ಮುಂದಿನ ದಿನಗಳಲ್ಲಿ ಬ್ಯಾಂಕುಗಳಿಗೆ ಸರಿಸಮಾನವಾಗಿ ಸಾಲದ ಬಡ್ಡಿ ದರವನ್ನು ನಿಗದಿಗೊಳಿಸುತ್ತೇವೆ. ಈಗಾಗಲೇ ಕಡಿಮೆ ಬಡ್ಡಿ ದರದಲ್ಲಿಯೇ ಸಾಲ ನೀಡುವ ಮೂಲಕ ಗ್ರಾಹಕರ ಜನಸ್ನೇಹಿ ಸಂಘವಾಗಿ ಗುರುತಿಸಲ್ಪಟ್ಟಿದೆ ಎಂದು ಗುರು ವಿವೇಕಾನಂದ ವಿವಿಧ ಉದ್ದೇಶಗಳ ಸಹಕಾರ ಸಂಘದ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಹೇಳಿದರು.
ಬೆಳಗಾವಿ:
ಸಾಧಕರ ಸಾಧನೆ ಹಿಂದೆ ಪರಿಶ್ರಮ ಮತ್ತು ಕಣ್ಣೀರಿನ ಕಥೆ ಇರುತ್ತದೆ. ಎಷ್ಟೋ ರಾತ್ರಿಗಳನ್ನು ಹಗಲುಗಳನ್ನಾಗಿ ಪರಿವರ್ತಿಸಿಕೊಂಡಾಗ ಮಾತ್ರ ಸಾಧಕರಾಗಲು ಸಾಧ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಮುರುಗೇಶ ಎಚ್.ಎಂ. ಅಭಿಪ್ರಾಯಪಟ್ಟರು.
ನಗರದ ಭಡಕಲ್ ಗಲ್ಲಿಯ ಬನಶಂಕರಿ ದೇವಸ್ಥಾನದ ಸಭಾಗೃಹದಲ್ಲಿ ರವಿವಾರ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ 11ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.
ಸಾಧನೆಯ ಮೆಟ್ಟಿಲು ಏರಲು ಅಡ್ಡ ಮಾರ್ಗವನ್ನು ಹಿಡಿಯದೇ ನ್ಯಾಯೋಚಿತ ಮಾರ್ಗವನ್ನು ಅನುಸರಿಸಬೇಕು. ಇದು ಇತರರಿಗೂ ಮಾದರಿ ಆಗುತ್ತದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿ ಅದರಿಂದ ತಮ್ಮ ಗುರಿಯನ್ನು ತಲುಪಬೇಕು. ಬಡತನವನ್ನು ಹಿಮ್ಮೆಟ್ಟಿಸಿ ತಮ್ಮ ತಂದೆ-ತಾಯಿ ಪಟ್ಟ ಶ್ರಮಕ್ಕೆ ನಿಮ್ಮ ಸಾಧನೆ ತೋರಿಸಿಕೊಡಬೇಕು ಎಂದು ಸಲಹೆ ನೀಡಿದರು.
ವಿದ್ಯೆ ಸಾಧಕರ ಸ್ವತ್ತು, ಸೋಮಾರಿಗಳ ಸ್ವತ್ತಲ್ಲ ಎಂಬ ಅರಿವು ಇರಬೇಕು. ಸವಾಲಿಲ್ಲದೇ ಸಾಧನೆ ಮಾಡಿದರೆ ಅದು ಯಶಸ್ಸು. ಸವಾಲುಗಳ ಮಧ್ಯೆ ಸಾಧನೆ ಮಾಡಿದರೆ ಅದು ಇತಿಹಾಸವಾಗುತ್ತದೆ. ವಿದ್ಯಾರ್ಥಿಗಳು ಏನನ್ನಾದರೂ ಕಳೆದುಕೊಳ್ಳಿ, ಆದರೆ ನಿಮ್ಮನ್ನು ನೀವು ಕಳೆದುಕೊಳ್ಳಬೇಡಿ. ಒಂದೊಮ್ಮೆ ನಮ್ಮತನವನ್ನು ಕಳೆದುಕೊಂಡರೆ ಸಾತ್ವಿಕ ಬದುಕು ನಡೆಸುವುದು ಕಷ್ಟವಾದೀತು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಮುಂದೆ ಮುನ್ನುಗ್ಗಬೇಕು ಎಂದರು.
ಲಾಭಕ್ಕಾಗಿ ಹುಟ್ಟಿಕೊಂಡ ಸಂಸ್ಥೆಗಳು ಅನೇಕ. ಆದರೆ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಂಘ ಲಾಭದ ಜತೆಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳ ಮೂಲಕ ಪಾರದರ್ಶಕವಾಗಿ ಸೇವೆ ನೀಡುತ್ತಿರುವುದು ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ. 11 ವರ್ಷಗಳಿಂದ ಸಂಘದ ಸದಸ್ಯರ ಮಕ್ಕಳ ಪ್ರತಿಭೆ ಗುರುತಿಸಿ ಆರ್ಥಿಕವಾಗಿ ಸಹಾಯ ಮಾಡುವುದರ ಜತೆಗೆ ಅವರ ಉನ್ನತಿಗಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು.
ಸಂಘದ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಆರಂಭದಿಂದ ಇಲ್ಲಿಯವರೆಗೆ ‘ಎ’ ಗ್ರೇಡ್ ನಿರಂತರ ಕಾಯ್ದುಕೊಂಡು ಬಂದಿರುವುದು ಸಂಘದ ಹೆಗ್ಗಳಿಕೆ ಆಗಿದೆ. ನಮ್ಮ ಸಂಘ ಪಾರದರ್ಶಕ ಆಡಳಿತ ಮತ್ತು ವೈಜ್ಞಾನಿಕವಾಗಿ ವ್ಯವಹಾರ ನಡೆಸುತ್ತಿದೆ. ಸಂಸ್ಥೆಯ ಗ್ರಾಹಕರು ಇಟ್ಟ ನಂಬಿಕೆ, ವಿಶ್ವಾಸ, ನಿಕಟವಾದ ಸಂಬಂಧ, ವ್ಯವಹಾರಗಳಿಂದ ಸಂಘ ಸದೃಢವಾಗಿ ಬೆಳೆದು ನಿಲ್ಲಲು ಕಾರಣವಾಗಿದೆ. ಸಂಘಕ್ಕೂ ಮತ್ತು ಗ್ರಾಹಕರಿಗೂ ತೊಂದರೆ ಆಗದ ರೀತಿಯಲ್ಲಿ ವ್ಯವಹಾರ ನಡೆಸುತ್ತಿದ್ದೇವೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಕೇಳುವ, ಆಲಿಸುವ ಕುತೂಹಲ ಇರಬೇಕು. ಅವರಲ್ಲಿರುವ ಕುತೂಹಲ ಜ್ಞಾನದ ಅಭಿರುಚಿಯನ್ನು ಬೆಳೆಸುತ್ತದೆ. ಜ್ಞಾನವು ವಿದ್ಯಾರ್ಥಿಗಳ ಬಾಳು ಬೆಳಗಿಸುತ್ತದೆ. ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಬದುಕು ಬದಲಾಗಲು ಸಾಧ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಶಿಕ್ಷಣದಿಂದ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದರು.
39 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಮತ್ತು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಆನಂದ ರಾವ್, ನಿರ್ದೇಶಕರಾದ ಭಾರತಿ ಶೆಟ್ಟಿಗಾರ, ಸತೀಶ ಮನ್ನಿಕೇರಿ, ಆನಂದ ಶೆಟ್ಟಿ, ಗಣೇಶ ಮರಕಾಲ, ಸುರೇಶ ನಾಯಿರಿ, ದುರ್ಗಪ್ಪ ತಳವಾರ, ರೂಪಾ ಮಗದುಮ್, ಗಣೇಶ ನಾಯಕ್ ಸೇರಿದಂತೆ ಸದಸ್ಯರು, ವಿದ್ಯಾರ್ಥಿಗಳು ಇದ್ದರು.
ನಿರ್ದೇಶಕ ರಾಜೇಶ ಗೌಡ, ಪಿಗ್ಮಿ ಸಂಗ್ರಹಕಾರರಾದ ಮಹಾಲಿಂಗ ಮದವಾಲ್, ಶಾಂತಿನಾಥ ಪಾಟೀಲ, ವಿದ್ಯಾರ್ಥಿನಿ ದೀಪಾ ನಾವಿ ಅನಿಸಿಕೆ ವ್ಯಕ್ತಪಡಿಸಿದರು. ಸಂಘದ ಕಾರ್ಯದರ್ಶಿ ವಿಶಾಲ ಪಾಟೀಲ ವರದಿ ವಾಚನ ಮಾಡಿದರು. ಶಾಂಭವಿ ತೋರಲೆ ಪ್ರಾರ್ಥಿಸಿದರು. ಭೈರೋಬಾ ಕಾಂಬಳೆ ಸ್ವಾಗತಿಸಿದರು. ಡಾ. ಮಲ್ಲೇಶ ದೊಡ್ಡಲಕ್ಕನ್ನವರ ನಿರೂಪಿಸಿದರು. ಅಂಜನಕುಮಾರ ಗಂಡಗುದರಿ ವಂದಿಸಿದರು.
ಫೋಟೊ:
ಬೆಳಗಾವಿ ನಗರದ ಭಡಕಲ್ ಗಲ್ಲಿಯ ಬನಶಂಕರಿ ದೇವಸ್ಥಾನದ ಸಭಾಗೃಹದಲ್ಲಿ ರವಿವಾರ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ 11ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.