ಬೆಳಗಾವಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 8,50,000
ರೂ. ಕಿಮ್ಮತ್ತಿನ ಬಂಗಾರದ ಆಭರಣ, ಒಂದು ಕಾರ್, ಮತ್ತು 2 ಮೋಟರ್ ಸೈಕಲ್ ಜಪ್ತಿ ಮಾಡಿಕೊಂಡಿದ್ದಾರೆ.
ಬೆಳಗಾವಿ :
ಕಳೆದ ಸೋಮವಾರ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಹದ್ದಿಯ ಮಚ್ಛೆ ಗ್ರಾಮದ ಲಕ್ಷ್ಮೀ ನಗರದಲ್ಲಿ ಮನೆ ಮತ್ತು ಕಾರು ಕಳ್ಳತನವಾದ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಸ್.ವಿ.ಗಿರೀಶ, ಎಸಿಪಿ, ಬೆಳಗಾವಿ ಗ್ರಾಮೀಣ ಮತ್ತು ಶ್ರೀನಿವಾಸ ಹಾಂಡ, ಪಿಐ, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಶನಿವಾರ ಮಚ್ಛೆ ಇಂಡಸ್ಟ್ರಿಯಲ್
ಏರಿಯಾದ ಹತ್ತಿರ ಇಬ್ಬರು ಸಂಶಯಾಸ್ಪದ ಆರೋಪಿಗಳಾದ 1) ಕೃಷ್ಣಾ @ ರಾಜು ತಂದೆ ಅಶೋಕ ರಾಮನ್ನವರ, (23) ಸಾ|| ಬಡಾಲ ಅಂಕಲಗಿ ಹಾಲಿ|| ನಾವಗೆ 2) ನಾಗರಾಜ @ ಅಪ್ಪು ತಂದೆ ಸಂಗಪ್ಪ ಬುದ್ಲಿ, (30) ಸಾ|| ರಂಗಧೋಳಿ ತಾ|| ಜಿ|| ಬೆಳಗಾವಿ ಇವರನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿತರು ಬೆಳಗಾವಿ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ -3 ಮನೆಗಳ ಕಳ್ಳತನ ಪ್ರಕರಣ ಮತ್ತು ಎಪಿಎಂಸಿ ಠಾಣೆ-1 ಮತ್ತು ಉದ್ಯಮಬಾಗ ಠಾಣೆಯ 1- ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಆರೋಪಿತರಿಂದ ರೂ.8,50,000 ಮೌಲ್ಯದ ಒಂದು ಕಾರ್, ಎರಡು ಮೋಟರ್ ಸೈಕಲ್ ಗಳು, ಬಂಗಾರ, ಬೆಳ್ಳಿಯ ಆಭರಣಗಳು, ಲ್ಯಾಪ್ ಟಾಪ್ ಹಾಗೂ ಟಿ.ವಿ.ಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದ್ದು, ತನಿಖೆ ಮುಂದುವರಿದಿದೆ.