ಬೆಳಗಾವಿ :
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ 2014 ರಲ್ಲಿ ಆಡಳಿತಕ್ಕೆ ಏರುತ್ತಿದ್ದಂತೆ ಮಹತ್ವಾಕಾಂಕ್ಷೆಯ
ಸ್ಮಾರ್ಟ್ ಸಿಟಿ ಯೋಜನೆಯನ್ನು ದೇಶಾದ್ಯಂತ ಕೈಗೊಂಡಿತು. ದೇಶದ 100 ನಗರಗಳನ್ನು ಸ್ಮಾರ್ಟ್ ಸಿಟಿ ಮಾಡುವ ಉದ್ದೇಶ ಇಟ್ಟುಕೊಂಡು ಅಂದಿನ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ತಮ್ಮ ಬಿಜೆಪಿ ಸರಕಾರದ ಯೋಜನೆಯನ್ನು ಪ್ರಕಟಿಸಿದರು.
ಈ ಯೋಜನೆಯಡಿ ಹತ್ತು ಹಲವು ಸವಾಲುಗಳನ್ನು
ಎದುರಿಸಿಯೂ ಕೇಂದ್ರ ಸರಕಾರ ಪ್ರಕಟಿಸಿದ ಮೊದಲ 20 ನಗರಗಳ ಪೈಕಿ ಬೆಳಗಾವಿ ಮೊದಲ ಪಟ್ಟಿಯಲ್ಲೇ ಸ್ಮಾರ್ಟ್ ಸಿಟಿ ಯೋಜನೆಗೆ ಅರ್ಹತೆ ಪಡೆದುಕೊಂಡಿದ್ದು ಗತ ಇತಿಹಾಸ.
ಆದರೆ, ಅನಂತರ ಹಲವು ಸವಾಲುಗಳು, ಕಂಟಕಗಳು ಎದುರಾಯಿತು. ಈ ನಡುವೆ ಇಡೀ ಜಗತ್ತನ್ನೇ ವ್ಯಾಪಿಸಿದ ಕೊರೋನಾದಿಂದಾಗಿ
ಸ್ಮಾರ್ಟ್ ಸಿಟಿ ಯೋಜನೆಗೆ ಗ್ರಹಣ ಹಿಡಿಯಿತು.
ಬೆಳಗಾವಿಯಂತೆ ದೇಶದ ಯಾವ ನಗರಗಳು ಪ್ರಗತಿ ಕಾಣಲು ಸಾಧ್ಯವಾಗಲಿಲ್ಲ. ಆದರೆ, ಇದೀಗ ಜಗತ್ತು ಕರೋನಾದಿಂದ ಮುಕ್ತವಾಗಿದೆ. ಬೆಳಗಾವಿ ಇದೀಗ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ದಿನೇದಿನೇ ಸಾಧನೆಯ ಮೈಲುಗಲ್ಲು ಸಾಧಿಸಿರುವುದು ಹೆಮ್ಮೆಯ ಸಂಗತಿ. ಬೆಳಗಾವಿ ಸ್ಮಾರ್ಟ್ ಸಿಟಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಈ ಮೂಲಕ ದೇಶದ ಪ್ರತಿಷ್ಠಿತ ನಗರಗಳನ್ನೇ ಹಿಂದೆ ಸರಿಸಿ ಅಚ್ಚರಿ ಮೂಡಿಸಿದೆ.
ಸ್ಮಾರ್ಟ್ ಸಿಟಿಯು ಪ್ರತಿಷ್ಠಿತ ವಿಶ್ವಸಂಸ್ಥೆ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ಏರ್ಪಡಿಸಿದ ಸರ್ವತೋಮುಖ ನಗರ ಸ್ಪರ್ಧೆಯ ಸ್ಮಾರ್ಟ್ ಸೊಲ್ಯೂಷನ್ಸ್ ಚಾಲೆಂಜ್ 2022 ರಲ್ಲಿ ಅಗ್ರಸ್ಥಾನ ಪಡೆದಿದೆ. ಮುಂಬೈಯಲ್ಲಿ ಜರುಗಿದ ಸ್ಮಾರ್ಟ್ ಅರ್ಬನೇಶನ್ 2022 ಸ್ಪರ್ಧೆಯಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ನಾನಾ ವಿಭಾಗಗಳಲ್ಲಿ 3 ಪ್ರಶಸ್ತಿಗಳನ್ನು ಪಡೆದಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ 384.62 ಕೋಟಿಯ 67 ಕಾಮಗಾರಿಗಳು ಪೂರ್ಣಗೊಂಡಿದೆ.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ 2016 ರಲ್ಲಿ ಪ್ರಾರಂಭವಾಗಿದೆ.
ಈ ಯೋಜನೆಗೆ ಸ್ಮಾರ್ಟ್ ಸಿಟಿ ಮಿಷನ್ ಅಡಿ 930 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಇದುವರೆಗೆ 854 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲಿ 761.21 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಹಿರಿಯ ಐಎಎಸ್ ಅಧಿಕಾರಿ, ಸ್ಮಾಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಬಾಗೇವಾಡಿ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು 103 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದುವರೆಗೆ 384.62 ಕೋಟಿ ರೂ. ಮೊತ್ತದ 67 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 545.38 ಕೋಟಿ ರೂ. ಮೊತ್ತದ 36 ಕಾಮಗಾರಿಗಳು ಪ್ರಗತಿಯಲ್ಲಿವೆ. ಮಹಾತ್ಮ ಫುಲೆ ಉದ್ಯಾನದಲ್ಲಿ ವಿಶೇಷಚೇತನ ಮಕ್ಕಳಿಗಾಗಿ ಫಿಜಿಯೋಥೆರಪಿ ಕೇಂದ್ರ ಅಭಿವೃದ್ಧಿ, ರವೀಂದ್ರ ಕೌಶಿಕ್ ಇ -ಗ್ರಂಥಾಲಯ , ಕಿಡ್ ರೋನ್ , 11 ಪರಿಕಲ್ಪನೆ ಆಧಾರಿತ ಉದ್ಯಾನಗಳ ಅಭಿವೃದ್ಧಿಪಡಿಸಲಾಗಿದೆ.
ಕಣಬರ್ಗಿ ಕೆರೆ ಪುನರುಜೀವನ ,ಇ ಇಂಟಿಗ್ರೇಟೇಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ , 10 ಮತ್ತು 30 ಹಾಸಿಗೆಗಳ ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ಸ್ಟಾರ್ಟ್ ರಸ್ತೆಗಳು ಮುಂತಾದ ಮಹತ್ವದ ಕಾಮಗಾರಿಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಖಾಸಗಿ 211.06 ಕೋಟಿ ರೂ.ನಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಎಲ್ಲಾ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಎಂದು ಅವರು ತಿಳಿಸಿದ್ದಾರೆ.