ಜಾಗತಿಕ ಲಿಂಗಾಯತ ಮಹಾಸಭಾ ಅಸಮಾಧಾನ
ಬೆಳಗಾವಿ: ನಗರದ ಮಾಳಮಾರುತಿ ಬಡಾವಣೆಯ ಬಸವ ಆರ್ಟ್ ಗ್ಯಾಲರಿ ಸುತ್ತಲಿನ ಖಾಲಿ ಜಾಗೆಯಲ್ಲಿ ಕಮರ್ಶಿಯಲ್ ಕಟ್ಟಡಗಳ ನಿರ್ಮಾಣ ಯತ್ನ ಕೈಬಿಡುವಂತೆ ಲಿಂಗಾಯತ ಸಂಘಟನೆಗಳು ಎಚ್ಚರಿಸಿವೆ.
ಮಾಳಮಾರುತಿ ಬಡಾವಣೆಯ ಸೆಕ್ಟರ್ 9ರಲ್ಲಿ ಕಳೆದ ೫ ವರ್ಷಗಳ ಹಿಂದೆ ನಿರ್ಮಿತ ಬಸವ ಆರ್ಟ್ ಗ್ಯಾಲರಿ ಮತ್ತು ಅನುಭವ ಮಂಟಪದ ಪೂರ್ಣ ಅಭಿವೃದ್ಧಿ ಆಗಿಲ್ಲ. ಬದಲಾಗಿ ಇತ್ತೀಚೆಗೆ ಅದರ ಅಭಿವೃದ್ಧಿ ಹೆಸರಿನಲ್ಲಿ ಆರ್ಟ್ ಗ್ಯಾಲರಿ ಪಕ್ಕದ ಖಾಲಿ ಜಾಗದಲ್ಲಿ ವ್ಯಾಪಾರಿ ಮಳಿಗೆಗಳನ್ನು ಕಟ್ಟಲು ವ್ಯರ್ಥ ಪ್ರಯತ್ನಗಳು ನಡೆದಿವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಇತರ ಲಿಂಗಾಯತ ಸಂಘಟನೆಗಳು ಆರೋಪಿಸಿವೆ.
ಆರ್ಟ್ ಗ್ಯಾಲರಿ ಪಕ್ಕದ ಜಾಗವನ್ನು ಸುಂದರವಾದ ಉದ್ಯಾನ ನಿರ್ಮಾಣಕ್ಕೆ ಮಾತ್ರ ಬಳಕೆ ಮಾಡಬೇಕು. ಉದ್ಯಾನ ಹೊರತು ಇತರ ಕಟ್ಟಡಗಳ ನಿರ್ಮಾಣಕ್ಕೆ ಮುಂದಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಎಚ್ಚರಿಸಿದ್ದಾರೆ.