಅಥವಾ ಇನ್ನಾವುದೇ ಪಕ್ಷವೇ ಆಗಿರಬಹುದು. ಇಂಥ ಅನ್ಯಾಯ ಮಾಡುವುದಾದರೂ ಏಕೆ ಎನ್ನುವುದು ಜನರ ಪ್ರಶ್ನೆಯಾಗಿದೆ.
ಎರಡನೇ ರಾಜಧಾನಿಯೆನಿಸಿಕೊಂಡ ದೊಡ್ಡ ನಗರವಾದ ಬೆಳಗಾವಿ, ಒಟ್ಟು INR 159.65 ಶತಕೋಟಿ ಜಿಡಿಪಿಯೊಂದಿಗೆ ರಾಜ್ಯದ ಎರಡನೇ ಅತಿದೊಡ್ಡ ರಫ್ತುದಾರನಾಗಿದೆ. ಜಿಲ್ಲೆಯು ತನ್ನ ಭೂಮಿಯಲ್ಲಿ 48% ಅನ್ನು ಬೇಳೆಕಾಳುಗಳು ಮತ್ತು ಸಿರಿಧಾನ್ಯಗಳು ಪ್ರಮುಖ ಬೆಳೆಗಳ ಕೃಷಿಗೆ ಮೀಸಲಿಟ್ಟಿದೆ. ಬೆಳಗಾವಿಯು ಹಣ್ಣುಗಳು ಮತ್ತು ತರಕಾರಿ ಕೃಷಿಗೆ ಹೆಸರುವಾಸಿಯಾಗಿದೆ. ಈರುಳ್ಳಿ, ಟೊಮೆಟೊ ಮತ್ತು ಆಲೂಗಡ್ಡೆಯಂತಹ ಪ್ರಧಾನ ಪದಾರ್ಥಗಳು ಸೇರಿವೆ. ಭಾರತದ ಮೊದಲ ಏರೋಸ್ಪೇಸ್ ಉತ್ಪಾದನಾ SEZ ಕೇಂದ್ರಕ್ಕೆ ನೆಲೆಯಾಗಿದೆ. ಬೆಳಗಾವಿಯು ಶೇಖರಣಾ/ಶೀತ ಸಂಗ್ರಹಣೆಯ ಮೂಲಸೌಕರ್ಯಕ್ಕಾಗಿ ಉದಯೋನ್ಮುಖ ಕೇಂದ್ರವಾಗಿದ್ದು, ಇಲ್ಲಿನ ಕೃಷಿ ಕ್ಷೇತ್ರ ಮತ್ತು ಸಂಬಂಧಿತ ಕೈಗಾರಿಕೆಗಳನ್ನು ವೃದ್ಧಿಸುತ್ತದೆ.
5 ಮೇ 2022 ರಂತೆ ಸ್ಟಾರ್ಟ್ಅಪ್ ಇಂಡಿಯಾದಲ್ಲಿ ನೋಂದಾಯಿತ ಸ್ಟಾರ್ಟ್ಅಪ್ಗಳ ಕ್ಲಸ್ಟರ್ ವಾರು ವಿವರಗಳು:
ಬೆಳಗಾವಿ: 310 ಸ್ಟಾರ್ಟ್ಅಪ್ಗಳು, ಹುಬ್ಬಳ್ಳಿ-ಧಾರವಾಡ: 233 ಸ್ಟಾರ್ಟ್ಅಪ್ಗಳು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ: 16652 ಸ್ಟಾರ್ಟ್ಅಪ್ಗಳು, ಮೈಸೂರು: 543 ಸ್ಟಾರ್ಟ್ಅಪ್ಗಳು, ಮಂಗಳೂರು: 186 ಸ್ಟಾರ್ಟ್ಅಪ್ಗಳು.
ಸಿಎಂ ಬಸವರಾಜ ಬೊಮ್ಮಾಯಿ ಅವರ ಇತ್ತೀಚಿನ ಹೇಳಿಕೆಗಳಲ್ಲಿ 6 ನಗರಗಳ ಹೆಸರು ಇವೆ. ಆದರೆ ಬೆಳಗಾವಿ ನಾಪತ್ತೆಯಾಗಿದೆ. ಹೀಗೆ ಏಕೆ ? ಬೆಳಗಾವಿಗೆ ಟೆಕ್ ಸಿಟಿಯಾಗುವ ಸಾಮರ್ಥ್ಯ ಇಲ್ಲವೇ ? ಅದಕ್ಕೆ ಮಾನವ ಸಂಪನ್ಮೂಲ ಇಲ್ಲವೇ ?
ಆಡಳಿತ ನಡೆಸುವವರು
ಅನೇಕ ಸಂದರ್ಭಗಳಲ್ಲಿ ಬೆಳಗಾವಿಯನ್ನು ಮಾತ್ರ ನಿರ್ಲಕ್ಷಿಸುತ್ತಾರೆ. ಕಲಬುರಗಿ ಪ್ರದೇಶ ಎಂದರೆ ಕಲಬುರಗಿ.
ಬೆಂಗಳೂರು ಪ್ರದೇಶ ಎಂದರೆ ಬೆಂಗಳೂರು. ಮೈಸೂರು ಪ್ರದೇಶ ಎಂದರೆ ಮೈಸೂರು. ಬೆಳಗಾವಿ ಪ್ರದೇಶ ಎಂದರೆ ಹುಬ್ಬಳ್ಳಿ -ಧಾರವಾಡ !ಎನ್ನುವಂತಾಗಿದೆ.
ಬೆಳಗಾವಿ ಮಹಾನಗರವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತದೆ. ಕಾರಣ ಏನೆಂದರೆ ಬೆಳಗಾವಿ ಗಡಿಯಲ್ಲಿದೆ. ಆದರೆ ಬೆಂಗಳೂರು, ಮೈಸೂರು, ಕಲಬುರಗಿ ಕೇಂದ್ರದಲ್ಲಿವೆಯೇ?
ವಂದೇ ಭಾರತ ಅತಿ ವೇಗದ ರೈಲು, ಏಮ್ಸ್, ಐಐಟಿ ಸೇರಿದಂತೆ ಪ್ರತಿಯೊಂದು ಸೌಲಭ್ಯಗಳನ್ನು ಬೆಳಗಾವಿಯನ್ನು ವಂಚಿಸಲಾಗುತ್ತಿದೆ. ಸರಕಾರದ ದೃಷ್ಟಿಯಲ್ಲಿ ಬೆಳಗಾವಿ ಎಂದಿಗೂ ಮೊದಲ ಆಯ್ಕೆಯಲ್ಲ ಎನ್ನುವುದು ಅತ್ಯಂತ ಬೇಸರದ ಸಂಗತಿ.