ಬೆಳಗಾವಿ : ಕಾಂಗ್ರೆಸ್ ಮಹಾ ಅಧಿವೇಶನದ ಸವಿನೆನಪಿನಲ್ಲಿ ಇದೀಗ ಇಡೀ ದೇಶದ ಕಾಂಗ್ರೆಸ್ಸಿಗರು ಬೆಳಗಾವಿಯತ್ತ ಆಗಮಿಸಿದ್ದಾರೆ. ಬೆಳಗಾವಿ ಸಂಪೂರ್ಣ ಕಾಂಗ್ರೆಸ್ ಮಯಗೊಂಡಿದ್ದು ಎರಡು ದಿನಗಳ ಕಾಲ ನಡೆಯಲಿರುವ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಬೆಳಗಾವಿ ಸಾಕ್ಷಿಯಾಗುತ್ತಿದ್ದು, ಹೊಸ ಇತಿಹಾಸ ಬರೆಯಲು ಮುಂದಾಗಿದೆ.
ಬೆಳಗಾವಿಯಲ್ಲಿ 1924ರ ಡಿಸೆಂಬರ್ 26ರಂದು ಮಧ್ಯಾಹ್ನ 3 ಗಂಟೆಗೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ 39ನೇ ಮಹಾ ಅಧಿವೇಶನ ನಡೆದಿತ್ತು. ಇದರ ಸವಿನೆನಪಿಗೆ ಇಂದು ಮಧ್ಯಾಹ್ನ ಸರಿಯಾಗಿ ಮೂರು ಗಂಟೆಗೆ ಕಾಂಗ್ರೆಸ್ ಪಕ್ಷ ಬೆಳಗಾವಿಯಲ್ಲಿ ಮಹಾ ಅಧಿವೇಶನ ನಡೆಸಲು ಸಜ್ಜಾಗಿದೆ.
ಮಹಾ ಅಧಿವೇಶನಕ್ಕೆ ರಾಜ್ಯದ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವರ ದಂಡೇ ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿ ಠಿಕಾಣಿ ಹೂಡಿದೆ. ಜೊತೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರಮಟ್ಟದ ಅತಿರಥ- ಮಹಾರಥರು ಈಗಾಗಲೇ ಬೆಳಗಾವಿಗೆ ಬಂದಿಳಿದಿದ್ದಾರೆ.
ಬೆಳಗಾವಿ ಈಗ ಸಂಪೂರ್ಣ ಕಾಂಗ್ರೆಸ್ ಮಯಗೊಂಡಿದ್ದು ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಅಧಿವೇಶನದ ಹೆಸರಿನಲ್ಲಿ ಈ ಶತಮಾನೋತ್ಸವದ ಕಾರ್ಯಕ್ರಮವನ್ನು ಚಿರಕಾಲ ನೆನಪಿನಲ್ಲಿ ಇಡಲು ಮುಂದಾಗಿದೆ. ಗುರುವಾರ ಮತ್ತು ಶುಕ್ರವಾರ ನಡೆಯಲಿರುವ ಈ ವೈಭವದ ಕಾರ್ಯಕ್ರಮಕ್ಕೆ ಇಡೀ ಬೆಳಗಾವಿ ನಗರ ಸಜ್ಜಾಗಿದೆ. ನಗರದ ಪ್ರಮುಖ ಬೀದಿಗಳು,ವೃತ್ತಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ದೇಶದೆಲ್ಲೆಡೆಯಿಂದ ಆಗಮಿಸಿರುವ ಕಾಂಗ್ರೆಸ್ ನಾಯಕರ ಸ್ವಾಗತಕ್ಕೆ ಬೆಳಗಾವಿ ಹೊಸ ರೂಪ ಪಡೆದುಕೊಂಡಿದ್ದು ಈ ಅಧಿವೇಶನದ ಮೂಲಕ ಕಾಂಗ್ರೆಸ್ ಪಕ್ಷ ಇದೀಗ ಗತಕಾಲದ ವೈಭವವನ್ನು ಮರುಕಳಿಸಲು ಮುಂದಾಗಿದೆ.
ಒಟ್ಟಾರೆ ಎರಡು ದಿನಗಳ ಕಾಲ ನಡೆಯಲಿರುವ ಬೆಳಗಾವಿ ಕಾಂಗ್ರೆಸ್ ಮಹಾ ಅಧಿವೇಶನ ಐತಿಹಾಸಿಕಗೊಳಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಸಮರೋಪಾದಿಯಲ್ಲಿ ತಯಾರಿ ನಡೆಸಿದ್ದು ಕಾರ್ಯಕ್ರಮದ ಒಟ್ಟು ಯಶಸ್ಸಿಗೆ ಸರಕಾರ ಶಕ್ತಿಮೀರಿ ಶ್ರಮಿಸುತ್ತಿದೆ.