ಬೆಳಗಾವಿ: ಪ್ರತಿಷ್ಠಿತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಪಕ್ಷಕ್ಕೆ ಹೊಸ ವರ್ಷದಲ್ಲಿ ಹೊಸಬರು ಅಧ್ಯಕ್ಷರಾಗುತ್ತಾರೆ ಎಂಬ ಚರ್ಚೆ ಜೋರಾಗಿ ನಡೆದಿದೆ. ಹೊಸ ವರ್ಷಕ್ಕೆ ಹೊಸ ನೀರು ಹರಿದು ಬರುವ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ತೆರೆಯ ಹಿಂದೆ ಅಧ್ಯಕ್ಷ ಹುದ್ದೆ ಬಯಸುವವರು ಜೋರಾಗಿ ತಮ್ಮ ಹಕ್ಕು ಪ್ರತಿಪಾದನೆಯನ್ನು ಮುಂದಿಟ್ಟಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ.
ಬೈಲಹೊಂಗಲದ ಮಹಾಂತೇಶ ಮತ್ತಿಕೊಪ್ಪ ಹಾಗೂ ಬಸವರಾಜ ಶೇಗಾವಿ ಅವರು ಜಿಲ್ಲಾ ಕಾಂಗ್ರೆಸ್ ಹುದ್ದೆಗೆ ತಮ್ಮ ಹಕ್ಕು ಮಂಡಿಸಿದ್ದಾರೆ. ಈ ಸಲವೂ ಲಿಂಗಾಯತರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆ ನೀಡಬೇಕು ಎಂಬ ಸಮರ್ಥನೆ ವ್ಯಕ್ತವಾಗಿದೆ. ಈ ಪ್ರತಿಷ್ಠಿತ ಹುದ್ದೆಯನ್ನು ಲಿಂಗಾಯತರಿಗೆ ನೀಡಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕಾರಣವಾಗಬಹುದು ಎಂಬುದು ಕಾಂಗ್ರೆಸ್ ಪಕ್ಷದಲ್ಲಿರುವ ಲಿಂಗಾಯತ ನಾಯಕರ ಪ್ರಬಲವಾದ ಸಮರ್ಥನೆಯಾಗಿದೆ.
ಮಹಾಂತೇಶ ಮತ್ತಿಕೊಪ್ಪ ಹಾಗೂ ಬಸವರಾಜ ಶೇಗಾವಿ ಅವರ ನಡುವೆ ಈ ಹುದ್ದೆಗೆ ಪ್ರಬಲ ಪೈಪೋಟಿ ಏರ್ಪಟ್ಟಿರುವ ನಡುವೆ ಅವರಿಗೆ ಮತ್ತೊಬ್ಬ ಯುವ ಹುರಿಯಾಳು ಈಗ ಸವಾಲೊಡ್ಡಿದ್ದಾರೆ. ಅವರೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧಿಸಿ ಇಡೀ ರಾಜ್ಯದ ಗಮನ ಸೆಳೆದಿರುವ ಯುವ, ವರ್ಚಸ್ಸು ಹೊಂದಿರುವ ಮೃಣಾಲ್ ಹೆಬ್ಬಾಳ್ಕರ್. ಮೃಣಾಲ್ ಹೆಬ್ಬಾಳ್ಕರ್ ಅವರು ಜಿಲ್ಲೆಯಲ್ಲಿ ಓಡಾಡಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕನಸು ಕಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಗತವೈಭವದ ಮೆರುಗು ನೀಡಲು ಅವರು ಸನ್ನದ್ಧರಾಗಿದ್ದಾರೆ. ರಾಜ್ಯದ ಪ್ರಭಾವಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ತಮ್ಮ ಸುಪುತ್ರನನ್ನು ಕಾಂಗ್ರೆಸ್ ಪಕ್ಷದ ಈ ಪ್ರತಿಷ್ಠಿತ ಸ್ಥಾನಕ್ಕೆ ತರುವ ಮೂಲಕ ಮುಂದಿನ ದಿನಗಳಲ್ಲೂ ತಮ್ಮ ಹಿಡಿತವನ್ನು ಸಾಧಿಸುವ ಬಯಕೆ ಹೊಂದಿದ್ದಾರೆ. ಮೃಣಾಲ್ ಅವರು ಪ್ರಭಾವಿ ಸಚಿವೆಯ ಮಗನಾದರೂ ಈ ಹುದ್ದೆಗೆ ತಾನು ಅತ್ಯಂತ ಸಮರ್ಥ ಎನ್ನುವುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಅತ್ಯಂತ ಹುರುಪಿನಿಂದ ಓಡಾಡಿ ಕಾಂಗ್ರೆಸ್ ಪಕ್ಷಕ್ಕೆ ಗಣನೀಯ ಸಂಖ್ಯೆಯಲ್ಲಿ ಮತ ತಂದು ಕೊಟ್ಟಿರುವುದು ಅವರ ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇನ್ನೂ ಯುವಕರಾಗಿರುವ ಕಾರಣಕ್ಕೆ ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಸಮರ್ಥವಾದ ರೀತಿಯಲ್ಲಿ ಕಟ್ಟಲು ಯೋಗ್ಯರು ಎನ್ನುವುದನ್ನು ನಿರೂಪಿಸಿದ್ದಾರೆ.
ತಮ್ಮ ವಾಕ್ಚಾತುರ್ಯ, ಸಂಘಟನಾ ಶಕ್ತಿ ಹಾಗೂ ಪ್ರಭಾವದಿಂದ ಅವರು ರಾಜ್ಯದ ಕಾಂಗ್ರೆಸ್ ನಾಯಕರು ವಿಶ್ವಾಸ ಗಳಿಸಿ ಬೆಳಗಾವಿ ಜಿಲ್ಲೆಯ ನೂತನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು ಅಚ್ಚರಿಪಡಬೇಕಾಗಿಲ್ಲ.
ಈ ನಡುವೆ ಸಚಿವೆಯ ನಾಗಾಲೋಟದ ಅಬ್ಬರಕ್ಕೆ ಕಡಿವಾಣ ಹಾಕಲು ತೆರೆಮರೆಯ ಹಿಂದೆ ಪ್ರಯತ್ನಗಳು ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಅದನ್ನು ಜಯಿಸಿ ಒಂದು ವೇಳೆ ಮೃಣಾಲ್ ಅವರಿಗೆ ಅಧ್ಯಕ್ಷ ಹುದ್ದೆ ಅರಸಿಕೊಂಡು ಬಂದು ಅವರು ಸಾರಥ್ಯ ವಹಿಸಿಕೊಂಡರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ನವ ಚೈತನ್ಯ ಹಾಗೂ ಹೊಸ ಹುರುಪು ಬರುವುದರಲ್ಲಿ ಯಾವ ಸಂದೇಹವೂ ಇಲ್ಲ.