ಬೆಳಗಾವಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಗುರು ಪುಷ್ಯಾಮೃತ ಯೋಗ ನಿಮಿತ್ತ ಬೆಳಗಾವಿಯ ಮಾರುಕಟ್ಟೆಯಲ್ಲಿ ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗಾವಿ ನಗರ, ಅನಗೋಳ, ಶಹಾಪುರ ಭಾಗದ ಚಿನ್ನದ ಅಂಗಡಿಗಳಲ್ಲಿ ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ನೂಕುನುಗ್ಗಲು ಉಂಟಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಿನ್ನದ ಬೆಲೆಯಲ್ಲಿ 20,000 ರೂ. ಏರಿಕೆ ಕಂಡು ಬಂದಿದೆ. ಆದರೂ ಗ್ರಾಹಕರು ಖರೀದಿಗೆ ಉತ್ಸಾಹ ಎದ್ದು ಕಾಣುತ್ತಿತ್ತು. ಗುರು ಪುಷ್ಯಾಮೃತ ಯೋಗ ದೀಪಾವಳಿ ಹಿನ್ನೆಲೆಯಲ್ಲಿ ಬರುವ ವಿಶೇಷ ಶಾಪಿಂಗ್ ದಿನ. ಈ ಸಂದರ್ಭದಲ್ಲಿ ಚಿನ್ನ ಖರೀದಿಸುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಇದೆ. ಬೆಳಗಾವಿಯಲ್ಲಿ ಗುರು ಪುಷ್ಯಾಮೃತ ಯೋಗ ಗೊತ್ತಿರುವವರು ಅಂಗಡಿಗಳಿಗೆ ತೆರಳಿ ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಖರೀದಿ ಮಾಡಿದ್ದಾರೆ.
ಗುರು ಪುಷ್ಯ ನಕ್ಷತ್ರದಲ್ಲಿದ್ದಾಗ ಈ ದಿನ ಬರುತ್ತದೆ. ಈ ಮುಹೂರ್ತ ವರ್ಷದಲ್ಲಿ ಎರಡು ಇಲ್ಲವೇ ನಾಲ್ಕು ಸಲ ಮಾತ್ರ ಬರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ವಿಶೇಷ ದಿನವಾದ ಕಾರಣ ಖರೀದಿ ಮಾಡಿದ್ದಾರೆ.
ದೀಪಾವಳಿ ಹಿನ್ನೆಲೆಯಲ್ಲಿ ಬೆಳಗಾವಿ ಮಾರುಕಟ್ಟೆ ಇದೀಗ ರಂಗು ಪಡೆದುಕೊಂಡಿದೆ. ಭಾರಿ ಜನಜಂಗುಳಿ ಏರ್ಪಡುವ ಸಾಧ್ಯತೆ ಇದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಂಗಡಿಕಾರರು ಇದೀಗ ಹೆಚ್ಚಿನ ವಸ್ತುಗಳನ್ನು ಖರೀದಿ ಮಾಡಿ ತಂದು ಇಟ್ಟಿದ್ದಾರೆ. ಗ್ರಾಮೀಣ ಭಾಗದ ಗ್ರಾಹಕರು ಬೆಳಗಾವಿ ಮಾರುಕಟ್ಟೆಗೆ ಗಣನೀಯ ಪ್ರಮಾಣದಲ್ಲಿ ಆಗಮಿಸುತ್ತಾರೆ. ಮುಂದಿನ ದಿನಗಳಲ್ಲಿ ಚಿನ್ನ ಖರೀದಿಗೆ ಹೆಚ್ಚಿನ ಪ್ರಶಸ್ತಿ ನೀಡಲಿದ್ದು ಮದುವೆ ಋತುವಿನಲ್ಲಿ ಚಿನ್ನಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಣವಂತರು ಈಗಲೇ ಚಿನ್ನದ ಖರೀದಿಯಲ್ಲಿ ತೊಡಗಿರುವುದು ಸಾಮಾನ್ಯ. ಹೊಸ ವಿನ್ಯಾಸಗಳ ಆಭರಣಗಳಿಗೆ ಗ್ರಾಹಕರಿಂದ ಬೇಡಿಕೆ ಬರುತ್ತಿರುವುದು ವಿಶೇಷವಾಗಿದೆ.