ಬೆಳಗಾವಿ : ಬೆಳಗಾವಿಯ ಪ್ರತಿಷ್ಠಿತ ಹಾಗೂ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆಎಲ್ ಇ ಸಂಸ್ಥೆಯ ಮಾತೃ ಸಂಸ್ಥೆ ಎನಿಸಿಕೊಂಡಿರುವ ಜಿ.ಎ. ಪ್ರೌಢಶಾಲೆಯ ಉಪ ಪ್ರಾಚಾರ್ಯ ಎಸ್. ಆರ್. ಗದಗ ಅವರು ಶುಕ್ರವಾರ ಸೇವಾ ನಿವೃತ್ತರಾದ ಹಿನ್ನೆಲೆಯಲ್ಲಿ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಸೇವಾ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ತಮ್ಮ ಜೀವನದ ಮಹತ್ವದ ಮಹತ್ವದ ಕ್ಷಣಗಳನ್ನು ಹಂಚಿಕೊಂಡ ಎಸ್ .ಆರ್. ಗದಗ ಅವರು 1991ರಲ್ಲಿ ಜಿಎ ಪ್ರೌಢಶಾಲೆಗೆ ಅರೆಕಾಲಿಕ ಶಿಕ್ಷಕನಾಗಿ ನಾನು ಸೇರಿಕೊಂಡಾಗ ಕೇವಲ 400 ರೂ. ಸಂಬಳ ನಿಗದಿಯಾಗಿತ್ತು. ಇಷ್ಟು ವರ್ಷಗಳ ಕಾಲ ಈ ಹೆಮ್ಮೆಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಅವರು ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ನನ್ನ ಕುಟುಂಬದಲ್ಲಿ ವಕೀಲರು ಸೇರಿದಂತೆ ಪ್ರತಿಷ್ಠಿತ ವೃತ್ತಿಯಲ್ಲಿ ಇದ್ದರು. ಆದರೆ, ನನ್ನ ಹೆತ್ತವರಿಗೆ ನನ್ನನ್ನು ಶಿಕ್ಷಕನಾಗಿ ಬೆಳೆಸಬೇಕು ಎಂಬ ದೊಡ್ಡ ಕನಸಿತ್ತು. ಅದಕ್ಕೆ ತಕ್ಕಂತೆ ನಾನು ಶಿಕ್ಷಕನಾಗಿ ಸೇವೆ ಸಲ್ಲಿಸಿ ನನ್ನ ಹಿರಿಯರ ಆಸೆ-ಆಕಾಂಕ್ಷೆ ಪೂರೈಸಿದ ಹೆಮ್ಮೆ ನನಗಿದೆ. ಕಳೆದ 30 ವರ್ಷಗಳ ಶಿಕ್ಷಕ ವೃತ್ತಿಯ ಸೇವಾ ಅವಧಿಯಲ್ಲಿ ನಾನು ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡಿದ್ದೇನೆ ಎಂಬ ನಂಬಿಕೆ ನನ್ನದು. ಶಿಕ್ಷಕ ವೃತ್ತಿಯಲ್ಲಿ ನನಗೆ ಎದುರಾದ ಸವಾಲು ಹಾಗೂ ಜವಾಬ್ದಾರಿಯನ್ನು ಶಿರಸಾವಹಿಸಿ ಪಾಲಿಸಿದ್ದೇನೆ. ಬೆಳಗಾವಿಯ ಈ ಪ್ರತಿಷ್ಠಿತ ಪ್ರೌಢಶಾಲೆ ಹೆಮ್ಮೆಯ ಸಂಸ್ಥೆಯಾಗಿ ಬೆಳೆಯುವಲ್ಲಿ ನನಗೆ ಜೊತೆಯಾಗಿ ಹೆಗಲುಕೊಟ್ಟ ನನ್ನ ಸಹೋದ್ಯೋಗಿಗಳ ಸಹಕಾರವನ್ನು ಎಂದಿಗೂ ಮರೆಯಲಾರೆ ಎಂದು ಅವರು ಇತರ ಶಿಕ್ಷಕರ ಸೇವೆ-ಸಹಕಾರವನ್ನು ಕೊಂಡಾಡಿದರು.
ಇದೀಗ ನಾನು ಶಿಕ್ಷಕ ವೃತ್ತಿಯಿಂದ ನಿವೃತ್ತನಾಗುತ್ತಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮಾಡಬೇಕೆಂಬ ತುಡಿತ ಇದೆ. ಈ ನಿಟ್ಟಿನಲ್ಲಿ ನಾನು ಭವಿಷ್ಯದಲ್ಲಿ ಈ ಸಮಾಜಕ್ಕಾಗಿ ನನ್ನ ಸೇವೆಯನ್ನು ಮೀಸಲಿಡುತ್ತೇನೆ ಎಂದು ಅವರು ಪ್ರಕಟಿಸಿದರು.
ಪ್ರಾಚಾರ್ಯ ರವಿ ಪಾಟೀಲ ಮಾತನಾಡಿ, ಎಸ್.ಆರ್. ಗದಗ ಅವರನ್ನು ಬೀಳ್ಕೊಡುತ್ತಿರುವ ಈ ಕಾರ್ಯಕ್ರಮ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಅವರ ಸೇವೆ ಇನ್ನಷ್ಟು ಕಾಲ ನಮ್ಮ ಈ ಸಂಸ್ಥೆಗೆ ಬೇಕಾಗಿತ್ತು. ಗದಗ ಅವರು ಅತ್ಯಂತ ಹೃದಯ ವೈಶಾಲ್ಯದ ವ್ಯಕ್ತಿಯಾಗಿದ್ದಾರೆ. ನಾನು ಮತ್ತು ಗದಗ ಅವರು ಸುದೀರ್ಘ ಅವಧಿವರೆಗೆ ಶಾಲೆಯ ಬೆಳವಣಿಗೆಗೆ ತೊಡಗಿಸಿಕೊಂಡಾಗ ಅವರಿಂದ ಕಾಲಕಾಲಕ್ಕೆ ಸಾಕಷ್ಟು ಸಲಹೆಗಳನ್ನು ಪಡೆದುಕೊಂಡಿರುವುದನ್ನು ಅವರು ನೆನಪಿಸಿಕೊಂಡರು.
ಒಬ್ಬ ಆಡಳಿತಗಾರನಿಗೆ ನಾಡಿಮಿಡಿತ ಇರಬೇಕು. ಅಂತೆಯೇ ಉಪಪ್ರಾಚಾರ್ಯರಾಗಿ ಯಶಸ್ಸು ಕಂಡಿದ್ದಾರೆ. ಇಂದು ಬುದ್ದಿಜೀವಿಗಳು ಬಹಳ ಸಿಗುತ್ತಾರೆ. ಜ್ಞಾನಕ್ಕೆ ಕೊರತೆ ಇಲ್ಲ. ಆದರೆ, ಬುದ್ಧಿಜೀವಿಗಳಲ್ಲಿ ಹೃದಯವಂತರು ಕಷ್ಟ. ಆದರೆ, ಈ ಬುದ್ಧಿಜೀವಿಗಳಲ್ಲಿ ಹೃದಯವಂತರು ಇದ್ದರೆ ಅದು ಗದಗ ಅವರು ಮಾತ್ರ ಎಂದು ಬಣ್ಣಿಸಿದರು.
ನಮ್ಮ ಸೇವಾ ದಿನಗಳಲ್ಲಿ ಹಲವಾರು ಕಷ್ಟಗಳು ಎದುರಾದವು, ಆ ಸಂದರ್ಭದಲ್ಲಿ ಗದಗ ಅವರು ತಮ್ಮಲ್ಲಿರುವ ನಾಯಕತ್ವ ಗುಣಗಳನ್ನು ಅಂತಹ ಸವಾಲುಗಳನ್ನು ಮೆಟ್ಟಿನಿಂತು ನನಗೆ ಆತ್ಮವಿಶ್ವಾಸವನ್ನು ತುಂಬಿಕೊಟ್ಟರು. ಅವರಲ್ಲಿ ಇರುವ ಇಂತಹ ಗುಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಾವಿರಾರು ವಿದ್ಯಾರ್ಥಿಗಳ ಕಷ್ಟ ಕಾರ್ಪಣ್ಯಗಳನ್ನು ಗಮನಿಸಿ ಕಾರ್ಯಭಾರ ನಿರ್ವಹಿಸುವುದು ಸಾಮಾನ್ಯವಲ್ಲ. ಶಿಕ್ಷಕರ ಪಾಲಿಗೆ ಗದಗ ಅವರು ಮಾದರಿಯಾದ ವ್ಯಕ್ತಿ ಎಂದು ಕೊಂಡಾಡಿದರು.
ಸಿ.ಪಿ. ದೇವರ್ಷಿ ಅವರು ನೂತನ ಉಪ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡರು.
ಪ್ರಿಯಾ ಸುಣಗಾರ ಪ್ರಾರ್ಥಿಸಿದರು. ಎಂ.ಎಸ್. ಮಗದುಮ ಸ್ವಾಗತಿಸಿದರು. ಸಿ.ಪಿ. ದೇವರ್ಷಿ, ವಿ.ಐ.ಅಂಗಡಿ, ಎಸ್.ಎಸ್. ಹಲವಾಯಿ, ಪಿ.ಎಸ್. ಚಿಮ್ಮಡ, ಡಿ.ಎಸ್.ಪವಾರ ಅನಿಸಿಕೆ ವ್ಯಕ್ತಪಡಿಸಿದರು. ಎಸ್.ಬಿ. ಕೋರೆ ವಂದಿಸಿದರು. ಆರ್.ಎಂ. ಮಗದುಮ ನಿರೂಪಿಸಿದರು.