ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರಮೋಚ್ಚ ನಾಯಕ ರಾಹುಲ್ ಗಾಂಧಿ ಅವರನ್ನು ಕರ್ನಾಟಕ ಪ್ರವೇಶ ಮಾಡಿಕೊಳ್ಳಲು ಬೆಳಗಾವಿ ಸಜ್ಜಾಗಿದೆ. ಇಡೀ ಕುಂದಾ ನಗರಿ ಇದೀಗ ಕಾಂಗ್ರೆಸ್ ಪಕ್ಷದ ತಳಿರು ತೋರಣಗಳಿಂದ ಶೃಂಗಾರಗೊಂಡಿದೆ. ನಗರದಲ್ಲಿ ರಾಹುಲ್ ಗಾಂಧಿಯವರ ಆಳೆತ್ತರದ ಕಟೌಟ್ ಗಳು ಕಣ್ಣು ಕುಕ್ಕಿಸುವಂತಿವೆ. ಒಟ್ಟಾರೆ ಇಡೀ ಬೆಳಗಾವಿ ಮಹಾನಗರ ಇದೀಗ ರಾಹುಲ್ ಮಯಗೊಂಡಿದ್ದು ಮದುವಣಗಿತ್ತಿಯಂತೆ ಅಲಂಕೃತಗೊಂಡಿದೆ. ರಾಹುಲ್ ಗಾಂಧಿ ಅವರ ಭಾಷಣವನ್ನು ಹತ್ತಿರದಿಂದ ಆಲಿಸಲು ಕಾಂಗ್ರೆಸ್ ಕಾರ್ಯಕರ್ತರು ತುದಿಗಾಲಲ್ಲಿ ನಿಂತಿದ್ದಾರೆ.
ಬೆಳಗಾವಿ : ಕಾಂಗ್ರೆಸ್ ಅಧಿನಾಯಕ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ಅವರು ಇಂದು ಬೆಳಗಾವಿಯಲ್ಲಿ ಯುವಕ್ರಾಂತಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ನಗರದ ಸಿಪಿಎಡ್ ಮೈದಾನದಲ್ಲಿ ಲಕ್ಷಾಂತರ ಯುವಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಿರುವ ಕರ್ನಾಟಕ ಕಾಂಗ್ರೆಸ್ ಇದನ್ನು ಐತಿಹಾಸಿಕ ಸಮಾವೇಶವನ್ನಾಗಿಸಲು ಕೆಲದಿನಗಳಿಂದ ಹಗಲು ರಾತ್ರಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಇಂದು ಮಧ್ಯಾಹ್ನ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಕುಂದಾನಗರಿ ಕಾಂಗ್ರೆಸ್ ಪಕ್ಷದ ಪಾಲಿಗೆ ಹೊಸ ಇತಿಹಾಸವನ್ನೇ ಸೃಷ್ಟಿಸಲಿದೆ. ಬೆಂಗಳೂರು ಬಿಟ್ಟರೆ ಬೆಳಗಾವಿ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಹೀಗಾಗಿ ಕಾಂಗ್ರೆಸ್ ಗತವೈಭವ ಮತ್ತೆ ಮರುಕಳಿಸುವ ನಿಟ್ಟಿನಲ್ಲಿ ಬೆಳಗಾವಿ ಸಮಾವೇಶದ ಮೂಲಕ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆಯಲು ಮುಂದಾಗಿದೆ.
ಕರ್ನಾಟಕ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಈ ಸಮಾವೇಶವನ್ನು ಅತ್ಯಂತ ಯೋಜಿತ ಹಾಗೂ ಅಚ್ಚುಕಟ್ಟಾಗಿ ನಡೆಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದ್ದು ಈ ಸಮಾವೇಶದ ಮೂಲಕ ರಾಹುಲ್ ಗಾಂಧಿ ಅವರು ನಾಡಿನ ಜನತೆಗೆ ಹೊಸ ಸಂದೇಶವನ್ನು ನೀಡಲಿದ್ದಾರೆ.
ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಅತಿರಥ ಮಹಾರಥರು ಇಂದಿನ ಈ ಮಹತ್ವದ ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ.
ಬೆಳಗಾವಿ ಸಮಾವೇಶದ ಹಿನ್ನೆಲೆಯಲ್ಲಿ ಕುಂದಾ ನಗರಿ ಇದೀಗ ಸಂಪೂರ್ಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಘಟಾನುಘಟಿ ಕಾಂಗ್ರೆಸ್ ನಾಯಕರ ಆಳೆತ್ತರದ ಕಟೌಟ್ ಗಳು ಕಣ್ಣು ಕುಕ್ಕಿಸುವ ರೀತಿಯಲ್ಲಿ ಅನಾವರಣಗೊಂಡಿವೆ. ಯುವ ಕ್ರಾಂತಿ ಸಮಾವೇಶದ ಮೂಲಕ ರಾಹುಲ್ ಗಾಂಧಿಯವರು ಯುವಕರಿಗೆ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಎರಡು ವಿಶೇಷ ಯೋಜನೆಗಳನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಘೋಷಣೆ ಮಾಡಲಿದ್ದಾರೆ. ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಯುವಕರಿಗಾಗಿ ಈ ಯೋಜನೆಗಳನ್ನು ಅವರು ಪ್ರಕಟಿಸಲಿದ್ದಾರೆ. ವಿಧಾನಸಭಾ ಚುನಾವಣೆ ಕಾರಣಕ್ಕೆ ರಾಹುಲ್ ಗಾಂಧಿಯವರು ಇದೀಗ ಬೆಳಗಾವಿ ಮೂಲಕ ಕರ್ನಾಟಕದ ರಂಗ ಪ್ರವೇಶ ಮಾಡಿದ್ದಾರೆ. ಬರುವ ದಿನಗಳಲ್ಲಿ ವಿಧಾನಸಭಾ ಚುನಾವಣೆ ಕಾವೇರುತ್ತಿದ್ದಂತೆ ಅವರು ಇಡೀ ರಾಜ್ಯಾದ್ಯಂತ ಭರ್ಜರಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.