ಬೆಂಗಳೂರು :
ಕರ್ನಾಟಕದಲ್ಲಿ ಜೈನ ಮುನಿ ಕಾಮಕುಮಾರ ನಂದಿಮಹಾರಾಜ ಭೀಕರ ಹತ್ಯೆ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಈ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಘೋಷಣೆ ಮಾಡಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಕಲಾಪದಲ್ಲಿ ಈ ಕುರಿತು ಘೋಷಣೆ ಮಾಡಿದರು. ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತದೆ ಎಂದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಸದ್ಯ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಜೈನ ಮುನಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ 1 ನಾರಾಯಣ ಮಾಳಿ ಮತ್ತು ಆರೋಪಿ 2 ಹಸನ್ ಸಾಬ್ರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸೂಕ್ಷ್ಮವಾಗಿರುವುದರಿಂದ, ಸಾರ್ವಜನಿಕರ ಕೋರಿಕೆಯ ಮೇರೆಗೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೇಕೊಡಿ ನಂದಿ ಪರ್ವತದಲ್ಲಿರುವ ಆಶ್ರಮದಲ್ಲಿ ಜೈನ ಮುನಿ ಕಾಮಕುಮಾರ ನಂದಿಮಹಾರಾಜರನ್ನು ಹತ್ಯೆ ಮಾಡಲಾಗಿತ್ತು. ಶವವನ್ನು ತುಂಡು ತುಂಡು ಮಾಡಿ, ಕಬ್ಬಿನ ಗದ್ದೆಯಲ್ಲಿನ ಕೊಳವೆ ಬಾವಿಗೆ ಎಸೆದಿದ್ದರು.
ಜೈನಮನಿ ಹತ್ಯೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಬಿಜೆಪಿ, ಜೆಡಿಎಸ್ ಹಾಗೂ ವಿವಿಧ ಸಂಘಟನೆಗಳು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದವು.