ನವದೆಹಲಿ: ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ಕ್ರಿಕೆಟ್ ತಂಡಕ್ಕೆ ‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ’ (ಬಿಸಿಸಿಐ) ₹21 ಕೋಟಿ ಬಹುಮಾನ ಘೋಷಣೆ ಮಾಡಿದೆ.
ಭಾನುವಾರ ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಐದು ವಿಕೆಟ್ಗಳ ಜಯ ಸಾಧಿಸಿತ್ತು.
‘ಇದೊಂದು ಅಸಾಧಾರಣ ಗೆಲುವಾಗಿದೆ… ಇದರ ಸಂಭ್ರಮಾಚರಣೆಯ ಭಾಗವಾಗಿ ಭಾರತ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ₹21 ಕೋಟಿ ನಗದು ಬಹುಮಾನ ಘೋಷಿಸಲಾಗಿದೆ’ ಎಂದು ಬಿಸಿಸಿಐ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಏಷ್ಯಾಕಪ್ ಗೆದ್ದ ಭಾರತಕ್ಕೆ, ಸೋತ ಪಾಕ್ಗೆ ಸಿಗುವ ಬಹುಮಾನದ ಹಣ ಎಷ್ಟು?
ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನ ಮಣಿಸಿ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐ ಬೃಹತ್ ಮೊತ್ತದ ಬಹುಮಾನ ಘೋಷಣೆ ಮಾಡಿದೆ.
ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧದ ಅದ್ಭುತ ಜಯಕ್ಕಾಗಿ ಭಾರತೀಯ ತಂಡವನ್ನು ಬಿಸಿಸಿಐ ಶ್ಲಾಘಿಸಿದೆ. ಈ ಐತಿಹಾಸಿಕ ಗೆಲುವಿಗಾಗಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ದೊಡ್ಡ ಮೊತ್ತದ ಬಹುಮಾನವನ್ನು ಘೋಷಣೆ ಮಾಡಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್ಗಳಿಂದ ಜಯಗಳಿಸುವ ಮೂಲಕ ಒಂಬತ್ತನೇ ಬಾರಿಗೆ ಏಷ್ಯಾಕಪ್ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಭಾರತ ಗೆಲ್ಲಲು 147 ರನ್ಗಳ ಅಗತ್ಯವಿತ್ತು. ತಿಲಕ್ ವರ್ಮಾ ಅವರ ಅರ್ಧಶತಕದ ಬಲದಿಂದ ಭಾರತ 5 ವಿಕೆಟ್ಗಳನ್ನು ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು. ಇದರ ಬೆನ್ನಲ್ಲೇ ಬಿಸಿಸಿಐ ಭಾರತೀಯ ಆಟಗಾರರು ಮತ್ತು ತಂಡದ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದೆ.
3 ಹೊಡೆತ ಶೂನ್ಯ ಪ್ರತಿಕ್ರಿಯೆ: ಈ ಕುರಿತು ಬಿಸಿಸಿಐ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಇದರಲ್ಲಿ, “3 ಹೊಡೆತ ಶೂನ್ಯ ಪ್ರತಿಕ್ರಿಯೆ, ಏಷ್ಯನ್ ಚಾಂಪಿಯನ್ಗಳು. ನಾವು ಸಂದೇಶ ಕಳುಹಿಸಿದ್ದೇವೆ. ತಂಡ ಮತ್ತು ಸಹಾಯಕ ಸಿಬ್ಬಂದಿಗೆ 21 ಕೋಟಿ ರೂ. ಬಹುಮಾನ ಮೊತ್ತ ನೀಡುವುದಾಗಿ” ಬಿಸಿಸಿಐ ಘೋಷಣೆ ಮಾಡಿದೆ. ಈ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಮೂರು ಪಂದ್ಯಗಳನ್ನು ಭಾರತ ಗೆದ್ದಿದ್ದನ್ನು ಉಲ್ಲೇಖಿಸಿ ಬಿಸಿಸಿಐ ಈ ಕಾಮೆಂಟ್ ಮಾಡಿದೆ.
ಉಳಿದಂತೆ ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಆಗಿರುವ ಭಾರತ ತಂಡ ಮತ್ತು ರನ್ನರ್ ಅಪ್ ಆಗಿರುವ ಪಾಕಿಸ್ತಾನಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿಂದ ಸಹ ಬಹುಮಾನ ಸಿಗಲಿದೆ. ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಭಾಗಿ ಆಗಲಿಲ್ಲ. ಪಾಕ್ ಮಾತ್ರ ಬಹುಮಾನವನ್ನು ಪಡೆದುಕೊಂಡಿದೆ.
ಎಸಿಸಿ ನೀಡುವ ಬಹುಮಾನದ ವಿವರ
ವಿಜೇತ ತಂಡ – ಭಾರತ 2.63 ಕೋಟಿ ರೂಪಾಯಿ ಪಡೆಯಲಿದೆ.
ರನ್ನರ್ ಅಪ್ ತಂಡ – ಪಾಕಿಸ್ತಾನ 75000 ಅಮೆರಿಕನ್ ಡಾಲರ್ ಪಡೆದುಕೊಂಡಿದೆ.
ಪಂದ್ಯ ಶ್ರೇಷ್ಠ – ತಿಲಕ್ ವರ್ಮಾ, 5000 ಅಮೆರಿಕನ್ ಡಾಲರ್ (ಅಂದಾಜು ರೂ. 4.43 ಲಕ್ಷ) ಮತ್ತು ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ – ಕುಲದೀಪ್ ಯಾದವ್, 15000 ಅಮೆರಿಕನ್ ಡಾಲರ್ (ಅಂದಾಜು 13.30 ಲಕ್ಷ ಭಾರತೀಯ ರೂಪಾಯಿಗಳು) ಪಡೆಯಲಿದ್ದಾರೆ.
ಸರಣಿ ಆಟಗಾರ ಪ್ರಶಸ್ನಿಗೆ ಭಾಜನರಾದ ಅಭಿಷೇಕ್ ಶರ್ಮಾ 15000 ಅಮೆರಿಕನ್ ಡಾಲರ್ (ಸರಿಸುಮಾರು 13.30 ಲಕ್ಷ ಭಾರತೀಯ ರೂಪಾಯಿಗಳು) ಮತ್ತು ಒಂದು SUV ಕಾರು ಪಡೆಯಲಿದ್ದಾರೆ.
ವಿವಾದದಿಂದಲೇ ಆರಂಭವಾದ ಏಷ್ಯಾ ಕಪ್ 2025 ಕೂಟ ವಿವಾದದಿಂದಲೇ ಮುಗಿದಿದೆ. ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ದ ಗೆದ್ದು 9ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿದೆ. ಆದರೆ ಅದರ ಬಳಿಕ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಭಾರತ ತಂಡವು ಟ್ರೋಫಿ ಸ್ವೀಕರಿಸಲಿಲ್ಲ.
ಪಾಕಿಸ್ತಾನದ ಜೊತೆ ಯಾವುದೇ ಬಾಂಧವ್ಯ ಮುಂದುವರಿಸಲು ನಿರಾಕರಿಸಿರುವ ಭಾರತವು ನಿನ್ನೆಯ ಪಂದ್ಯದಲ್ಲೂ ಹ್ಯಾಂಡ್ ಶೇಕ್ ಮಾಡಲಿಲ್ಲ. ಅಲ್ಲದೆ ಪಾಕಿಸ್ತಾನ ಸರ್ಕಾರದ ಸಚಿವರಾಗಿರುವ ಈಗಿನ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದೆ ಇರಲು ನಿರ್ಧರಿಸಿತ್ತು. ಇದು ವಿವಾದಕ್ಕೆ ಕಾರಣವಾಗಿದೆ.
ಆದರೆ ಇಷ್ಟೆಲ್ಲಾ ನಡೆದ ಬಳಿಕ ನಖ್ವಿ ಏಷ್ಯಾ ಕಪ್ ಟ್ರೋಫಿ ಮತ್ತು ಮೆಡಲ್ ಹಿಡಿದುಕೊಂಡು ತನ್ನ ಹೋಟೆಲ್ ರೂಮ್ ಗೆ ಹೋಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಗಂಭೀರ ಆರೋಪ ಮಾಡಿದ್ದಾರೆ.
ಭಾರತ ಏಷ್ಯಾ ಕಪ್ ಟ್ರೋಫಿಯನ್ನು ಆಚರಿಸಲು ಅವಕಾಶ ನೀಡದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ಎಎನ್ಐ ಜೊತೆ ಮಾತನಾಡಿದ ಸೈಕಿಯಾ, ನಖ್ವಿ ಏಷ್ಯಾ ಕಪ್ನೊಂದಿಗೆ ತನ್ನ ಹೋಟೆಲ್ ಕೋಣೆಗೆ ಓಡಿಹೋಗುವುದು ಕ್ರೀಡಾ ಮನೋಭಾವವಲ್ಲ ಎಂದು ಹೇಳಿದರು.
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್, ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಟೂರ್ನಮೆಂಟ್ನಲ್ಲಿ ವಿಜೇತ ತಂಡಕ್ಕೆ ಟ್ರೋಫಿ ನಿರಾಕರಿಸಲಾಗಿದೆ ಎಂದು ಹೇಳಿದರು.
ಭಾರತ ಮೊಹ್ಸಿನ್ ನಖ್ವಿ ಅವರನ್ನು ಬಹಿಷ್ಕರಿಸಿದ್ದೇಕೆ?
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಪಿಸಿಬಿ ಮುಖ್ಯಸ್ಥರನ್ನು ಸೈಕಿಯಾ ತರಾಟೆಗೆ ತೆಗೆದುಕೊಂಡರು. ಅವರ ಕ್ರೀಡಾ ಮನೋಭಾವವಿಲ್ಲದ ನಡವಳಿಕೆಯನ್ನು ಟೀಕಿಸಿದರು. ಪಾಕಿಸ್ತಾನದ ಆಂತರಿಕ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿರುವ ಎಸಿಸಿ ಮುಖ್ಯಸ್ಥರಿಂದ ಟ್ರೋಫಿಯನ್ನು ತೆಗೆದುಕೊಳ್ಳದಿರಲು ಬಿಸಿಸಿಐ ಮೊದಲೇ ನಿರ್ಧರಿಸಿತ್ತು ಎಂದು ಅವರು ಬಹಿರಂಗಪಡಿಸಿದರು.
“ಪಾಕಿಸ್ತಾನದ ಹಿರಿಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿರುವ ಎಸಿಸಿ ಅಧ್ಯಕ್ಷರಿಂದ ಏಷ್ಯಾ ಕಪ್ 2025 ಟ್ರೋಫಿಯನ್ನು ಸ್ವೀಕರಿಸದಿರಲು ನಾವು ನಿರ್ಧರಿಸಿದ್ದೇವೆ. ಅದು ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು” ಎಂದು ಸೈಕಿಯಾ ಹೇಳಿದರು.
ಎಮಿರೇಟ್ಸ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಸಂತೋಷಪಡುತ್ತೇವೆ ಎಂದು ಭಾರತ ಎಸಿಸಿಗೆ ತಿಳಿಸಿತ್ತು. ಆದರೆ, ಭಾರತೀಯ ತಂಡಕ್ಕೆ ಪದಕಗಳನ್ನು ನೀಡಲು ಬಯಸಿದ್ದ ಮೊಹ್ಸಿನ್ ನಖ್ವಿ ಆ ವಿನಂತಿಯನ್ನು ನಿರಾಕರಿಸಿದರು.
ಟ್ರೋಫಿಯೊಂದಿಗೆ ಓಡಿದ ನಖ್ವಿ
ಎರಡೂ ಕಡೆಯವರು ಬಿಕ್ಕಟ್ಟಿನಲ್ಲಿ ಸಿಲುಕಿದಾಗ, ನಖ್ವಿ ವೇದಿಕೆಯಿಂದ ಹೊರಬಂದು ಎಸಿಸಿ ತಂಡಕ್ಕೆ ಪದಕಗಳನ್ನು ಮತ್ತು ವಿಜೇತರ ಟ್ರೋಫಿಯನ್ನು ತೆಗೆದುಕೊಂಡು ಹೋಗಲು ಸೂಚಿಸಿದರು.
“ಅವರಿಗೆ ಟ್ರೋಫಿ ಮತ್ತು ಪದಕಗಳನ್ನು ಅವರೊಂದಿಗೆ ತೆಗೆದುಕೊಳ್ಳುವ ಹಕ್ಕನ್ನು ನೀಡಿಲ್ಲ. ಇದು ಅತ್ಯಂತ ದುರದೃಷ್ಟಕರ ಮತ್ತು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ. ಟ್ರೋಫಿ ಮತ್ತು ಪದಕಗಳನ್ನು ಆದಷ್ಟು ಬೇಗ ಭಾರತಕ್ಕೆ ಹಿಂದಿರುಗಿಸಲಾಗುವುದು ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದರು.
“ಈ ನವೆಂಬರ್ನಲ್ಲಿ ದುಬೈನಲ್ಲಿ ಐಸಿಸಿ ಸಮ್ಮೇಳನ ನಡೆಯಲಿದೆ. ಆ ಸಮ್ಮೇಳನದಲ್ಲಿ, ಎಸಿಸಿ ಅಧ್ಯಕ್ಷರ ಕ್ರಮಗಳ ವಿರುದ್ಧ ನಾವು ಬಹಳ ಗಂಭೀರ ಮತ್ತು ಬಲವಾದ ಪ್ರತಿಭಟನೆಯನ್ನು ಪ್ರಾರಂಭಿಸುತ್ತೇವೆ” ಎಂದು ಅವರು ಹೇಳಿದರು.
“ಭಾರತವು ಆ ದೇಶದೊಂದಿಗೆ ಸಂಘರ್ಷದಲ್ಲಿದೆ, ಮತ್ತು ಅವರನ್ನು ಪ್ರತಿನಿಧಿಸುವ ನಾಯಕರಿಂದ ನಾವು ಟ್ರೋಫಿಯನ್ನು ಸ್ವೀಕರಿಸುತ್ತೇವೆ ಎಂದು ನಿರೀಕ್ಷಿಸಲಾಗಿತ್ತು. ಪ್ರಸ್ತುತ ನಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ರಾಷ್ಟ್ರವನ್ನು ಪ್ರತಿನಿಧಿಸುವ ವ್ಯಕ್ತಿಯಿಂದ ನಾವು ಟ್ರೋಫಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅದು ನಮ್ಮ ನಿಲುವಾಗಿತ್ತು. ಆದರೆ ಅದರ ಅರ್ಥ ಆ ಸಂಭಾವಿತ ವ್ಯಕ್ತಿಗೆ ನಮ್ಮ ತಂಡಕ್ಕೆ ಮೀಸಲಾದ ಟ್ರೋಫಿ ಮತ್ತು ಪದಕಗಳನ್ನು ತೆಗೆದುಕೊಂಡು ಹೋಗಿ ಅವರ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋಗಲು ಹಕ್ಕಿದೆ ಎಂದಲ್ಲ. ಅದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇಂದಿನ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರ ವರ್ತನೆಯ ವಿರುದ್ಧ ನಾವು ಬಲವಾದ ಪ್ರತಿಭಟನೆಯನ್ನು ದಾಖಲಿಸುತ್ತೇವೆ” ಎಂದು ಸೈಕಿಯಾ ಹೇಳಿದರು.
ಏಷ್ಯಾ ಕಪ್ನಿಂದ ಬಂದ ಹಣ ಪಹಲ್ಗಾಮ್ ಸಂತ್ರಸ್ತರಿಗೆ ನೀಡಲು ಸೂರ್ಯಕುಮಾರ್ ನಿರ್ಧಾರ:
ಏಷ್ಯಾ ಕಪ್ ಟೂರ್ನಿಯ ಪಂದ್ಯ ಶುಲ್ಕವನ್ನು
ಸಶಸ್ತ್ರ ಪಡೆಗಳು ಮತ್ತು ಪಹಲ್ಲಾಮ್ ದಾಳಿಯ ಸಂತ್ರಸ್ತರಿಗೆ ನೀಡಲು ನಿರ್ಧರಿಸಿರುವುದಾಗಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
‘ನಮ್ಮ ಸಶಸ್ತ್ರ ಪಡೆಗಳು ಮತ್ತು ಪಹಲ್ಲಾಮ್ನಲ್ಲಿ ಭಯೋತ್ಪಾದಕ ದಾಳಿಗೆ ಒಳಗಾದ ಕುಟುಂಬಗಳಿಗೆ ಬೆಂಬಲ ನೀಡುವ ಸಲುವಾಗಿ ಈ ಟೂರ್ನಿಯ ಪಂದ್ಯ ಶುಲ್ಕವನ್ನು ದೇಣಿಗೆಯಾಗಿ ನೀಡಲು ನಾನು ನಿರ್ಧರಿಸಿದ್ದೇನೆ. ನಿಮ್ಮೊಂದಿಗೆ ನಾನು ಸದಾ ನಿಲ್ಲುತ್ತೇನೆ. ಜೈ ಹಿಂದ್’ ಎಂದು ಸೂರ್ಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರತಿ ಟಿ20 ಪಂದ್ಯಕ್ಕೆ ಭಾರತ ಆಟಗಾರರು ₹4 ಲಕ್ಷ ಗಳಿಸುತ್ತಾರೆ. ಒಟ್ಟು ಏಳು ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ₹28 ಲಕ್ಷ ಗಳಿಸಿದ್ದಾರೆ. ಈ ಮೊತ್ತವನ್ನು ಅವರು ಸಶಸ್ತ್ರ ಪಡೆಗಳು ಮತ್ತು ಪಹಲ್ಲಾಮ್ ಸಂತ್ರಸ್ತರಿಗೆ ದೇಣಿಗೆಯಾಗಿ ನೀಡಲಿದ್ದಾರೆ.
ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡದಿರುವುದರಿಂದ ಹಿಡಿದು ಪಾಕ್ ಸಚಿವ ಮೊಹಸೀನ್ ನ ಕೈಯಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸುವವರೆಗೆ ಹಲವು ಘಟನೆಗಳಿಗೆ ಈ ಟೂರ್ನಿ ಸಾಕ್ಷಿಯಾಗಿತ್ತು. ಪಾಕ್ ಜತೆಗಿನ ಮೊದಲ ಗೆಲುವನ್ನು ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಕುಟುಂಬಗಳಿಗೆ ಅರ್ಪಿಸುವ ಮೂಲಕ ಸೂರ್ಯ ದಂಡನೆಗೂ ಗುರಿಯಾಗಿದ್ದರು.
ಭಾರತದ ಏಷ್ಯಾ ಕಪ್ ಟ್ರೋಫಿ ತೆಗೆದುಕೊಂಡು ಹೋದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ…!
ದುಬೈನಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆದರೂ ಭಾರತದ ಕ್ರಿಕೆಟ್ ತಂಡವು ಪಾಕಿಸ್ತಾನದ ಸಚಿವರೂ ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಚೇರ್ಮನ್ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆದಿದೆ. ಇದಕ್ಕೆ ಕಾರಣರಾದವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಕ್ವಿ.
ಸೂರ್ಯಕುಮಾರ ಯಾದವ್ ಅವರ ನಾಯಕತ್ವದ ಭಾರತೀಯ ತಂಡವು ಪಾಕಿಸ್ತಾನವನ್ನು ಎರಡು ವಾರಗಳೊಳಗೆ ಮೂರನೇ ಬಾರಿ ಸೋಲಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್ಗಳಿಂದ ಸೋಲಿಸಿ ಚಾಂಪಿಯನ್ ಆದ ಭಾರತ ತಂಡಕ್ಕೆ ಟ್ರೋಫಿ ವಿತರಣೆ ಮಾಡುವ ಸಮಾರಂಭ ನಡೆಯಬೇಕಾಗಿತ್ತು. ಆದರೆ, ತೀವ್ರ ತೆರನಾದ ಭಾರತದ ವಿರೋಧಿ ನಿಲುವಿಗೆ ಕುಖ್ಯಾತರಾದ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ಸ್ಪಷ್ಟವಾಗಿ ನಿರಾಕರಿಸಿತು. ಪರಿಣಾಮ, ನಕ್ವಿ ವೇದಿಕೆಯಿಂದ ಟ್ರೋಫಿ ಜೊತೆ ಹೊರಟುಹೋದರು.
ಮೊಹ್ಸಿನ್ ನಕ್ವಿ ಎಸಿಸಿ ಅಧ್ಯಕ್ಷರಾಗಿರುವುದಲ್ಲದೆ ಪಾಕಿಸ್ತಾನ ಗೃಹ ಸಚಿವರೂಆಗಿದ್ದಾರೆ. ಅವರು ತಮ್ಮ ತೀವ್ರ ಭಾರತ ವಿರೋಧಿ ನಿಲುವುಗಳಿಂದ ಗುರುತಿಸಿಕೊಂಡಿದ್ದಾರೆ. ಹಾಗೂ ಭಾರತದ ವಿರುದ್ಧ ಪದೇಪದೇ ಹರಿಹಾಯುತ್ತಲೇ ಇರುತ್ತಾರೆ.
ಟ್ರೋಫಿ ಪ್ರದಾನ ಸಮಾರಂಭ ಪ್ರಾರಂಭವಾಗುವ ಮೊದಲು ಭಾರಿ ಬಿಕ್ಕಟ್ಟು ಉಂಟಾಯಿತು. ಪಿಸಿಬಿ ಮುಖ್ಯಸ್ಥ ನಕ್ವಿ ಪ್ರಶಸ್ತಿಗಳನ್ನು ನೀಡಬೇಕಿದ್ದ ಇತರ ಗಣ್ಯರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ, ವೇದಿಕೆಯ ಮೇಲೆ ನಿಂತಿದ್ದರು. ಭಾರತೀಯ ತಂಡವು ಹತ್ತಿರದಲ್ಲಿ ನಿಂತಿತ್ತು ಮತ್ತು ಪಾಕಿಸ್ತಾನಿ ತಂಡವು ಡ್ರೆಸ್ಸಿಂಗ್ ಕೋಣೆಯಲ್ಲಿತ್ತು. ವರದಿಯ ಪ್ರಕಾರ, ಪಾಕಿಸ್ತಾನ ಸಚಿವರು ಟ್ರೋಫಿಯನ್ನು ಹಸ್ತಾಂತರಿಸುತ್ತಾರೆ ಎಂದು ಭಾರತೀಯರಿಗೆ ತಿಳಿಸಲಾಯಿತು ಮತ್ತು ಭಾರತದ ತಂಡವು ಅವರಿಂದ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಹಾಗೂ ನಿರೂಪಕರು ಪ್ರಕಟಣೆ ಮಾಡಿದರೂ ಭಾರತ ತಂಡದವರು ಟ್ರೋಫಿ ಸ್ವೀಕರಿಸಲು ಹೋಗಲಿಲ್ಲ.
ನಖ್ವಿ ವೇದಿಕೆ ಏರುತ್ತಿದ್ದಂತೆ, ಬಲವಂತವಾಗಿ ಟ್ರೋಫಿ ಪ್ರದಾನ ಮಾಡಲು ಮುಂದಾದರೆ ಭಾರತದ ತಂಡ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಮತ್ತು ಅಧಿಕೃತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರಿಗೆ ತಿಳಿಸಲಾಯಿತು. ನಂತರ ಇದ್ದಕ್ಕಿದ್ದಂತೆ, ಆಯೋಜಕರಲ್ಲಿ ಯಾರೋ ಒಬ್ಬರು ಟ್ರೋಫಿಯನ್ನು ಡ್ರೆಸ್ಸಿಂಗ್ ಕೋಣೆಯೊಳಗೆ ತೆಗೆದುಕೊಂಡು ಹೋದರು.
ಈ ವಿಚಿತ್ರ ಘಟನೆಗಳಿಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ನವೆಂಬರ್ನಲ್ಲಿ ನಡೆಯಲಿರುವ ಮುಂದಿನ ಐಸಿಸಿ ಸಭೆಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರು ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದಕ್ಕಾಗಿ “ತೀವ್ರ ಆಕ್ಷೇಪ” ಸಲ್ಲಿಸುವುದಾಗಿ ಬಿಸಿಸಿಐ ಹೇಳಿದೆ.
ಏಷ್ಯಾ ಕಪ್ 2025ರ ಫೈನಲ್ ಪಂದ್ಯದಲ್ಲಿ ಭಾರತವು 5 ವಿಕೆಟ್ಗಳಿಂದ ಪಾಕಿಸ್ತಾನವನ್ನು ಸೋಲಿಸಿದೆ. ತೀವ್ರ ಹೋರಾಟದ ಪಂದ್ಯ ಕೊನೆಯ ಓವರಿಗೂ ಹೋಗಿದ್ದು, ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕ ಮತ್ತು ಕುಲದೀಪ್ ಯಾದವ್ ಅವರ 4 ವಿಕೆಟ್ಗಳು ಭಾರತದ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳಾಗಿವೆ.