ಕೆಲವು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಸೊಸೈಟಿ ಠೇವಣಿದಾರರಿಗೆ ಠೇವಣಿಯನ್ನು ಮರುಪಾವತಿಸದೆ ವಂಚಿಸಿತ್ತು. ಇದು ದೊಡ್ಡ ಪ್ರಮಾಣದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನಡೆದ ವಂಚನೆ ಪ್ರಕರಣವಾಗಿ ಸುದ್ದಿಯಾಗಿತ್ತು. ಇದರ ಬೆನ್ನಿಗೆ ಇದೀಗ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲೂ ಪ್ರತಿಷ್ಠಿತ ಸೊಸೈಟಿಯೊಂದು ಗ್ರಾಹಕರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಠೇವಣಿದಾರರ ನೆರವಿಗೆ ಬಂದಿರುವ ಪೊಲೀಸರು ತಪ್ಪಿತಸ್ಥರ ಆಸ್ತಿ ಜಪ್ತಿಗೆ ಮುಂದಾಗಿದ್ದಾರೆ.
ಬೆಳಗಾವಿ : ಗೋಕಾಕ ಮಹಾಲಕ್ಷ್ಮೀ ಅರ್ಬನ್ ಕೋ ಅಪ್ ಬ್ಯಾಂಕಿನ ಹಗರಣದ ಆರೋಪಿಗಳ ವಿರುದ್ದ ಕೊನೆಗೂ ಬೆಳಗಾವಿ ಜಿಲ್ಲಾ ಪೊಲೀಸ್ ಕಠಿಣ ಕ್ರಮಕ್ಕೆ ಮುಂದಾಗಿದೆ. ಸುಮಾರು 74. 89 ಕೋಟಿ ರೂಪಾಯಿ ವಂಚನೆ ನಡೆಸಿರುವುದು ಬಯಲಾಗಿದೆ. ಇದರಲ್ಲಿ ಶಾಮೀಲಾದ ಆರೋಪಿಗಳ ಆಸ್ತಿ ಜಪ್ತಿ ಮಾಡಲಾಗುತ್ತಿದೆ.
ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು, ಠೇವಣಿದಾರರ ಹಿತ ರಕ್ಷಣೆಗೆ ಗೋಕಾಕ ಮಹಾಲಕ್ಷ್ಮಿ ಅರ್ಬನ್ ಕೋ ಅಪ್ ಕ್ರೆಡಿಟ್ ಬ್ಯಾಂಕಿನಲ್ಲಿ ಆಗಿರುವ 74.89 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪಿಗಳ ಕ್ರಮ ಜರುಗಿಸಲಾಗುತ್ತಿದೆ. ಅವರೆಲ್ಲರ ಆಸ್ತಿಯನ್ನು ಜಪ್ತಿ ಮಾಡಲು ತೆಗೆದುಕೊಳ್ಳಲಾಗುತ್ತಿದೆ ಎಂದು ವಂಚಿಸುವವರ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಜೊತೆಗೆ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಏಳು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸಿಬ್ಬಂದಿ ಸಿದ್ದಪ್ಪ ಪವಾರ ತನ್ನ ಸ್ನೇಹಿತರು ಮತ್ತು ಸಂಬಂಧಿಕರ ಹೆಸರಿನಲ್ಲಿ ಬ್ಯಾಂಕಿನಲ್ಲಿ 6.87 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದ. ಅದನ್ನೇ ಆಧಾರವಾಗಿಟ್ಟುಕೊಂಡು ಎಲ್ಲಾ ಆರೋಪಿಗಳು ಬ್ಯಾಂಕಿನಲ್ಲಿ ದೊಡ್ಡ ಪ್ರಮಾಣದ ಸಾಲ ಪಡೆದು ಆ ಹಣದಲ್ಲಿ ಗೋಕಾಕ, ಹುಬ್ಬಳ್ಳಿ, ಚಿಕ್ಕೋಡಿ ಮುಂತಾದ ಕಡೆಗಳಲ್ಲಿ ಆಸ್ತಿಯನ್ನು ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಬ್ಯಾಂಕಿನ ಇತರ ಸಿಬ್ಬಂದಿ ಹಾಗೂ ಠೇವಣಿದಾರರ ಸಹಕಾರದಿಂದ ಈಗ ನಾವು ಆರೋಪಿಗಳ ಒಟ್ಟು 112 ಆಸ್ತಿಗಳನ್ನು ಈಗಾಗಲೇ ಗುರುತಿಸಿದ್ದೇವೆ. ಈ ಆಸ್ತಿ ಮೌಲ್ಯ 13.80 ಕೋಟಿ ರೂಪಾಯಿ. ಮಾರುಕಟ್ಟೆ ಮೌಲ್ಯ 50 ಕೋಟಿಗೂ ರೂ. ಎಂದು ಅವರು ಹೇಳಿದರು.
ನಾವು ಈಗಾಗಲೇ ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಠೇವಣಿದಾರರ ಜೊತೆ ಮಾತುಕತೆ ನಡೆಸಿದ್ದೇವೆ. ವಂಚನೆ ಪ್ರಕರಣ ಬಿಟ್ಟು ಬ್ಯಾಂಕಿನವರು ಗ್ರಾಹಕರಿಗೆ 45 ಕೋಟಿ ರೂ. ಸಾಲ ನೀಡಿದ್ದಾರೆ. ಆರ್ ಬಿ ಐ ಬಳಿ 32 ಕೋಟಿ ರೂ. ಸುರಕ್ಷಿತವಾಗಿ ಇದೆ. ಠೇವಣಿದಾರರಿಗೆ 5 ಲಕ್ಷ ರೂ.ವಿಮೆ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಸಾಲ ಪಾವತಿ ಜೊತೆಗೆ ಆರ್ ಬಿ ಐ ಬಳಿಯ ಹಣ ಬಳಸಿಕೊಂಡು ಠೇವಣಿದಾರರಿಗೆ ಹಣ ಮರು ಪಾವತಿ ಮಾಡಿಕೊಡುವುದಾಗಿ ಬ್ಯಾಂಕಿನ ಆಡಳಿತ ಮಂಡಳಿ ತಿಳಿಸಿದೆ. ಮಾರ್ಗಸೂಚಿಯಂತೆ 10 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆ ಪ್ರಕರಣಗಳನ್ನು ತನಿಖೆಗೆ ಸಿಐಡಿಗೆ ಹಸ್ತಾಂತರಿಸುವಂತೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. ಬ್ಯಾಂಕಿನ ವ್ಯವಸ್ಥಾಪಕ ಸಿದ್ದಪ್ಪ ಪವಾರ, ಸಿಬ್ಬಂದಿಗಳಾದ ಸಾಗರ ಸಬಕಾಳೆ, ವಿಶ್ವನಾಥ ಬಾಗಡೆ,ಸಂಭಾಜಿ ಘೋರ್ಪಡೆ, ದಯಾನಂದ ಉಪ್ಪಿನ, ಸಂಜನಾ ಸಬಕಾಳೆ, ಮಾಲವ್ವ ಸಬಕಾಳೆ, ಗೌರವ್ವಾ ಹವಾಲ್ದಾರ, ಚಂದ್ರವ್ವ ಹವಾಲ್ದಾರ, ಮಾಯವ್ವ ಜಾಧವ, ಪರಸಪ್ಪ ಮಾಲೋಜಿ, ರಾಧಾ ಮಾಲೋಜಿ, ಸಂದೀಪ ಮರಾಠೆ, ಕಿರಣ ಸುಪಲಿ ಅವರು ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು ತಲೆಮರೆಸಿಕೊಂಡಿರುವ ಇವರೆಲ್ಲರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ ಎಂದು ಅವರು ಹೇಳಿದರು.
ವಂಚನೆ ಹಾಗೂ ಹಣಕಾಸು ವಂಚನೆಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಆಸ್ತಿ ಜಪ್ತಿ ಮಾಡಲು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 170 ರ ಅಡಿ ಅವಕಾಶವಿದೆ. ಅದರಂತೆ ಕ್ರಮ ಜರುಗಿಸಲಾಗುತ್ತದೆ. ಮೂರು ವರ್ಷಗಳ ಹಿಂದೆ ಅಂದರೆ 2021 ರಲ್ಲಿ ಈ ಬ್ಯಾಂಕಿನಲ್ಲಿ ವಂಚನೆ ಪ್ರಾರಂಭವಾಗಿದ್ದು 14 ಜನರ ವಿರುದ್ಧ ದೂರು ದಾಖಲಾಗಿದೆ. ಇದರಲ್ಲಿ ಒಂದರಿಂದ ಐದನೇ ಆರೋಪಿಗಳು ಸಿಬ್ಬಂದಿಗಳಾಗಿಯೇ ಇರುವುದು ಗಮನಾರ್ಹ ಸಂಗತಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಡೆಸಿದ ಲೆಕ್ಕ ಪರಿಶೋಧನೆ ವೇಳೆ ವಂಚನೆ ಬೆಳಕಿಗೆ ಬಾರದಂತೆ ಇವರೆಲ್ಲ ಗಮನಹರಿಸಿರುವುದು ಕಂಡುಬಂದಿದೆ. ಲೆಕ್ಕ ಪರಿಶೋಧನೆಗೆ ಬಂದವರಿಗೆ ಬೇರೆಯ ಲೆಕ್ಕವನ್ನು ತೋರಿಸಿದ್ದಾರೆ. ಒಟ್ಟಾರೆ ಇಷ್ಟರಲ್ಲೇ ವಂಚನೆ ಮಾಡಿದವರನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಅವರು ತಿಳಿಸಿದರು.
ವಾರದ ಹಿಂದೆ ಬೆಳಕಿಗೆ ಬಂದ ಗೋಕಾಕ ಬ್ಯಾಂಕ್ ವಂಚನೆ : ಗೋಕಾಕ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನಲ್ಲಿ ₹74.89 ಕೋಟಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಬ್ಯಾಂಕಿನ 14 ಸಿಬ್ಬಂದಿ ವಿರುದ್ಧ ಅಧ್ಯಕ್ಷ ಜಿತೇಂದ್ರ ಬಾಳಾಸಾಹೇಬ ಮಾಂಗಳೇಕರ ಶಹರ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ತಮ್ಮ ಠೇವಣಿ ಮೊತ್ತ ವಾಪಸ್ ನೀಡುವಂತೆ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ಬ್ಯಾಂಕ್ ಎದುರು ಜಮಾಯಿಸಿ ಬೇಸರ ವ್ಯಕ್ತಪಡಿಸಿದ್ದರು.
ಸಾಗರ ಹನಮಂತ ಸಬಕಾಳೆ, ವಿಶ್ವನಾಥ ಅಶೋಕ ಬಾಗಡೆ, ಸಂಭಾಜಿ ಮಲ್ಲಪ್ಪ ಘೋರ್ಪಡೆ, ಸಿದ್ದಪ್ಪ ಸದಾಶಿವ ಪವಾರ (ವ್ಯವಸ್ಥಾಪಕ), ದಯಾನಂದ ಶಿವಾಜಿ ಉಪ್ಪಿನ, ಸಂಜನಾ ಸಾಗರ ಸಬಕಾಳೆ, ಮಾಲವ್ವ ಹಣಮಂತ ಸಬಕಾಲೆ, ಗೌರವ್ವ ಬಾಳಪ್ಪ ಹವಾಲ್ದಾರ, ಚಂದ್ರವ್ವ ಹವಾಲ್ದಾರ, ಮಾಯವ್ವ ಮಾಯಪ್ಪ ಜಾಧವ, ಪರಸಪ್ಪ ಯಲ್ಲಪ್ಪ ಮಾಲೋಜಿ, ರಾಧಾ ಪರಸಪ್ಪ ಮಾಲೋಜಿ, ಸಂದೀಪ ಬಸವರಾಜ ಮರಾಠ ಮತ್ತು ಕಿರಣ ಸಕಾರಾಮ ಸುಪಲಿ ಮತ್ತಿತರರ ವಿರುದ್ಧ ದೂರು ದಾಖಲಾಗಿತ್ತು.