ಜನ ಜೀವಾಳ ಜಾಲ: ಬೆಳಗಾವಿ :ಈ ಸಲದ ಬೆಳಗಾವಿ ಸಾರ್ವಜನಿಕ ಗಣೇಶೋತ್ಸವ ಹೊಸ ಇತಿಹಾಸ ಬರೆದಿದೆ. ಸತತ 30 ಗಂಟೆಗಳ ಕಾಲ ಗಣೇಶ ವಿಸರ್ಜನೆ ನಡೆಯುವ ಮೂಲಕ ಬೆಳಗಾವಿ ಮಹಾನಗರದ ಗಣೇಶೋತ್ಸವ ಈ ಬಾರಿ ಹೊಸ ದಾಖಲೆ ಮೆರೆದಿದೆ.
ಅನಂತ ಚತುರ್ದಶಿ ದಿನವಾದ ಗುರುವಾರ ಸಂಜೆ 4 ರಿಂದ ಆರಂಭವಾದ ಗಣೇಶ ಮೂರ್ತಿಗಳ ಮೆರವಣಿಗೆ ಶುಕ್ರವಾರ ರಾತ್ರಿ 11:00 ಗಂಟೆಗೆ ಅದ್ದೂರಿ ವಿಸರ್ಜನೆ ಯೊಂದಿಗೆ ಸಮಾರೋಪಗೊಂಡಿದೆ. ಒಟ್ಟಾರೆ ಬೆಳಗಾವಿಯ ಗಣೇಶೋತ್ಸವ ಈ ಬಾರಿ ದಾಖಲೆಯ ಅವಧಿವರೆಗೂ ನಡೆದು ಸಂಚಲನಕ್ಕೆ ಕಾರಣವಾಗಿದೆ.
ಕಳೆದ 11 ದಿನಗಳಿಂದ ಆಕರ್ಷಣೆಗೆ ಕಾರಣವಾಗಿದ್ದ ಬೆಳಗಾವಿ ಸಾರ್ವಜನಿಕ ಗಣೇಶೋತ್ಸವಕ್ಕೆ ಶುಕ್ರವಾರ ರಾತ್ರಿ ಕೊನೆಗೂ ವಿಧ್ಯುಕ್ತವಾಗಿ ತೆರೆ ಬಿದ್ದಿದೆ. ಅದರಲ್ಲೂ ಗುರುವಾರ ಹಾಗೂ ಶುಕ್ರವಾರ ಗಣೇಶ ವಿಸರ್ಜನೆಯ ಸುಂದರ ನೋಟವನ್ನು ಲಕ್ಷಾಂತರ ಜನ ವೀಕ್ಷಿಸಿದರು. ಕಪಿಲೇಶ್ವರ ಸೇರಿದಂತೆ ವಿವಿಧ ಗಣೇಶ ವಿಸರ್ಜನೆ ತಾಣಗಳಲ್ಲಿ ಭಕ್ತರ ದಂಡೇ ನೆರೆದಿತ್ತು. ಸಾಮಾಜಿಕ ಜಾಲತಾಣಗಳು ಹಾಗೂ ವಿವಿಧ ವಾಹಿನಿಗಳು ನೀಡಿದ ನೇರ ದೃಶ್ಯ, ವಿವರಣೆಯನ್ನು ಬೆಳಗಾವಿ ಮಾತ್ರವಲ್ಲ, ನೆರೆಹೊರೆಯ ರಾಜ್ಯಗಳು ಹಾಗೂ ಹೊರದೇಶಗಳ ಜನತೆ ಸಹ ವೀಕ್ಷಿಸಿ ಆನಂದ ತುಂದಿಲಗೊಂಡರು.
ಗಣೇಶ ಮೆರವಣಿಗೆಯ ಸುಂದರ ನೋಟವನ್ನು ವೀಕ್ಷಿಸಲು ಬೆಳಗಾವಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನತೆ ಗಣೇಶ ವಿಸರ್ಜನೆಯ ವೈಭವದ ಮೆರವಣಿಗೆಯನ್ನು ಕಂಡು ಪುಳಕಿತಗೊಂಡರು. ಒಟ್ಟಾರೆ, ಹೇಳುವುದಾದರೆ ಬೆಳಗಾವಿಯ ಗಣೇಶೋತ್ಸವ ಈ ಸಲ ಹೊಸ ದಾಖಲೆ ಮಾಡಿದೆ.
ಅಭಿನಂದನೀಯ ಆಡಳಿತ ವ್ಯವಸ್ಥೆ :
ಬೆಳಗಾವಿ ಗಣೇಶೋತ್ಸವದ ಅಷ್ಟು ಯಶಸ್ಸು ಬೆಳಗಾವಿ ಮಹಾನಗರ ಪಾಲಿಕೆಗೆ ಸಲ್ಲಬೇಕು. ಅದರಲ್ಲೂ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಅವರ ಅಚ್ಚುಕಟ್ಟುತನದ ವ್ಯವಸ್ಥೆಗಳು, ಮೇಲ್ವಿಚಾರಣೆ ಬೆಳಗಾವಿ ಜನತೆಯ ಮನೆಗೆದ್ದಿತು. ಗಣೇಶೋತ್ಸವದ ಅಷ್ಟು ವ್ಯವಸ್ಥೆಗಳ ಜವಾಬ್ದಾರಿ ವಹಿಸಿಕೊಂಡ ಆಯುಕ್ತ ಅಶೋಕ ದುಡಗುಂಟಿ ಅವರು ತಮ್ಮ ಇಷ್ಟು ವರ್ಷದ ಅಡಳಿತದ ಅನುಭವವನ್ನು ಧಾರೆಯೆರೆದು ಈ ಬಾರಿಯ ಗಣೇಶೋತ್ಸವ ಅತ್ಯಂತ ಯಶಸ್ವಿಗೊಳ್ಳಲು ನೇರ ಕಾರಣರಾದರು. ಅವರ ಮಾರ್ಗದರ್ಶನದ ಮೂಲಕ ಮಹಾನಗರ ಪಾಲಿಕೆಯ ಇಡೀ ಆಡಳಿತ ವರ್ಗ ಗಣೇಶೋತ್ಸವ ಅತ್ಯಂತ ಯಶಸ್ವಿಯಾಗಲು ಬೆವರು ಹರಿಸಿ ದುಡಿಯಿತು. ಈ ವರ್ಷದ ಗಣೇಶೋತ್ಸವ 119 ವರ್ಷಗಳ ಭವ್ಯ ಹಿನ್ನೆಲೆಯುಳ್ಳ ಬೆಳಗಾವಿ ಗಣೇಶೋತ್ಸವಕ್ಕೆ ಹೊಸ ಭಾಷ್ಯ ಬರೆಯಲು ಕಾರಣವಾಯಿತು.