ಬೆಂಗಳೂರು :
‘ಎ’ ಖಾತೆ ಮಾಡಿಕೊಡಲು 1 ಲಕ್ಷ ಲಂಚ ಪಡೆದು ವಂಚಿಸಿದ ಬಿಬಿಎಂಪಿ ಅಧಿಕಾರಿ ಅಮಾನತಿಗೆ ಸೂಚನೆ, ಪಡಿತರ ಚೀಟಿ ಮಾಡಿಕೊಡಲು 7 ಸಾವಿರ ಲಂಚ ಪಡೆಯುವ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು ಮಾಡಲು ಆದೇಶ, ಆರೋಗ್ಯ ಸಮಸ್ಯೆ ಪೀಡಿತ ಎರಡು ಕುಟುಂಬಗಳಿಗೆ ತಲಾ 1 ಲಕ್ಷ ಆರ್ಥಿಕ ನೆರವು…
ಕೆ.ಆರ್. ಪುರದಲ್ಲಿ ಬುಧವಾರ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನರ ಸಮಸ್ಯೆಗೆ ಪರಿಹಾರ ಕೊಟ್ಟದ್ದರ ಉದಾಹರಣೆ.
ಬೆಳಿಗ್ಗೆಯಿಂದ ಸಂಜೆ ತನಕ ಸುಮಾರು 4 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದ ಡಿಸಿಎಂ ಅವರು ಮಧ್ಯಾಹ್ನದ ಊಟಕ್ಕೂ ವಿರಾಮ ತೆಗೆದುಕೊಳ್ಳದೆ ಪ್ರತಿಯೊಬ್ಬರ ಅಹವಾಲುಗಳನ್ನು ಸಾವಧಾನವಾಗಿ ಆಲಿಸಿದರು.
*ಡಿಸಿಎಂ ಡೈರೆಕ್ಟ್ ಆಕ್ಷನ್; 1 ಲಕ್ಷ ಲಂಚ ಪಡೆದವನನ್ನು ಅಮಾನತು ಮಾಡಿ*
ಬಿಬಿಎಂಪಿಯಲ್ಲಿ ಕೆಲಸ ಮಾಡುವ ವಿನಯ್, ವೆಂಕಟೇಶ್ ಎಂಬುವರು ಎ ಖಾತೆ ಮಾಡಿಸಿಕೊಡುತ್ತೇವೆ ಎಂದು 1 ಲಕ್ಷ ಲಂಚ ಪಡೆದು ಮೋಸ ಮಾಡಿದ್ದಾರೆ. ನ್ಯಾಯ ಕೊಡಿಸಿ ಎಂದು ಟಿ.ಸಿ. ಪಾಳ್ಯ ಆನಂದ ನಗರದ ರೀತಮ್ಮ ಎಂಬುವರು ಅಳಲು ತೋಡಿಕೊಂಡರು.
“ಲಂಚ ಪಡೆದಿರುವವರನ್ನು ಯಾರು ಎಂದು ಗುರುತು ಹಿಡಿಯುವಿರಾ” ಎಂದು ಡಿಸಿಎಂ ಅವರು ರೀತಮ್ಮ ಅವರನ್ನು ಕೇಳಿದರು. ಕೂಡಲೇ ಲಂಚ ಪಡೆದ ನೌಕರರನ್ನು ಅಮಾನತು ಮಾಡಬೇಕು, ಅವರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಬೇಕು ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದರು.
ಡಿಸಿಎಂ ಅವರ ‘ಡೈರೆಕ್ಟ್ ಆಕ್ಷನ್ ‘ಕಂಡು ನೆರೆದಿದ್ದ ಸಭಿಕರು ಶಿಳ್ಳೆ, ಚಪ್ಪಾಳೆಗಳ ಸುರಿಮಳೆಗೈದರು.
ಒಂದೊಂದು ಪಡಿತರ ಚೀಟಿ ಮಾಡಿಸಲು ಕೆ.ಆರ್.ಪುರಂ ನ್ಯಾಯಬೆಲೆ ಅಂಗಡಿಯಲ್ಲಿ 7 ಸಾವಿರ ಹಣಕ್ಕೆ ಬೇಡಿಕೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಕೇವಲ 3 ಕೆಜಿ ಅಕ್ಕಿ ನೀಡಿ, ರೂ. ಬೇರೆ 20 ಪಡೆದುಕೊಳ್ಳುತ್ತಿದ್ದಾರೆ ಎಂದು ರಮ್ಯಾ ಎಂಬುವರು ದೂರಿತ್ತರು.
“ಈ ಮಹಿಳೆ ನಿರ್ಭೀತಿಯಿಂದ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಇವರ ಮಾತಿನಲ್ಲಿ ಸತ್ಯವಿದೆ ಎನಿಸುತ್ತಿದೆ”. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದವರ ಲೈಸೆನ್ಸ್ ರದ್ದು ಮಾಡಬೇಕು ಎಂದು ಜಿಲ್ಲಾಧಿಕಾರಿ ದಯಾನಂದ್ ಅವರಿಗೆ ಸೂಚನೆ ನೀಡಿದರು. ಆನಂತರ ಈ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ನೀವೇ ಮಾಹಿತಿ ನೀಡಿ ಎಂದು ಸೂಚಿಸಿದರು.
*ಕಮಿಷನರ್ ಆಫೀಸಿಂದ ಫೋನ್ ಬರುತ್ತೆ 1 ಲಕ್ಷ ಪರಿಹಾರ ಪಡೆದುಕೊಳ್ಳಿ*
ಕೇವಲ ಅರ್ಜಿ ಕೊಟ್ಟು ಹೋಗುತ್ತಿದ್ದ ವಿಜಿನಾಪುರದ ವಾಜಿದ್- ಮಸ್ಕಾನ್ ದಂಪತಿಯನ್ನು ಮತ್ತೆ ವೇದಿಕೆಗೆ ಕರೆದ ಡಿಸಿಎಂ ” ಕಮಿಷನರ್ ಕಚೇರಿಯಿಂದ ಕರೆ ಬರುತ್ತದೆ. ಮಗನ ಚಿಕಿತ್ಸೆಗೆ 1 ಲಕ್ಷ ಪರಿಹಾರ ನೀಡಲಾಗುತ್ತದೆ” ಎಂದರು. ಈ ದಂಪತಿಗಳ ಮಗ ಮುಜಾಯಿಲ್ ಡೊಂಕಾದ ಬೆನ್ನಮೂಳೆ ಸಮಸ್ಯೆಯಿಂದ ಬಳಲುತ್ತಿದ್ದಾನೆ.
ನಾರಾಯಣಪುರ ನಿವಾಸಿ ಸೆಲ್ವಮಣಿ ಎಂಬುವವರು ತಮ್ಮ ಪತಿ ರಾಜ ಅವರ ಎರಡೂ ಮೂತ್ರಪಿಂಡ ವೈಫಲ್ಯ ಹಿನ್ನೆಲೆಯಲ್ಲಿ ಡಯಾಲಿಸಿಸ್ ಮಾಡಿಸುವ ಬಗ್ಗೆ ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಾಲಿಕೆ ಆಯುಕ್ತರ ಕಚೇರಿಯಿಂದ 1 ಲಕ್ಷ ಆರ್ಥಿಕ ಸಹಾಯ ಮಾಡಲು ಸೂಚನೆ ನೀಡಿದರು.
*ಬಸವರಾಜನೂ ಹುಟ್ಟು ಕಾಂಗ್ರೆಸ್ಸಿಗ*
ನನ್ನ ಮನೆಯ ಖಾತೆ ಮಾಡಿಸಿಕೊಳ್ಳಲು 30 ವರ್ಷಗಳಿಂದ ಕಷ್ಟಪಡುತ್ತಿದ್ದೇನೆ. ಹುಟ್ಟು ಕಾಂಗ್ರೆಸ್ಸಿಗನಾದ ನನ್ನ ಈ ಸಮಸ್ಯೆ ಬಗೆಹರಿಸಿ ಎಂದು ವರ್ತೂರ್ ಆನಂದ್ ಎಂಬುವರು ಮನವಿ ಸಲ್ಲಿಸಿದಾಗ “ಬಸವರಾಜನೂ ಹುಟ್ಟು ಕಾಂಗ್ರೆಸ್ಸಿಗ” ಎಂದು ಡಿಸಿಎಂ ಪಕ್ಕದಲ್ಲೇ ಕುಳಿತಿದ್ದ ಬೈರತಿ ಬಸವರಾಜು ಅವರ ಕಾಲೆಳೆದರು.
‘ಈ ವರ್ಷದಲ್ಲಿ ಇದೇ ನನ್ನ ಮೊದಲ ಕೆಲಸವಾಗಲಿದೆ. ಶೀಘ್ರದಲ್ಲೇ ನಿರ್ಮಾಣ ಮಾಡಲಾಗುವುದು’ ಎಂದು ಸರ್ಕಾರಿ ಶಾಲೆಗೆ ಕಾಂಪೌಂಡ್ ಇಲ್ಲದೆ ತೊಂದರೆಯಾಗುತ್ತಿದೆ ಎಂದ ಗೆದ್ದಲಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಲಕ್ಷ್ಮಿದೇವಿ ಅವರ ಮನವಿಗೆ ಡಿಸಿಎಂ ಸ್ಪಂದಿಸಿದರು.
ಕೆ.ಆರ್.ಪುರಂನಲ್ಲಿ 80 ಅಡಿ ರಸ್ತೆ ಅಗಲೀಕರಣದ ವೇಳೆ ಜಾಗ ಕಳೆದುಕೊಂಡಿದ್ದು 5 ವರ್ಷದಿಂದ ಪರಿಹಾರಕ್ಕೆ ಅಲೆದಾಡುತ್ತಿರುವೆ ಎಂದು ಭಾಗ್ಯಮ್ಮ ಎಂಬುವರು ಕಣ್ಣೀರಾದರು.
ಪಕ್ಕದಲ್ಲೇ ಇದ್ದಂತಹ ಶಾಸಕ ಬೈರತಿ ಬಸವರಾಜು ಅವರಿಗೆ ‘ಕೂಡಲೇ ಈ ಸಮಸ್ಯೆ ಬಗೆಹರಿಸಿ’ ಎಂದು ಸೂಚಿಸಿದರು.
ಹೊಸಕೋಟೆಯಲ್ಲಿ ಜೂನಿಯರ್ ಲೈನ್ ಮನ್ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದ ಹರೀಶ್ ಎಂ.ಜಿ. ಅವರು ಕಂಬದಿದ್ದ ಬಿದ್ದು ಸ್ವಾದೀನ ಕಳೆದುಕೊಂಡಿದ್ದಾರೆ ಎಂದು ಅವರ ಪತ್ನಿ ಮನವಿ ಸಲ್ಲಿಸಿದಾಗ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆದೇಶಿಸಿದರು.
ಅರ್ಕಾವತಿ ಬಡಾವಣೆಯ ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ವಾಯುಪಡೆ ಮಾಜಿ ಸೈನಿಕ ಡಿ.ದೇವ್, ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಜಿ ಸೈನಿಕರ ಪತ್ನಿ ಮೇರಿ ಬಾಲ್ಹ ಅವರ ಸಮಸ್ಯೆಗಳನ್ನು ಬಹಳ ಅಸ್ಥೆಯಿಂದ ಆಲಿಸಿದ ಡಿ.ಕೆ.ಶಿವಕುಮಾರ್ ಅವರು ‘ಮಾಜಿ ಸೈನಿಕರಿಗೆ, ಕುಟುಂಬಸ್ಥರಿಗೆ ಯಾವುದೇ ತೊಂದರೆ ಅಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಕುಂದು- ಕೊರತೆಗಳ ಅರ್ಜಿಗಳನ್ನು ಹಿಡಿದು ಬಂದ ಮಹದೇವಪುರ ಮತ್ತು ಕೆ.ಆರ್.ಪುರಂ ಕ್ಷೇತ್ರದ ಜನರ ಅಹವಾಲುಗಳ ಮೇಲೆ ಸೂಚನೆ ಮತ್ತು ಮನವಿ ಸಲ್ಲಿಸಿದವರ ದೂರವಾಣಿ ಸಂಖ್ಯೆಗಳನ್ನು ಸ್ವತಃ ಬರೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರ ಮಾಡಬೇಕು ಎಂದು ತಮ್ಮದೇ ಶೈಲಿಯಲ್ಲಿ ಖಡಕ್ ಸೂಚನೆ ನೀಡುತ್ತಿದ್ದರು.
ಉದ್ಘಾಟನಾ ಕಾರ್ಯಕ್ರಮ ಮುಗಿದ ತಕ್ಷಣ ವೇದಿಕೆಯಿಂದ ಇಳಿದು ನೇರವಾಗಿ ಹಿರಿಯ ನಾಗರಿಕರು, ಅಂಗವಿಕಲರ ಬಳಿಗೆ ಅವರು ಕುಳಿತಿದ್ದಲ್ಲಿಗೆ ಹೋಗಿ ಖುದ್ದಾಗಿ ಅರ್ಜಿಗಳನ್ನು ಪಡೆದುಕೊಂಡರು.
*ಊಟಕ್ಕೆ ಹೋಗುವುದಾ, ಏನೂ ಮಾಡುವುದು*
ಮನವಿ ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಜನರನ್ನು ಉದ್ದೇಶಿಸಿ “ಏನ್ರಪ್ಪಾ ಊಟಕ್ಕೆ ಹೋಗುವುದಾ, ಏನು ಮಾಡುವುದು’ ಎಂದ ಡಿಸಿಎಂ ಅವರು ‘ನೀವು ಹೊಟ್ಟೆ ಹಸಿದುಕೊಂಡಿದ್ದೀರಿ, ನಿಮ್ಮ ಎಲ್ಲಾ ಅಹವಾಲು ನೋಡಿದ ನಂತರವೇ, ಊಟ ಮಾಡೋಣ’ ಎಂದರು.
*ಶಾಸಕರ ಸಂಬಂಧಿಯಿಂದಲೇ ಸಾರ್ವಜನಿಕ ರಸ್ತೆ ಬಂದ್*
ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜು ಅವರ ಸಂಬಂಧಿ ವೇಣು ಎಂಬುವರು ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ತೊಂದರೆ ಕೊಡುತ್ತಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಗೆ 3 ಬಾರಿ ದೂರು ನೀಡಿದರು ಕ್ರಮ ತೆಗೆದುಕೊಂಡಿಲ್ಲ ಎಂದು ಬೈರತಿ ಬಸವರಾಜು ಸಮ್ಮುಖದಲ್ಲೇ ಖಾದರ್ ಮೊಹಿದ್ದೀನ್ ಎಂಬುವರು ಆರೋಪ ಮಾಡಿದರು.
‘ಶಾಸಕರೇ ಇದು ನಿಮ್ಮ ಸಮಸ್ಯೆ ಬೇಗ ಬಗೆಹರಿಸಿಕೊಳ್ಳಿ’ ಎಂದು ಬೈರತಿ ಬಸವರಾಜ ಅವರಿಗೆ ಹೇಳಿದರು.
ರಾಜಕಾಲುವೆ ಒತ್ತುವರಿಯಿಂದ ಮಳೆ ನೀರು ಮನೆಗೆ ನುಗ್ಗುತ್ತಿದೆ, ರಸ್ತೆ ಅಗಲೀಕರಣ ಪರಿಹಾರದ ಹಣ, ಸೂರು ನೀಡಿ, ಸ್ಮಶಾನಕ್ಕೆ ಜಾಗ ನೀಡಿ, ಅಕ್ರಮ ಕಟ್ಟಡಗಳಿಂದ ತೆರಿಗೆ ಸಂಗ್ರಹ ಮಾಡಿ, ಅಂಗನವಾಡಿ ಕಟ್ಟಡ, ನಿವೇಶನ ನೀಡಿ, ಪೌರಕಾರ್ಮಿಕರ ಸಮಸ್ಯೆ ಪರಿಹಾರ, ಕಾರ್ಮಿಕರಿಗೆ ಪಿಂಚಣಿ, ಪಿಎಫ್ ಹಣ ಹೀಗೆ ಸಾವಿರಾರು ಸಮಸ್ಯೆಗಳ ಅರ್ಜಿಗಳನ್ನು ಹೊತ್ತು ಬಂದವರಿಗೆ ಪರಿಹಾರ ಸೂಚಿಸಿ ಕಳುಹಿಸಲಾಯಿತು.