ಬೆಳಗಾವಿ: ಬಾಂಗ್ಲಾದೇಶಕ್ಕೆ ಕಲಿಕೆಗೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಸುಮಾರು 25 ವಿದ್ಯಾರ್ಥಿಗಳು ಕೊನೆಗೂ ಸುರಕ್ಷಿತವಾಗಿ ಬೆಳಗಾವಿಗೆ ಮರಳಿದ್ದಾರೆ. ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ನೆರವು ಪಡೆದು ಎಲ್ಲರೂ ಆಗಮಿಸಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಆಂತರಿಕ ದಂಗೆಯಿಂದ ವಿದ್ಯಾರ್ಥಿಗಳು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದರಿಂದ ಭಯಗೊಂಡಿದ್ದ ಪಾಲಕರು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮತ್ತು ಜಿಲ್ಲಾಡಳಿತದ ಮೊರೆ ಹೋಗಿದ್ದರು. ಸುಮಾರು 25 ವಿದ್ಯಾರ್ಥಿಗಳ ಮಾಹಿತಿಯನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕೇಂದ್ರ ಸರಕಾರಕ್ಕೆ ನೀಡಿದ್ದು ಎಲ್ಲರೂ ಸುರಕ್ಷಿತವಾಗಿ ಭಾರತಕ್ಕೆ ಅದರಲ್ಲೂ ಬೆಳಗಾವಿಗೆ ಮರಳಿದ್ದಾರೆ. ಬಾಂಗ್ಲಾದೇಶದಲ್ಲಿ ಮೊಬೈಲ್ ಟವರ್ ಧ್ವಂಸಗೊಳಿಸಿದ್ದರಿಂದ ಸಂಪರ್ಕ ಸಾಧ್ಯವಾಗಲಿಲ್ಲ, ಗಂಭೀರ ಸ್ವರೂಪ ಪಡೆಯುವ ಲಕ್ಷಣ ಕಂಡುಬಂದಿದ್ದರಿಂದ ದೇಶಕ್ಕೆ ಬಂದಿದ್ದೇವೆ. ನಮ್ಮನ್ನು ಕಾಲೇಜಿನ ಹಾಸ್ಟೆಲ್ ನಲ್ಲೇ ಇರುವಂತೆ ಸೂಚಿಸಲಾಗಿತ್ತು ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ್ದಾರೆ.