ಜನ ಜೀವಾಳ ಜಾಲ: ಬೆಳಗಾವಿ :
ಎಸ್.ಎಸ್. ಎಲ್ .ಸಿ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಮಹತ್ವದ ಘಟ್ಟವಾಗಿದ್ದು ನಿಮ್ಮ ತಂದೆ-ತಾಯಿ ನಿಮ್ಮೆಲ್ಲರ ಜೀವನದ ಬಗ್ಗೆ ಕಂಡ ಕನಸನ್ನು ಸಾಕಾರಗೊಳಿಸಿ ಎಂದು ಬೆಳಗಾವಿಯ ಸರ್ದಾರ್ಸ್ ಪ್ರೌಢಶಾಲೆಯ ಉಪಪ್ರಾಚಾರ್ಯ ಶಿವಶಂಕರ ಹಾದಿಮನಿ ಕರೆ ನೀಡಿದರು.
ಕೆಎಲ್ ಇ ಸಂಸ್ಥೆಯ ಗಿಲಗಂಚಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೀವನದ ಮಹತ್ವದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜವಾಬ್ದಾರಿ ಮೆರೆಯಬೇಕು. ನಿಮ್ಮ ತಂದೆ-ತಾಯಿ ನಿಮ್ಮ ಬಗ್ಗೆ ಹಲವಾರು ಶ್ರೇಷ್ಠ ಕನಸುಗಳನ್ನು ಕಂಡಿರುತ್ತಾರೆ. ಅದನ್ನು ನನಸು ಮಾಡುವ ಮಹತ್ತರ ಹೊಣೆ ನಿಮ್ಮ ಮೇಲಿದೆ. ಭವಿಷ್ಯದ ಬಗ್ಗೆ ಉತ್ತಮ ಕನಸುಗಳನ್ನು ಕಂಡು ಅದನ್ನು ಸಾಕಾರಗೊಳಿಸಿಕೊಳ್ಳಿ. ಈ ಮೂಲಕ ಅವರು ನಿಮ್ಮ ಜೀವನದ ಕನಸನ್ನು ನನಸು ಮಾಡಿ. ನೀವೆಲ್ಲರೂ ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ತರಬೇಕು ಎಂದು ಅವರು ಕಿವಿಮಾತು ಹೇಳಿದರು.
ಉಪ ಪ್ರಾಚಾರ್ಯ ಎಸ್. ಆರ್. ಗದಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬೇಕಾದ ಅಗತ್ಯ ಮುನ್ನೆಚ್ಚರಿಕೆ ಪಡೆದುಕೊಂಡು ಸಾಧನೆ ಮಾಡುವಂತೆ ತಿಳಿಸಿದರು.
ಶಿಕ್ಷಕಿ ಎ.ಆರ್. ಪಾಟೀಲ ಮಾತನಾಡಿ, ಗುರು-ಶಿಕ್ಷಕರ ಸಂಬಂಧ ಮೊದಲಿನಂತೆ ಇಲ್ಲ. ಅದನ್ನು ಕಾಪಾಡಿಕೊಂಡು ಹೋಗಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕೆಲವೇ ಕೆಲವು ಕೆಲ ದಿನಗಳು ಮಾತ್ರ ಉಳಿದಿದೆ. ಹಾರ್ಡ್ ವರ್ಕ್, ನಿರಂತರ ಶ್ರಮದಿಂದ ಓದಿದರೆ ಅದರ ಫಲ ಸಿಕ್ಕೆ ಸಿಗುತ್ತದೆ. ಕಠಿಣ ಪರಿಶ್ರಮದಿಂದ ಓದಿ ಸಾಧನೆ ಮಾಡಬೇಕು. ಸತತ ಪ್ರಯತ್ನ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜೀವನದಲ್ಲಿ ಮಾನವೀಯ ಗುಣಗಳು, ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕಿ ವಿಶಾಲಾಕ್ಷಿ. ಐ. ಅಂಗಡಿ ಮಾತನಾಡಿ, ಜೀವನದಲ್ಲಿ ಗುರಿ ಇಟ್ಟು ಅದನ್ನು ಸಾಧಿಸಲು ಪಣ ತೊಡಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿನಿ ಚೈತ್ರಾ ಕರೆಣ್ಣವರ ಮಾತನಾಡಿ,ಜಿ.ಎ.ಪ್ರೌಢಶಾಲೆಯ ಬಗ್ಗೆ ಬರೆದ ಕವನ ವಾಚಿಸಿದರು.ವಿದ್ಯಾರ್ಥಿ ಪ್ರತಿನಿಧಿ ಉಷಾ ರಾಠೋಡ ಮಾತನಾಡಿ, ನಮ್ಮ ಶಿಕ್ಷಕರು ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೋ ಅದೇ ರೀತಿ ನಮ್ಮ ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ಅಭಿಮಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಕಾವ್ಯಾಂಜಲಿ ಕಿಣೇಕರ ಮಾತನಾಡಿ, ಕಲ್ಲಾಗಿ ಬಂದ ನಾವು ಶಿಲೆಯಾಗಿ ಹೊರ ಹೊಮ್ಮುತ್ತಿದ್ದೇವೆ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಂಡಿದ್ದಾರೆ. ನಮ್ಮ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಶಿಕ್ಷಕರು ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ತಮ್ಮ ಅನಿಸಿಕೆ ವ್ಯಕ್ತಪಡಿಸಿದ ವಿದ್ಯಾರ್ಥಿನಿ ಸಂಜನಾ ಹುಬ್ಬಳ್ಳಿ , ಐದು ವರ್ಷ ಹೇಗೆ ಕಳೆದೆವು ಗೊತ್ತಾಗಲೇ ಇಲ್ಲ. ಈ ಶಾಲೆ ನಮ್ಮ ಜೀವನ ರೂಪಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನಮ್ಮನ್ನು ವಿಶೇಷವಾಗಿ ಅಣಿಗೊಳಿಸಿ ಪಾಠ ಮಾಡಿ ಜೀವನ ರೂಪಿಸುವಲ್ಲಿ ಬಹು ಅಮೂಲ್ಯ ಪಾತ್ರ ವಹಿಸಿದ್ದಾರೆ. ನಮ್ಮ ಮುಂದಿನ ಜೀವನ ಶ್ರೇಷ್ಠವಾಗುವಲ್ಲಿ ನಮ್ಮ ಶಿಕ್ಷಕರ ಪಾತ್ರ ಎಂದೂ ಮರೆಯಲಾಗದು. ಶಾಲೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇಲ್ಲಿ ಓದುತ್ತಿರುವ ನಾವು ನಿಜಕ್ಕೂ ಭಾಗ್ಯಶಾಲಿಗಳು ಎಂದು ಹೇಳಿದರು.
ಪ್ರಾಚಾರ್ಯ ಆರ್. ಎಸ್. ಪಾಟೀಲ, ಒಕ್ಕೂಟದ ಕಾರ್ಯಾಧ್ಯಕ್ಷ ಆರ್.ಎಂ. ಮಗದುಮ್ಮ, ವಿದ್ಯಾರ್ಥಿ ಪ್ರತಿನಿಧಿ ಸಂಪತ ಗೌಡ ಪಾಟೀಲ ಉಪಸ್ಥಿತರಿದ್ದರು.
ಪಾರ್ವತಿ ಚಿಮ್ಮಡ, ಸೀಮಾ ಕೋರೆ, ಪ್ರಭು ನಿಡೋಣಿ, ಹನುಮಂತ ವೀರಗಂಟಿ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು. ಕಾವೇರಿ ಪಟ್ಟಣ ಸ್ವಾಗತಿಸಿದರು. ರವಿ ಮುಳಕೂರ ವಂದಿಸಿದರು.