ಬೆಳಗಾವಿ: ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ಶನಿವಾರ ಬೆಳಗಾವಿ ಪೊಲೀಸರು ಬೆಳಗ್ಗೆ ಹೊತ್ತು ದಿಢೀರ್ ದಾಳಿ ನಡೆಸಿದ್ದಾರೆ. ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ 40 ಅಧಿಕಾರಿಗಳು ಮತ್ತು 220 ಪೊಲೀಸ್ ಸಿಬ್ಬಂದಿ ಸೇರಿ 260 ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದಾರೆ. ತಂಬಾಕು ಪಾಕೆಟ್, ಸಿಗರೇಟ್, ಮೂರು ಚಾಕುಗಳು,ಸ್ಮಾಲ್ ಹೀಟರ್ ವೈರ್ ಬಂಡಲ್, ಎಲೆಕ್ಟ್ರಿಕಲ್ ಒಲೆ ಮುಂತಾದವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು, ನಮಗೆ ಖಚಿತ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದೇವೆ, ಸಿಗರೇಟ್, ತಂಬಾಕು ಪಾಕೆಟ್ ಸೇರಿದಂತೆ ಇತರ ವಸ್ತುಗಳು ಲಭಿಸಿದ್ದು, ಜೈಲಿನೊಳಗೆ ಇವುಗಳನ್ನು ಯಾರು ತೆಗೆದುಕೊಂಡು ಬಂದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ತನಿಖೆ ನಂತರ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಪ್ರತಿ ವರ್ಷ ಈ ದಾಳಿ ನಿಶ್ಚಿತ ..!
ಪ್ರತಿ ವರ್ಷ ಹಿಂಡಲಗಾ ಜೈಲಿನ ಮೇಲೆ ಪೊಲೀಸ್ ಆಯುಕ್ತರು ಹಾಗೂ ಉಪ ಆಯುಕ್ತರು ದಾಳಿ ನಡೆಸುತ್ತಿದ್ದರೂ ಅಲ್ಲಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಾದಕವಸ್ತು, ಇಲೆಕ್ಟ್ರಾನಿಕ್ ವಸ್ತು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಆಗುತ್ತಿಲ್ಲ. ಆದರೆ ಹಿಂಡಲಗಾ ಜೈಲಿನಲ್ಲಿ ಮಾತ್ರ ಕಾನೂನು ಬಾಹಿರ ಹಾಗೂ ಅಕ್ರಮ ಚಟುವಟಿಕೆಗಳು ಮಾತ್ರ ನಿಲ್ಲೋದೆ ಇಲ್ಲಾ ಅನ್ನೊದು ಅಂತು ಗ್ಯಾರಂಟಿ.
ಸಿಆರ್ ಡಿಸಿಪಿ ಸಿದ್ದನಗೌಡ ಪಾಟೀಲ, ಎಸಿಪಿ ಬಿ ಎಮ್ ಗಂಗಾಧರ, ಸದಾಶಿವ ಕಟ್ಟಿಮನಿ, ಸಿಆರ್ ಪಿಐ ವಿಠ್ಠಲ ಕೊಕಟನೂರ, ಕರೆಪ್ಪ ಗಾಂಜಿ, ಪಿಎಸ್ಐ ಅವಿನಾಶ ಯರಗೋಪ್ಪ, ಲಕ್ಷ್ಮಣ ಕರಿಗೌಡರ, ಮಣಿಕಂಠ ಪೂಜಾರಿ, ಹೊನ್ನಪ್ಪ ತಳವಾರ, ಮಂಜುನಾಥ ಭಜಂತ್ರಿ ಮಂಜುನಾಥ ನಾಯಿಕ, ಆದಿತ್ಯ ರಾಜನ್ ಸೇರಿದಂತೆ ನಗರದ ಹಲವು ಠಾಣೆಯ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.