ಬೆಂಗಳೂರು:ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಸೇವಾವಧಿ ನ.30ಕ್ಕೆ ಕೊನೆಗೊಳ್ಳಲಿದೆ.
ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಚಂಡೀಗಢ ಮೂಲದ ರಜನೀಶ್ ಗೋಯೆಲ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಮುಖ್ಯ ಕಾರ್ಯದರ್ಶಿ ಆಯ್ಕೆ ಕುರಿತಂತೆ ಚರ್ಚೆ ನಡೆದಿದ್ದು,
ಹಾಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಇದೇ ತಿಂಗಳ 30 ಕ್ಕೆ ನಿವೃತ್ತಿ ಹೊಂದುವುದರಿಂದ ಹೊಸ ಮುಖ್ಯ ಕಾರ್ಯದರ್ಶಿ ನೇಮಕದ ಅಧಿಕಾರ ಮುಖ್ಯಮಂತ್ರಿ ಅವರಿಗೆ ನೀಡಲಾಗಿದೆ.
ಹಿರಿತನದ ಆಧಾರದ ಮೇಲಿರುವ ಅಧಿಕಾರಿಗಳ ಪಟ್ಟಿ ಮುಂದಿಟ್ಟು ಸಮಾಲೋಚನೆ ನಡೆಸಲಾಗಿದೆ. ಅಂತಿಮವಾಗಿ ಯಾರನ್ನು ಆಯ್ಕೆ ಮಾಡ ಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಯಿತು.
ಮುಂದಿನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ರಜನೀಶ್ ಗೋಯಲ್, ವಿ. ಮಂಜುಳಾ, ಅಜಯ್ ಸೇನ್, ಅನಿಲ್ ಕುಮಾರ್ ಝಾ, ರಾಜೇಶ್ ಸಿಂಗ್, ಶಾಲಿನಿ ರಜನೀಶ್, ಜಾವೇದ್ ಅಯ್ತಿ, ಗೌರವ ಗುಪ್ತಾ, ಆತುಲ್ ಕುಮಾರ್, ಎಲ್.ಕೆ.ಅತೀಶ್, ಮಿಲಯ, ಮಿಥಾಶ್, ವಂದನಾ ಗುರುನಾನಿ, ವಿ.ಎ. ವಿದ್ಯಾವತಿ, ಉಮಾ ಮಹಾದೇವನ್, ತುಷಾರ್ ಗಿರಿನಾಥ್, ಉಮಾ ಶಂಕರ್ ಹೆಸರುಗಳ ಪಟ್ಟಿ ಸಂಪುಟ ಸಭೆ ಮುಂದಿಡಲಾಗಿತ್ತು. ರಜನೀಶ್ ಗೋಯಲ್ ಎಲ್ಲರಿಗಿಂತ ಹಿರಿಯರಾಗಿದ್ದು, ಅವರಿಗೆ ಅವಕಾಶ ನೀಡುವ ಸಾಧ್ಯತೆ ನಿಚ್ಚಳವಾಗಿದೆ. ಜೊತೆಗೆ ರಜನೀಶ್ ಗೋಯಲ್ ಅವರ ಬಗ್ಗೆ ಸರಕಾರಕ್ಕೆ ಹೆಚ್ಚಿನ ಒಲವು ಸಹಾ ಇದೆ.
ಶಾಲಿನಿ ರಜನೀಶ್ ಮತ್ತು ಅವರ ಪತಿ ರಜನೀಶ್ ಗೋಯಲ್ ಅವರು ಕಳೆದ ಮೂರು ದಶಕಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ರಾಜಧಾನಿಯಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಅನುಭವ ಹೊಂದಿದ್ದಾರೆ.
ಅದರಲ್ಲೂ ಶಾಲಿನಿ ರಜನೀಶ್ ಅವರು ಬೆಳಗಾವಿಯ ಜಿಲ್ಲಾಧಿಕಾರಿಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು. ಶಾಲಿನಿ ರಜನೀಶ್ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಜನೀಶ್ ಗೋಯಲ್ ಅವರು ಸಹಾ ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
ರಜನೀಶ್ ಮತ್ತು ಶಾಲಿನಿ ರಜನೀಶ್ ಇಬ್ಬರೂ ಕರ್ನಾಟಕ ಕೇಡರ್ನಿಂದ ಬಂದವರು. ಇತ್ತೀಚೆಗೆ, ರಜನೀಶ್ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ (CMO) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಆಡಳಿತದಲ್ಲಿರುವ ಸರ್ಕಾರ ಮತ್ತು ರಜನೀಶ್ ನಡುವೆ ಉತ್ತಮ ಬಾಂಧವ್ಯವಿದೆ ಎಂಬುದು ಇದರಿಂದ ತಿಳಿಯುತ್ತದೆ.
ರಜನೀಶ್ ಗೋಯೆಲ್ 1986-ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ವಂದಿತಾ ಶರ್ಮಾ ಅವರಂತೆ ಹಿರಿಯ ಅಧಿಕಾರಿಯಾಗಿದ್ದಾರೆ.
ರಜನೀಶ್ ಗೋಯೆಲ್ ಮತ್ತು ಶಾಲಿನಿ ರಜನೀಶ್ ದಂಪತಿ ಅತ್ಯುತ್ತಮ ಅಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಅವರು ಕೆಲಸಕ್ಕೆ ಹೆಚ್ಚು ಮಹತ್ವ ಕೊಡುವ ನಿಜವಾದ ಐಎಎಸ್ ಅಧಿಕಾರಿಗಳ ರೂಪದಲ್ಲಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿಯಾಗಿ ಶಾಲಿನಿ ರಜನೀಶ್ ಕಾರ್ಯನಿರ್ವಹಿಸಿದ್ದ ಸಂದರ್ಭದಲ್ಲಿ ಅತ್ಯುತ್ತಮ ಅಧಿಕಾರಿಯಾಗಿ ಹೆಸರು ಗಳಿಸಿ ಬೆಳಗಾವಿ ಜಿಲ್ಲೆಯ ಮನೆಮಗಳು ಎಂದು ಕರೆಸಿಕೊಂಡಿದ್ದರು.