ಬೆಳಗಾವಿ :
ಬೆಳಗಾವಿ ಶ್ರೀ ಬಸವೇಶ್ವರ ಬ್ಯಾಂಕ್ ಲಿಮಿಟೆಡ್ 60 ವರ್ಷದ ವಜ್ರ ಮಹೋತ್ಸವ ಆಚರಣೆ ಸಂಭ್ರಮದಲ್ಲಿದೆ.
ಶ್ರೀ ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕಿನ ಅರವತ್ತನೇ ವರ್ಷದ ವಜ್ರ ಮಹೋತ್ಸವ ಆಚರಣೆ ಫೆಬ್ರವರಿ 20 ರಂದು ಸಂಜೆ 4:30ಕ್ಕೆ ಶಿವಬಸವ ನಗರ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ನಡೆಯಲಿದೆ. ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಉದ್ಘಾಟಿಸುವರು. ಶ್ರೀ ಬಸವೇಶ್ವರ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಬಸವರಾಜ
ಝೊಂಡ ಅಧ್ಯಕ್ಷತೆ ವಹಿಸುವರು. ಸಂಜೆ 5:30 ರಿಂದ 8 ಗಂಟೆವರೆಗೆ ಪುಣೆಯ ದಿ ಮ್ಯಾಜಿಕ್ ಮೇನ್ ಆಫ್ ಮ್ಯೂಸಿಕ್ ಮೆಲೋಡಿ ಮೇಕರ್ಸ್ ಇವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಇತಿಹಾಸ :
1963 ರಲ್ಲಿ ಹುಟ್ಟಿಕೊಂಡಿರುವ ಶ್ರೀ ಬಸವೇಶ್ವರ ಬ್ಯಾಂಕು ಇದೀಗ ಅತ್ಯಂತ ವೈಭವಯುತವಾಗಿ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ರವಿವಾರಪೇಟೆಯಲ್ಲಿ 1963 ರಲ್ಲಿ 26 ಜನ ಸದಸ್ಯರಿಂದ 20, 400 ರುಪಾಯಿ ಶೇರು ಬಂಡವಾಳದೊಂದಿಗೆ ನೋಂದಾಯಿಸಲ್ಪಟ್ಟಿತು. ಶ್ರೀ ಡಿ ಮರ್ಚಂಟ್ಸ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿಮಿಟೆಡ್ ಹೆಸರಿನಿಂದ ಬ್ಯಾಂಕು ಕಾರ್ಯ ಆರಂಭಿಸಿದ್ದು ಹಳೆಯ ಮೈಸೂರು ಸರಕಾರದ ಆಗಿನ ಆರ್ಥಿಕ ಸಚಿವರಾಗಿದ್ದ ಬಿ.ಡಿ.ಜತ್ತಿ ಉದ್ಘಾಟಿಸಿದ್ದರು. ವಿಧಾನಸಭಾ ಸದಸ್ಯರು ಆಗಿದ್ದ ಚಂದ್ರಪ್ಪಣ್ಣ ಪಟ್ಟಣಶೆಟ್ಟಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರು. ಅವರ ನೇತೃತ್ವದಲ್ಲಿ ಹಿರಿಯರಾದ ಬಸಪ್ಪಣ್ಣ ಕಗ್ಗಣಗಿ, ಬಸವಣ್ಣೆಪ್ಪ ಕಾಡಣ್ಣವರ, ಚಂದ್ರಶೇಖರಣ್ಣ ಹೊಂಡದಕಟ್ಟಿ, ವಿರೂಪಾಕ್ಷಣ್ಣ ಝೊಂಡ, ಶಿವಶಂಕರಣ್ಣ ಕತ್ತಿಶೆಟ್ಟಿ ಅವರಂಥ ಹಿರಿಯರು ಸೇರಿ ನೆಟ್ಟ ಚಿಕ್ಕ ಸಸಿ ಇಂದು ಬೃಹದಾಕಾರದ ಆಲದ ಮರವಾಗಿ ಬೆಳೆದು ನಿಂತಿದೆ.
ಆರಂಭದ ದಿನಗಳಲ್ಲಿ ಗ್ರಾಹಕರಿಲ್ಲದೇ ಇದ್ದರಿಂದ ಠೇವಣಿ ಸಂಗ್ರಹ ಹಾಗೂ ಸಾಲ ನೀಡುವುದು ಸುಲಭ ಸಾಧ್ಯವಿರಲಿಲ್ಲ. ನಂತರ ಸಾರ್ವಜನಿಕ ವಲಯಕ್ಕೆ ಬ್ಯಾಂಕಿಂಗ್ ಸೇವೆ ನೀಡುವ ಉದ್ದೇಶದಿಂದ ಸಾರ್ವಜನಿಕರು ಮತ್ತು ಸದಸ್ಯರ ಒತ್ತಾಯದ ಮೇರೆಗೆ 1977 ರಲ್ಲಿ ಶ್ರೀ ಬಸವೇಶ್ವರ ಬ್ಯಾಂಕ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. ಬ್ಯಾಂಕು ಕೃಷಿ, ವ್ಯಾಪಾರ, ಉದ್ಯೋಗ, ಸ್ವಯಂ ಉದ್ಯೋಗ, ಶಿಕ್ಷಣ ಸೇರಿದಂತೆ ಮಧ್ಯಮ, ದುರ್ಬಲರು ಮತ್ತು ಮಹಿಳೆಯರಿಗೆ ಎಲ್ಲಾ ವಿಧದ ಬ್ಯಾಂಕಿಂಗ್ ಸೌಲಭ್ಯ ಒದಗಿಸುತ್ತಾ ಬಂದಿದೆ.
ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕು 2014ರಲ್ಲಿ ಧಾರವಾಡ, ಬಾಗಲಕೋಟೆ ಜಿಲ್ಲೆಗೆ ವಿಸ್ತರಿಸಲ್ಪಟ್ಟಿತು. 2014-15 ರಲ್ಲಿ ರಾಮದುರ್ಗ ಮತ್ತು ರಾಮ ತೀರ್ಥ ನಗರ ಶಾಖೆ, 2016ರಲ್ಲಿ ಮುಧೋಳ ಮತ್ತು ಹುಬ್ಬಳ್ಳಿಯಲ್ಲಿ ಶಾಖೆ ಆರಂಭಿಸಲಾಯಿತು. ಇಂದು 10 ಶಾಖೆ ಹೊಂದಿದ್ದು ಎಲ್ಲಾ ಶಾಖೆಗಳು ಲಾಭದಾಯಕವಾಗಿ ಮುನ್ನಡೆಯುತ್ತಿವೆ. ಬಸವೇಶ್ವರರ ಹೆಸರಿನಲ್ಲಿರುವ ಕೆಲವು ಬ್ಯಾಂಕುಗಳಲ್ಲಿ ಈ ಸಂಸ್ಥೆಯನ್ನು ಗುರುತಿಸಲು ಬ್ಯಾಂಕಿನ ಹೆಸರನ್ನು ಬೆಳಗಾವಿ ಶ್ರೀ ಬಸವೇಶ್ವರ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಎಂದು 2014ರಲ್ಲಿ ಬದಲಿಸಲಾಯಿತು. ಸಾರ್ವಜನಿಕರ, ಠೇವುದಾರರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಸಾಲಗಾರರು ಸಹ ತಾವು ಪಡೆದ ಸಾಲ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿ ಸಂಸ್ಥೆಯ ಮೇಲೆ ಕಳಕಳಿ ತೋರುತ್ತಿದ್ದಾರೆ. ಬ್ಯಾಂಕಿನಿಂದ ಆರ್ಥಿಕ ಸಹಾಯ ಸೌಲಭ್ಯ ಪಡೆದ ಸದಸ್ಯರು ಆರ್ಥಿಕವಾಗಿ ಶೈಕ್ಷಣಿಕವಾಗಿ ಉನ್ನತಿ ಹೊಂದಿದ್ದಾರೆ ಎನ್ನುವುದು ಹರ್ಷದ ಸಂಗತಿ. ಬ್ಯಾಂಕು ಅರವತ್ತು ವರ್ಷಗಳಿಂದ ಆಡಳಿತ ಮಂಡಳಿಯ ಸಮರ್ಥ ಮತ್ತು ಪಾರದರ್ಶಕ
ನಿಲುವಿನಿಂದ ಉತ್ತಮ ಆಡಳಿತ ನೀಡುತ್ತಾ ಬಂದಿದೆ. ಕಾಲ ಕಾಲಕ್ಕೆ ಯೋಗ್ಯ ಹಾಗೂ ಅಚ್ಚುಕೊಟ್ಟು ನಿರ್ಣಯ ತೆಗೆದು ಕೊಂಡು ಕಾರ್ಯ ರೂಪಕ್ಕೆ ತರುತ್ತದೆ. ಈ ದಿಸೆಯಲ್ಲಿ ಅಧಿಕಾರ ವರ್ಗ ಸಿಬ್ಬಂದಿಯ ಪಾತ್ರ ಅತ್ಯಂತ ಹಿರಿದು. ಬಾಳಪ್ಪ ಕಗ್ಗಣಗಿ ಅವರ ನೇತೃತ್ವದ ನಿರ್ವಹಣ ಮಂಡಳಿ ರಚಿಸಿಕೊಂಡಿದೆ. ವಿಜಯ ಕುಮಾರ ಅಂಗಡಿ, ರಾಜಶೇಖರ ಚೊಣ್ಣದ, ಸೋಮಶೇಖರ್ ಹೊಂಬಾಳ, ಮಹೇಶ ಉಡುದಾರ ಸದಸ್ಯರಾಗಿದ್ದಾರೆ. ಬ್ಯಾಂಕು ಸದ್ಯ ಪ್ರಗತಿಪತದತ್ತ ಮುನ್ನಡೆಯುತ್ತಿರುವ ಯಶಸ್ಸಿನ ಸಂಸ್ಥೆ ಎಂದು ಗುರುತಿಸಲ್ಪಟ್ಟಿದೆ.