ಬೆಳಗಾವಿ :
ಹಿಂದೂ ಧರ್ಮದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಬೆಳಗಾವಿ ವಕೀಲರ ಸಂಘ ಖಂಡಿಸಿದೆ.
ಮಂಗಳವಾರ ನಡೆದ ಬೆಳಗಾವಿ ವಕೀಲರ ಸಂಘದ ಆಡಳಿತ ಮಂಡಳಿ ಸಭೆ ಸತೀಶ ಜಾರಕಿಹೊಳಿ ಅವರ ಹೇಳಿಕೆಗೆ
ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಶಾಸನ ಸಭೆಯ ಸದಸ್ಯರಾಗಿ ಜವಾಬ್ದಾರಿಯುತ ಸ್ಥಾನಮಾನದಲ್ಲಿರುವವರು.
ನವೆಂಬರ್ 6 ರಂದು ನಿಪ್ಪಾಣಿಯಲ್ಲಿ ಜರುಗಿದ ವಿಶ್ವ ಮಾನವ ಬಂಧುತ್ವ ವೇದಿಕೆಯ ಸಮಾರಂಭದಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸಭೆಯಲ್ಲಿ ಖಂಡಿಸಲಾಯಿತು.
ಬುದ್ಧ , ಬಸವ, ಅಂಬೇಡ್ಕರ್ ಹೆಸರಿನಲ್ಲಿ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಬುದ್ದ , ಬಸವ , ಅಂಬೇಡ್ಕರ್ ರವರ ವಿಚಾರಧಾರೆಗಳಿಗೆ ವಿರುದ್ಧವಾಗಿದ್ದು ಯಾವುದೇ ಧರ್ಮದ ಬಗ್ಗೆ ಮಾತನಾಡುವ ಪೂರ್ವದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ರಾಜಕೀಯ ಪ್ರಚಾರಕ್ಕಾಗಿ ಧರ್ಮಗಳ ಅವಹೇಳನ ಮಾಡಿರುವುದು ಅತ್ಯಂತ ಕೀಳು ಮಟ್ಟದ ವಿಚಾರವಾಗಿದ್ದು ಹಾಗೂ ಸದರಿ ಹೇಳಿಕೆಯ ಕುರಿತು ಕ್ಷಮಾಪಣೆ ಕೇಳದೆ ಪುನಃ ಅವಹೇಳನಕಾರಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದು ಸಹಿತ ಅತ್ಯಂತ ಖಂಡನೀಯ ವಿಷಯವಾಗಿದೆ.
ಆದುದರಿಂದ ಸಂವಿಧಾನ ಬದ್ದವಾಗಿ ದೊರೆತ ಧಾರ್ಮಿಕ ಹಕ್ಕಿನ ಹೆಸರಲಿ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಯನ್ನು ನೀಡಿ ಅಸಂಬದ್ಧವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯವೆಂದು ತಿರ್ಮಾನಿಸಿ ಸದರಿ ವಿಷಯದಲ್ಲಿ ಕೋಮು ಸಾಮರಸ್ಯ ಕಾಪಾಡಬೇಕಾದ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ತ್ವರಿತವಾಗಿ ಅವಶ್ಯಕ ಕ್ರಮಗಳನ್ನು ಕೈಗೊಂಡು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ವಕೀಲರ ಸಂಘ ಆಗ್ರಹಿಸಿದೆ.