ಬೆಳಗಾವಿ :
ಬೆಳಗಾವಿಯ ಕ್ರಿಕೆಟ್ ಪ್ರೇಮಿಗಳಿಗೆ ಈ ಬಾರಿ ಸಂತಸದ ಸುದ್ದಿ. ಇದೀಗ ಬೆಳಗಾವಿಯ ಯುವ ಪ್ರತಿಭೆ ಪ್ರತಿಷ್ಠಿತ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು ಭವಿಷ್ಯದಲ್ಲಿ ಅವರು ಐಪಿಎಲ್ ಹಾಗೂ ಭಾರತೀಯ ಕ್ರಿಕೆಟ್ ತಂಡದ ಕದ ತಟ್ಟುತ್ತಾರಾ ಕಾದು ನೋಡಬೇಕು.
ಒಂದು ದಶಕದಿಂದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಬರ ಎದುರಿಸುತ್ತಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ, ಈ ಸಲ ಹೇಗಾದರೂ ಮಾಡಿ ಮತ್ತೊಮ್ಮೆ ಕಿರೀಟ ಮುಡಿಗೇರಿಸಬೇಕೆಂಬ ದೃಢ ನಿಶ್ಚಯ ಮಾಡಿಕೊಂಡಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ) ಮೊದಲ ಕೆಲಸ ತಂಡದಲ್ಲಿ ಮೇಜರ್ ಸರ್ಜರಿ. ಜ.5 ರಿಂದ ಆರಂಭಗೊಳ್ಳಲಿರುವ ಮುಂದಿನ ಋತುವಿನ ಟೂರ್ನಿಗೆ ಕೆಎಸ್ಸಿಎ ನಾಲ್ವರು ಯುವ ಪ್ರತಿಭಾವಂತರನ್ನು ಆಯ್ಕೆ ಮಾಡಿದ್ದು, ದೇಸಿ ಕ್ರಿಕೆಟ್ನಲ್ಲಿ ಮಿಂಚಲು ವೇದಿಕೆ ಒದಗಿಸಿಕೊಟ್ಟಿದೆ. 16 ಆಟಗಾರರ ಹೆಸರನ್ನು ಕರ್ನಾಟಕ ಕ್ರಿಕೆಟ್ ಪ್ರಕಟಿಸಿದ್ದು ವಿಕೆಟ್ ಕೀಪರ್ ಆಗಿರುವ ಕಾರಣ ಬೆಳಗಾವಿಯ ಯುವ ಪ್ರತಿಭೆ ಸುಜಯ್ ಸಾತೇರಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ಕೆಎಸ್ಸಿಎ ಕಿರಿಯರ ಲೀಗ್, ಡಿವಿಷನ್ಗಳಲ್ಲಿ ಮಿಂಚಿದ್ದ ವಿಕೆಟ್ ಕೀಪರ್, ಅಲ್ರೌಂಡರ್ ಸುಜಯ್ ಸಾತೇರಿ ಅವರಿಗೆ ಮೊದಲ ಬಾರಿಗೆ ಅವಕಾಶ ನೀಡಿದೆ.
ಶರತ್ ಬದಲು ಸುಜಯ್ :
ವಿಕೆಟ್ ಕೀಪರ್ , ಬ್ಯಾಟರ್ ಬಿ.ಆರ್.ಶರತ್ಗೆ ಮತ್ತಷ್ಟು ಅವಕಾಶ ನೀಡಲು ಆಯ್ಕೆ ಸಮಿತಿ ಮನಸ್ಸು ಮಾಡಿಲ್ಲ.
ತಂಡದ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದ 27 ವರ್ಷದ ಬಿ.ಆರ್.ಶರತ್ಗೆ ಈ ಬಾರಿ ತಂಡದಲ್ಲಿ ಸ್ಥಾನವಿಲ್ಲ. ಅವರ ಜಾಗಕ್ಕೆ ಬೆಳಗಾವಿಯ ಸುಜಯ್ ಸಾತೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಮೊದಲ ಡಿವಿಷನ್ ಕ್ರಿಕೆಟ್ನಲ್ಲಿ ಅಬ್ಬರದ ಪ್ರದರ್ಶನ ನೀಡಿರುವ 23 ವರ್ಷದ ಸುಜಯ್ಗೆ ಇದು ರಾಜ್ಯ ತಂಡಕ್ಕೆ ಮೊದಲ ಕರೆ. ಡಿವಿಷನ್ ಲೀಗ್ನಲ್ಲಿ ಅವರು 2022ರಲ್ಲಿ 8 ಪಂದ್ಯಗಳಲ್ಲಿ 550 ರನ್ ಕಲೆಹಾಕಿದ್ದ ಸುಜಯ್, 2023ರಲ್ಲಿ 10 ಪಂದ್ಯಗಳಲ್ಲಿ 700 ರನ್ ಸಿಡಿಸಿದ್ದಾರೆ. ಅವರು ಕೆಎಸ್ಸಿಎ ಲೀಗ್ಗಳಲ್ಲಿ ಅಗ್ರ ಸ್ಕೋರರ್ಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ.
ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗುವ ಭರವಸೆ ಇತ್ತು. ಇದಕ್ಕಾಗಿ ಕಠಿಣ ಪರಿಶ್ರಮ ಪಟ್ಟಿದ್ದೇನೆ. ಡಿವಿಷನ್ ಲೀಗ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ರಣಜಿ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದು ಒಂದು ಗೌರವ. ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ.
-ಸುಜಯ್ ಸಾತೇರಿ
ಖ್ಯಾತ ಆಟಗಾರ ಮಯಾಂಕ್ ಅಗರ್ವಾಲ್ ಮುನ್ನಡೆಸಲಿರುವ ರಾಜ್ಯ ತಂಡಕ್ಕೆ 23 ವರ್ಷದ ನಿಕಿನ್ ಜೋಸ್ಗೆ ಉಪನಾಯಕತ್ವದ ಪಟ್ಟ ನೀಡಲಾಗಿದೆ. ಅವರು ಕಳೆದ ವರ್ಷವಷ್ಟೇ ತಂಡಕ್ಕೆ ಪಾದಾರ್ಪಣೆ ಮಾಡಿದ್ದು, ಹಲವು ಹಿರಿಯರನ್ನು ಹಿಂದಿಕ್ಕಿ ಉಪನಾಯಕನ ಸ್ಥಾನ ಪಡೆದುಕೊಂಡಿದ್ದಾರೆ.
ಕರ್ನಾಟಕ ತಂಡ: ಮಯಾಂಕ್(ನಾಯಕ), ಸಮರ್ಥ್, ಪಡಿಕ್ಕಲ್, ನಿಕಿನ್, ಮನೀಶ್, ಶುಭಾಂಗ್, ಶರತ್ ಶ್ರೀನಿವಾಸ್, ವೈಶಾಕ್, ಕೌಶಿಕ್, ವಿದ್ವತ್, ಶಶಿಕುಮಾರ್, ಸುಜಯ್, ನಿಶ್ಚಲ್, ವೆಂಕಟೇಶ್, ಕಿಶನ್, ರೋಹಿತ್ ಕುಮಾರ್.