This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಸೂರಿಲ್ಲದವರಿಗೆ ವಂಚಿಸಿತು ಬೆಳಗಾವಿ ಬುಡಾ.. Belgaum Buda cheated those who don't have money.


ಜನ ಜೀವಾಳ ಸರ್ಚಲೈಟ್ : ಮನೆ ಇಲ್ಲದವರಿಗೆ ಸೂರು ಕಟ್ಟಿ ಕೊಡಬೇಕಾಗಿದ್ದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಇದೀಗ ತನ್ನ ನೈಜ ಉದ್ದೇಶವನ್ನೇ ಮರೆತಂತಿದೆ. ರಾಜ್ಯದ ಎರಡನೇ ರಾಜಧಾನಿ ಎಂಬ ಅಭಿದಾನ ಪಡೆದಿರುವ ಬೆಳಗಾವಿ ಮಹಾನಗರದ ವ್ಯಾಪ್ತಿಯಲ್ಲಿ ಸ್ವಂತದೊಂದು ಮನೆ ಕಟ್ಟಿಕೊಂಡು ವಾಸ ಮಾಡಬೇಕು ಎಂಬ ಜನರ ಬಹು ವರ್ಷಗಳ ಕನಸನ್ನು ನಗರಾಭಿವೃದ್ಧಿ ಪ್ರಾಧಿಕಾರ ನುಚ್ಚು ನೂರು ಮಾಡಿದೆ. ತಾನು ಹೇಳಿದ್ದೆ ಆಟ ಎನ್ನುವಂತೆ ನಡೆದುಕೊಳ್ಳುತ್ತಿದೆ. ಅದರಲ್ಲೂ ಕೆಲ ಪಟ್ಟ ಭದ್ರ ರಾಜಕಾರಣಿಗಳ ಕಪಿಮುಷ್ಟಿಯಿಂದ ನಗರಾಭಿವೃದ್ಧಿ ಪ್ರಾಧಿಕಾರ ಇನ್ನಿಲ್ಲದಂತೆ ನಲಗುತ್ತಿದೆ. ಇದರ ಪರಿಣಾಮ ಅಧಿಕಾರಿಗಳು ಸಹಾ ರಾಜಕಾರಣಿಗಳು ಹೇಳಿದಂತೆ ನಡೆದುಕೊಂಡು ಆರ್ಥಿಕವಾಗಿ ದುರ್ಬಲರು ಹಾಗೂ ಬಡವರಿಗೆ ನ್ಯಾಯೋಚಿತವಾಗಿ ಸಿಗಬೇಕಾಗಿದ್ದ ಸರಕಾರಿ ಸೌಲಭ್ಯವನ್ನು ನೀಡುವಲ್ಲಿ ತಮ್ಮ ಕರ್ತವ್ಯವನ್ನು ಮರೆತಿರುವುದು ಮಾತ್ರ ಅತ್ಯಂತ ಬೇಸರದ ಸಂಗತಿಯಾಗಿದೆ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲ ಎನ್ನಬಹುದು. ಕೆಲ ವರ್ಷಗಳಿಂದ ತೀವ್ರ ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಾಧಿಕಾರ ಕಾಲಹರಣ ಮಾಡಿಕೊಂಡಿದೆ. ಇದೀಗ ಸೂರು ಕಟ್ಟಿಕೊಳ್ಳುವ ನೈಜ ಫಲಾನುಭವಿಗಳನ್ನು ಕತ್ತಲಲ್ಲಿ ಇಟ್ಟು ಉಳ್ಳವರಿಗೆ ಮತ್ತೆ ಮನೆ ಕಟ್ಟಲು ಅವಕಾಶ ಮಾಡಿಕೊಳ್ಳಲು ವಾಮ ಮಾರ್ಗ ಹಿಡಿದಿರುವುದು ಅತ್ಯಂತ ದುರ್ದೈವದ ಸಂಗತಿ ಎನ್ನಬಹುದು. ಜೊತೆಗೆ ಇಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಭದ್ರವಾಗಿ ಬೇರೂರಲು ಪ್ರಧಾನ ಕಾರಣ ಹಲವು ವರ್ಷಗಳಿಂದ ಇಲ್ಲಿ ತಳವೂರಿರುವ ಅಧಿಕಾರಿ ವರ್ಗ ಎನ್ನಬಹುದು.

ಒಟ್ಟಾರೆ ಬೆಳಗಾವಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ತೆಗೆದುಕೊಂಡಿರುವ ನಿರ್ಣಯ ಗಮನಿಸಿದರೆ ನೈಜ ಫಲಾನುಭವಿಗಳಿಗೆ ಬಹಳ ದೊಡ್ಡ ಮಟ್ಟದಲ್ಲಿ ಅನ್ಯಾಯವಾಗಿರುವುದು ಕಂಡುಬಂದಿದೆ. ಸರಕಾರ ತಾನು ಮಾಡಿರುವ ನಿಯಮಗಳನ್ನು ಅತ್ಯಂತ ವ್ಯವಸ್ಥಿತವಾಗಿಯೇ ಇಲ್ಲಿ ಗಾಳಿಗೆ ತೂರಿರುವ ವಾಸ್ತವಾಂಶವನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬಹುದಾಗಿದೆ. ಜನತೆಗೆ ಮನೆ ಕಟ್ಟಿಕೊಡಲು ರೈತರಿಂದ ಪಡೆದುಕೊಂಡ ಜಮೀನನ್ನು ಉಳ್ಳವರಿಗೆ ಕೊಟ್ಟರೆ ಮುಂದಿನ ದಿನಗಳಲ್ಲಿ ಯಾವೊಬ್ಬ ರೈತರು ಸಹ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡಲು ಹಿಂದೇಟು ಹಾಕಬಹುದು. ಬೆಳಗಾವಿಯಲ್ಲಿ ನಡೆದಿರುವ ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಭಾಸವಾಗುತ್ತಿದೆ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ಸರ್ಕಾರಕ್ಕೆ ನಾಮ ಹಾಕಿದ ಸ್ಟೋರಿ ಇದು. ಸ್ವ ಹಿತಾಸಕ್ತಿ, ಹಣದಾಸೆಗೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ್ದಾರೆ. ಇದು ನಡೆದಿರುವುದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎನ್ನುವುದು ಗಮನಿಸಬೇಕಾದ ಅಂಶ.

ಬೆಳಗಾವಿ ಪಾಲಿಗೆ ಇದೊಂದು ಬಹುದೊಡ್ಡ ಹಗರಣ ಎನ್ನಲು ಅಡ್ಡಿಯಿಲ್ಲ. ಸರ್ಕಾರದ ಕಣ್ಣಿಗೆ ಮಣ್ಣೆರಚಿ ಮಾಡಬಾರದ ಕೆಲಸ ಮಾಡಿದ ಅಧಿಕಾರಿಗಳು ಜನರಿಗೆ ಬಹು ದೊಡ್ಡ ಟೋಪಿ ಹಾಕಿದ್ದಾರೆ. ನಿವೇಶನಗಳ ಹಂಚಿಕೆಯಲ್ಲಿ ಭಾರಿ ಗೋಲಮಾಲ್ ಎಸಗಲಾಗಿದೆ.

ಇ-ಹರಾಜು ಪ್ರಕ್ರಿಯೆಯಲ್ಲಿ ನಿವೇಶನಗಳನ್ನು ಹರಾಜು ಮಾಡದೇ ಗೋಲ್ ಮಾಲ್ ಮಾಡಿರುವ ಈ ಪ್ರಕರಣ ಎಂಥವರನ್ನು ಸಹಾ ಬೆಚ್ಚಿ ಬೀಳಿಸುವಂತಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಿವೇಶನಗಳನ್ನು ಮಾರಾಟ ಮಾಡಿರುವುದು ಇದೀಗ ಬಹಿರಂಗವಾಗಿದೆ.

ಇ ಹರಾಜಿನಲ್ಲಿ ಸೈಟ್‌ಗಳ ಹಂಚಿಕೆ ಮಾಡಿದ ಮಾರನೇ ದಿನವೇ ಮತ್ತೊಂದು ಸುತ್ತಿನ ಸೈಟ್ ಹಂಚಿಕೆ ಮಾಡಲಾಗಿದೆ.
ಯಾವುದೇ ಪ್ರಕಟಣೆ ಹೊರಡಿಸದೇ ಮ್ಯಾನುಅಲ್ ನಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಸರ್ಕಾರದ ನಿಯಮಗಳೇ ಮ್ಯಾನುಅಲ್ ಹರಾಜು ಮಾಡದಂತೆ ಸೂಚನೆ ಇದ್ದರೂ ಇಲ್ಲಿ ಮಾತ್ರ ನಿಯಮಗಳಿಗೆ ಡೋಂಟ್ ಕೇರ್ ಮಾಡಲಾಗಿದೆ. ಬೇಕಾಬಿಟ್ಟಿ ಸೈಟ್‌ಗಳ ಹಂಚಿಕೆ ಮಾಡಿರುವ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಬೆಳಗಾವಿಯ ಬಡ ಹಾಗೂ ಮಧ್ಯಮ ವರ್ಗದ ಜನತೆಯನ್ನು ವಂಚಿಸಿದೆ.

ಅತೀ ಕಡಿಮೆ ಬೆಲೆಗೆ ಕಾರ್ನರ್ ಸೈಟ್ ಹಾಗೂ ಬಿಡಿ ಸೈಟ್‌ಗಳ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ, ಬುಡಾ ಅಧ್ಯಕ್ಷ ಸಂಜಯ್ ಬೆಳಗಾಂವಕರ ಅವರೇ ಈ ಬಹುದೊಡ್ಡ ಗೋಲ್ ಮಾಲ್ ಸೂತ್ರಧಾರರಾಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಬೆಳಗಾವಿಯ ಬುಡಾದಲ್ಲಿ ಭಾರಿ ಗೋಲ್ ಮಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಚ್ 16, 17 ರಂದು ಪ್ರಕಟನೆ ಹೊರಡಿಸಿ ಇ ಹರಾಜಿನಲ್ಲಿ ನಿವೇಶನ ಮಾರಾಟ ಮಾಡಲಾಗಿದೆ.
ಈ ವೇಳೆ ಪ್ರತಿ ಚದರ ಅಡಿಗೆ 1800ರಿಂದ 2500ರ ವರೆಗೆ ದರ ನಿಗದಿ ಮಾಡಲಾಯಿತು. ಇದೇ‌ ಸಂದರ್ಭದಲ್ಲಿ ಕಾರ್ನರ್ ಸೈಟ್‌ಗಳಿಗೆ ಆನ್‌ಲೈನ್ ಹರಾಜಿನಲ್ಲಿ 2500 ರಿಂದ 6 ಸಾವಿರ ವರೆಗೂ ಪ್ರತಿ ಚದರ ಅಡಿಗೆ ಹರಾಜು ನಡೆಸಲಾಯಿತು. ಸರ್ಕಾರದ ನಿಗದಿ ಪಡಿಸಿದ ದರಕ್ಕಿಂತ ಮೂರು ಪಟ್ಟು ಹಣಕ್ಕೆ ಮಾರಾಟವಾದ ನಿವೇಶನಗಳು ಮನೆ ಹೊಂದುವವರ ಆಸೆಯನ್ನು ಭಗ್ನಗೊಳಿಸಿದೆ. ಇದಾದ ಮಾರನೇ ದಿನವೇ 112 ಸೈಟ್ ಗಳನ್ನು ಕಾನೂನು ಬಾಹಿರವಾಗಿ ಮ್ಯಾನುಅಲ್ ನಲ್ ಹರಾಜು ಮಾಡಲಾಗಿದೆ.
ಸಹ್ಯಾದ್ರಿ ನಗರದಲ್ಲಿ 24 ನಿವೇಶನ, ಕುಮಾರಸ್ವಾಮಿ ಬಡಾವಣೆಯಲ್ಲಿ 13 ನಿವೇಶನ, ರಾಮತೀರ್ಥ ನಗರ ಬಡಾವಣೆಯಲ್ಲಿ 42 ನಿವೇಶನ, ದೇವರಾಜ ಅರಸು ಬಡಾವಣೆಯಲ್ಲಿ 33 ನಿವೇಶನಗಳನ್ನು ಮ್ಯಾನುಅಲ್ ಆಗಿ ಮಾರಾಟ ಮಾಡಲಾಗಿದೆ. ಇಲ್ಲಿ ಮಾರಾಟವಾದ ಬಹುತೇಕ ಸೈಟ್‌ಗಳು ಕಾರ್ನರ್ ಸೈಟಗಳೇ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ.

ಆನ್ ಲೈನ್ ನಲ್ಲಿ ನಿಗದಿ ಪಡಿಸಿದ ದರಕ್ಕಿಂತಲೂ ಕಡಿಮೆ ದರ ಪ್ರತಿ ಚ.ಅಡಿಗೆ 705 ರೂ. ದಿಂದ 1700ರ ವರೆಗೆ ನಿಗದಿ ಮಾಡಲಾಗಿದೆ. 705 ಇದ್ರೇ ಮಾರಾಟ ಸಂದರ್ಭದಲ್ಲಿ 775 ಕ್ಕೆ ಮಾರಾಟ ಮಾಡಿದ ಬುಡಾ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿದ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಬುಡಾ ನಿಗದಿ ಪಡಿಸಿದ ದರಕ್ಕಿಂತ ಕೇವಲ ಐವತ್ತು, ನೂರು ರೂಪಾಯಿ ಹೆಚ್ಚಳ ಮಾಡಿ ನಿವೇಶನ ಮಾರಾಟ ಮಾಡಲಾಗಿದೆ. ಮ್ಯಾನುಅಲ್ ನಲ್ಲಿ ಅತೀ ಕಡಿಮೆ ಬೆಲೆಗೆ ನಿವೇಶನಗಳನ್ನು ಹಂಚಿಕೆ ಮಾಡಿದ ಅಧಿಕಾರಿಗಳು ಒಟ್ಟಾರೆ ಬೆಳಗಾವಿಯ ಜನತೆಗೆ ಅನ್ಯಾಯ ಎಸಗಿದ್ದಾರೆ.

ಯಾವುದೇ ನಿವೇಶನ ಹರಾಜು ಮಾಡಬೇಕು ಅಂದರೆ ಮೊದಲು ಸಾರ್ವಜನಿಕ ಪ್ರಕಟನೆ ಹೊರಡಿಸಬೇಕು. ಮಾರ್ಚ್ 18, 2022ರಂದು ಹೋಳಿ ಹುಣ್ಣಿಮೆ ದಿನ ಹರಾಜು.  ನಿವೇಶನಗಳಿರುವ ಕಡೆಯಲ್ಲೇ ಹರಾಜು ಮಾಡಬೇಕು. ಆದರೆ ಒಂದು ದಿನ ನಾಲ್ಕು ಬಡಾವಣೆಯಲ್ಲಿ ಹರಾಜು ಮಾಡಿದ್ದಾರೆ ಈ ಬುಡಾ ಅಧಿಕಾರಿಗಳು. ಕಚೇರಿಯಲ್ಲಿ ಕುಳಿತು ತಮಗೆ ಬೇಕಾದವರಿಗೆ ಬೇಕಾಬಿಟ್ಟ ಹಂಚಿಕೆ ಮಾಡಿದ್ದಾರೆ. ನಿವೇಶನ ಹಂಚಿಕೆ ನಿಯಮ ಕೂಡ ಗಾಳಿಗೆ ತೂರಿದ್ದಾರೆ. ಮುಖ್ಯವಾಗಿ ಯಾವುದೇ ನಿವೇಶನ ಹಂಚಿಕೆ ಆಗಬೇಕು ಅಂದರೆ ಇಬ್ಬರಾದರೂ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. 112 ಸೈಟ್ ಹಂಚಿಕೆ ವೇಳೆ ಸೈಟ್ ತೆಗೆದುಕೊಳ್ಳುವವರನ್ನು ಬಿಟ್ಟರೆ ಹರಾಜಿನಲ್ಲಿ ಯಾರೊಬ್ಬರು ಭಾಗಿಯಾಗಿಲ್ಲ. ವಿರೋಧ ಅಥವಾ ಎದುರಾಳಿಗಳು ಇಲ್ಲದಿದ್ದರೆ ಹರಾಜು ಮಾಡಬಾರದು ಎನ್ನುವುದು ಸರ್ಕಾರದ ನಿಯಮ. ಈ ನಿಯಮ ಕೂಡ ಪಾಲನೆ ಮಾಡದೇ ಸೈಟ್‌ಗಳ ಹಂಚಿಕೆ ಮಾಡಲಾಗಿದೆ.

ಬುಡಾ ಅಧಿಕಾರಿಯೊಬ್ಬ ಪತ್ನಿ ಸೇರಿದಂತೆ ಎರಡೆರಡು ನಿವೇಶನ ಖರೀದಿ ಮಾಡಿದ್ದಾರೆ. ಕೆಲವರು ಅಣ್ಣ, ತಮ್ಮ, ಅಳಿಯನ ಹೆಸರಲ್ಲೂ ಮೂರ್ನಾಲ್ಕು ಸೈಟ್‌ಗಳ ಖರೀದಿ ಮಾಡಿರುವುದು ಇನ್ನೂ ಅಚ್ಚರಿ.

ಈ ಹರಾಜು ಇರಲಿ ಅಥವಾ ಮ್ಯಾನುಅಲ್ ಹರಾಜು ಇರಲಿ. ಯಾರೇ ಭಾಗವಹಿಸಿದರೂ ಮೊದಲು ನಿವೇಶನ ಸಂಖ್ಯೆ ಹೆಸರಲ್ಲಿ ಐವತ್ತು ಸಾವಿರ ಇಎಂಡಿ ಹಣ ಪಾವತಿಸಬೇಕು.
ಇ ಹರಾಜಿನಲ್ಲಿ ಭಾಗಿಯಾದ ಎಲ್ಲರಿಂದಲೂ ಇಎಂಡಿ ಹಣ ಪಾವತಿ. ಆದರೆ ಮ್ಯಾನುಅಲ್ ಹರಾಜಿನಲ್ಲಿ ಭಾಗಿಯಾದ ಬಹುತೇಕರು ಒಂದೇ ಒಂದು ಪೈಸೆ ಹಣ ಕಟ್ಟದೆ ಭಾಗಿಯಾಗಿದ್ದರು. ಎದುರಾಳಿಗಳು ಇಲ್ಲದಿದ್ದರೂ, ಹರಾಜಿಗೂ ಮುನ್ನ ಮುಂಗಡ ಹಣ ಕಟ್ಟದಿದ್ದರೂ ಅಂತವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ.
ಟೋಕನ್ ನಂಬರ್ ಕೂಡ ನೀಡದೇ ಅಂತವರಿಗೆ ನಿವೇಶನ ಹಂಚಿಕೆ ದೃಢೀಕರಣ ಪತ್ರವನ್ನು ಅಧಿಕಾರಿಗಳು ನೀಡಿದ್ದರು. 30/40 ಸೈಟ್ ಗಳು ಇ- ಹರಾಜಿನಲ್ಲಿ 90 ಲಕ್ಷದವರೆಗೂ ಮಾರಾಟವಾಗಿದೆ. ಮ್ಯಾನುಅಲ್ ನಲ್ಲಿ ಹರಾಜಿನಲ್ಲಿ ಕೇವಲ 35 ರಿಂದ 40 ಲಕ್ಷದ ವರೆಗೂ ಮಾರಾಟವಾಗಿದೆ. ಎರಡು ಪಟ್ಟು ಹಣಕ್ಕೆ ಸೈಟ್ ಮಾರಾಟವಾಗ್ತಿದ್ರೂ ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ, ಬುಡಾ ಅಧ್ಯಕ್ಷ ಸಂಜಯ್ ಬೆಳಗಾಂವಕರ್ ಕಳ್ಳಾಟವಾಡಿದ್ದು ಯಾಕೆ ?

ಹಣದಾಸೆಗೆ ಬಿದ್ದು ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ನಿವೇಶನ ಮಾರಾಟ ಮಾಡಿದ್ರಾ ?
ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ರಾ ? ರೈತರಿಂದ ಕಡಿಮೆ‌ ಹಣಕ್ಕೆ ಜಮೀನು ಪಡೆದು ಅಭಿವೃದ್ಧಿ ಹೆಸರಲ್ಲಿ ಬಡಾವಣೆ ನಿರ್ಮಿಸಿ ಬೇಕಾದವರಿಗೆ ಮಾರಾಟ ಮಾಡಲಾಗಿದೆ.
ಒಂದು ಕಡೆ ಸರ್ಕಾರಕ್ಕೆ ಪಂಗನಾಮ, ಇನ್ನೊಂದು ಕಡೆ ರೈತರಿಗೆ ದ್ರೋಹ. ಬುಡಾ ಗೋಲ್ ಮಾಲ್ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯ ಇದೀಗ ಕೇಳಿ ಬಂದಿದೆ.


Jana Jeevala
the authorJana Jeevala

Leave a Reply