ಬೆಳಗಾವಿ ತಾಲೂಕಿನ ಬಸವನ ಕುಡಚಿಯ ಶ್ರೀ ಬಸವೇಶ್ವರ,ಶ್ರೀ ಕಲ್ಮೇಶ್ವರ ಹಾಗೂ ಶ್ರೀ ಬ್ರಹ್ಮದೇವರ ಜಾತ್ರಾ ಮಹೋತ್ಸವ ಮಾರ್ಚ್ 30, 2025 ರ ವರೆಗೆ ಜರುಗಲಿದ್ದು ತನ್ನಮಿತ್ತ ಈ ಲೇಖನ
ಚಾರಿತ್ರಿಕ ಗ್ರಾಮ : ನಾಡಿನ ಸಂಸ್ಕೃತಿಯ ಸಂವರ್ಧನೆಯಲ್ಲಿ ಬೆಳಗಾವಿ ಜಿಲ್ಲೆ ಕೊಡುಗೆ ಅನನ್ಯ ಅನುಮಪಮವೆನಿಸಿದೆ. ಬೆಳಗಾವಿ ನಗರದಿಂದ ಐದು ಕಿ.ಮೀ. ಅಂತರದಲ್ಲಿರುವ ಬಸವನ ಕುಡಚಿ ಗ್ರಾಮವು ಸರ್ವಧರ್ಮಗಳ ಸಂಗಮ ತಾಣವೆನಿಸಿಕೊಂಡಿದೆ. ಬಸವೇಶ್ವರ, ಕಲ್ಮೇಶ್ವರ ಹಾಗೂ ಬ್ರಹ್ಮದೇವರ ಸುಕ್ಷೇತ್ರವಾಗಿರುವ ಬಸವನ ಕುಡಚಿ ಲಕ್ಷಾಂತರ ಭಕ್ತಾದಿಗಳ ಶ್ರದ್ಧಾಕೇಂದ್ರವೆನಿಸಿದೆ. ಭಾಷಾ ಸಾಮರಸ್ಯದೊಂದಿಗೆ ತನ್ನ ಗತಸಂಸ್ಕøತಿಯನ್ನು ಇಂದಿಗೂ ಪೋಷಿಸಿ ಬೆಳೆಸಿದೆ. ಇಲ್ಲಿರುವ ದೇವಾಲಯಗಳು, ಐತಿಹಾಸಿಕ ವೀರಗಲ್ಲುಗಳು, ಸತಿಗಲ್ಲುಗಳು, ಗ್ರಾಮದ ಪ್ರಾಚೀನ ಇತಿಹಾಸ ಅನಾವರಣಗೊಳ್ಳುತ್ತದೆ.
ಬಸವನ ದೇವಾಲಯ :
ಗ್ರಾಮದ ಮೂಲದೈವ ನಂದಿ ರೂಪದ ಬಸವ. ಪ್ರಥಮಪೂಜಾದಾಯಕ. ಬಸವನು ಗ್ರಾಮದ ಮಧ್ಯದಲ್ಲಿ ಕೇಂದ್ರಿಕೃತಗೊಂಡಿದೆ. ಚೌಕಾಕಾರ ಗದ್ದುಗೆಯ ಮೇಲೆ ಶಿಲಾಗಂಭಗಳಿಂದ ನಿರ್ಮಿಸಿರುವ ಬಸವನ ದೇವಸ್ಥಾನ ಚಪ್ಪಡಿಗಲ್ಲುಗಳಿಂದ ಆವೃತ್ತಗೊಂಡಿದೆ. ಈ ದೇವಾಲಯದ ಮಧ್ಯಭಾಗದಲ್ಲಿ ಅಖಂಡ ಶಿಲಾಗಂಭವಿದ್ದು, ಇದು ದೇವಾಲಯದ ಆಧಾರಗಂಭ. ಇದರ ಮೇಲೆಯೇ ಬಸವನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಈ ಮಧ್ಯಗಂಭ ಸುಮಾರು 9-10ನೇ ಶತಮಾನದಲ್ಲಿ ರಚಿತಗೊಂಡಿರಬಹುದೆಂದು ಇತಿಹಾಸ ತಜ್ಞರ ಅಭಿಪ್ರಾಯ. ಇಲ್ಲಿಯ ವೈಶಿಷ್ಟ್ಯತೆ ಎಂದರೆ ನಂದಿರೂಪದ ಬಸವ ಮಹಡಿಯ ಮೇಲೆ ಇರುವುದು ಗಮನಾರ್ಹ, ಇಂತಹ ಶೈಲಿಯ ದೇವಸ್ಥಾನ ಕರ್ನಾಟಕದಲ್ಲಿ ದೊರೆಯುವುದು ಅಪರೂಪ. ದೇವಸ್ಥಾನದ ಒಳ ಹಾಗೂ ಹೊರ ಭಾಗದಲ್ಲಿ ಒಟ್ಟು 48 ಚಪ್ಪಡಿ ಕಂಬಗಳನ್ನು ಹಾಗೂ ಅದರ ಮೇಲೆಯೂ ಕಟ್ಟಿಗೆಯ ಅಷ್ಟೇ ಕಂಬಗಳನ್ನು ನಿರ್ಮಿಸಲಾಗಿದೆ. ಈ ಚಪ್ಪಡ್ಡಿ ಕಂಬುಗಳು ಸುಮಾರು 16-17ನೇ ಶತಮಾನದಲ್ಲಿ ರಚನೆಗೊಂಡಿವೆ. ಈ ದೇವಸ್ಥಾನಕ್ಕೆ ಯಾವ ಗರ್ಭಗೃಹವಿರದಿದ್ದರೂ ಸುತ್ತಲಿನ ಪ್ರದಕ್ಷಿಣಾಪಥ ವಿಶಾಲವಾಗಿದೆ. ಮಧ್ಯವಿರುವ ಕಂಬದ ಮೇಲೆ ಬಸವ ಪಶ್ಚಿಮಾಭಿಮುಖವಾಗಿ, ಬಲಗಾಲವನ್ನು ಮುಂದಕ್ಕೆ ಚಾಚಿಕೊಂಡು ವಿರಾಜಮಾನವಾಗಿ ಕುಳಿತಿರುವ ದೃಶ್ಯ ರಮಣೀಯವೆನಿಸಿದೆ. ಬಸವ ಭಕ್ತರ ಆರಾಧ್ಯರೂಪನಾಗಿದ್ದಾನೆ.
ಕಲ್ಮೇಶ್ವರ ದೇವಾಲಯ: ಗ್ರಾಮದ ಪೂರ್ವಾಭಿಮುಖವಾಗಿ ಕಲ್ಮೇಶ್ವರ ದೇವಾಲಯವಿದೆ. ಇಲ್ಲಿಯ ಶಿವಲಿಂಗ ಬಹು ಪ್ರಾಚೀನವಾದದು. ಸು. 16-17ನೇ ಶತಮಾನದಲ್ಲಿ ಪೂರ್ಣಪ್ರಮಾಣದ ದೇವಾಲಯವನ್ನು ನಿರ್ಮಿಸಲಾಗಿದೆ.
ಜಾತ್ರೆಯ ಪ್ರಾರಂಭ : ಪ್ರತಿವರ್ಷ ಹೋಳಿ ಹುಣ್ಣಿಮೆಯಿಂದ ಚಂದ್ರಮಾನ ಯುಗಾದಿಯ ಅಮವಾಸ್ಯೆಯ ಮಧ್ಯಾವಧಿಯಲ್ಲಿ ಬರುವ ಸೋಮವಾರ (24.3.2025) ಮತ್ತು ಮಂಗಳವಾರ (25.3.2025) ‘ಬಸವೇಶ್ವರ, ಕಲ್ಮೇಶ್ವರ, ಬ್ರಹ್ಮದೇವರ ಜಾತ್ರೆಯು’ ಅತ್ಯಂತ ಸಡಗರದಿಂದ ಜರುಗಲಿದೆ.
ವಿಶೇಷ ಬಂಡಿಗಳು : ಬಸವಣ್ಣನ ಕಿಚ್ಚನ್ನು ದಾಟುವುದು ಇಲ್ಲಿಯ ಸತ್ಸಂಪ್ರದಾಯವಾಗಿದ್ದು ಹಾಗಾಗೀ ಕಿಚ್ಚಿನ ಕಟ್ಟಿಗೆ ತರಲು ಜಾತ್ರೆಯ ಸಲುವಾಗಿಯೇ ವಿಶೇಷವಾಗಿ ನಿರ್ಮಿಸಲಾದ ನಾಲ್ವತ್ತು ಬಂಡಿಗಳಿಗೆ ವಿಶೇಷವಾದ ಪೂಜೆಯನ್ನು ನೆರವೇರಿಸಿ ಬೆಳಗಾವಿ ಹತ್ತಿರದ ಕಾಕತಿ ಗುಡ್ಡಕ್ಕೆ ಗ್ರಾಮಸ್ಥರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವೈಭವದಿಂದ ತೆರಳಿ ಕಟ್ಟಿಗೆಯನ್ನು ತರುತ್ತಾರೆ. ಈ ಬಂಡಿಗಳು ಮೂರು ನೂರು ವರ್ಷಗಳ ಇತಿಹಾಸ ಹೊಂದಿವೆ ಎಂಬುದು ವಿಶೇಷ.
ದೇವರಬಂಡಿ : ನಲವತ್ತು ಬಂಡಿಗಳ ಮುಂದಾಳತ್ವವನ್ನು ‘ದೇವರಬಂಡಿ’ಯೆಂದು ಕರೆಯಲಾಗುತ್ತದೆ. ಈ ವಿಶೇಷ ದೇವರಬಂಡಿಯ ನೇತೃತ್ವ ಬೇಡಕಾ ಕುಟುಂಬದವರದು. ರಸ್ತೆ ಉದ್ದಕ್ಕೂ ಸರತಿಯಲ್ಲಿ ಈ ಬಂಡಿಗಳು ಸಾಗುವುದೇ ಒಂದು ವೈಭವ, ಅವುಗಳನ್ನು ಕಣ್ತುಂಬಿಕೊಳ್ಳುವುದೇ ಇನ್ನೊಂದು ಸೊಬಗು. ಪ್ರತಿವರ್ಷ ಜರುಗುವ ಬಸವನ ಮೇಲಿನ ಭಕ್ತಿಭಾವಗಳಿಗೆ ಇದೊಂದು ದ್ಯೋತಕವಾಗಿ ನಿಲ್ಲುತ್ತದೆ.
ತೆರಳಿದ ಎಲ್ಲ ಬಂಡಿಗಳಿಗೂ ಕಾಕತಿ ಗುಡ್ಡದಲ್ಲಿ ವಿಶೇಷವಾದ ಪೂಜೆ ಸಲ್ಲಿಸಿ ಬಸವನ ಜಾತ್ರೆಯ ಕಿಚ್ಚಿಗಾಗಿ ನೆರಳೆ ಹಣ್ಣಿನ ಮರದ ಕಟ್ಟಿಗೆಗಳನ್ನು ಸಂಗ್ರಹಿಸಲಾಗುತ್ತದೆ. ಬಸವನ ಕುಡಚಿಯಿಂದ ಕಾಕತಿ ಗುಡ್ಡದ ವರೆಗೆ ಸುಮಾರು ಹದಿನೈದು ಕಿ.ಮೀ.ಕ್ಕೂ ಹೆಚ್ಚು ದೂರ ಪಯಣಿಸುವ ಭಕ್ತರು ಬರೆಗಾಲಿನಿಂದಲೇ ಹೋಗಿ ಕಟ್ಟಿಯನ್ನು ಸಂಗ್ರಹಿಸಿ ಭಕ್ತಿಸೇವೆಯನ್ನು ಸಲ್ಲಿಸುತ್ತಾರೆ.
ಅಂಬಲಿ ಬಂಡಿಗಳ ವೈಭವ : ಸೋಮವಾರ(24.3.2025) ಬೆಳಿಗ್ಗೆ ಬಸವೇಶ್ವರ ಹಾಗೂ ಕಲ್ಮೇಶ್ವರ ದೇವಸ್ಥಾನದಲ್ಲಿ ಅಭಿಷೇಕ ಪೂಜೆಯು ನೆರವೇರಿದೆ. ಈ ಪವಿತ್ರ ಕಾರ್ಯವನ್ನು ಹಕ್ಕುದಾರರಲ್ಲಿ ಒಬ್ಬರಾದ ಕುಲಕರ್ಣಿಯವರು ನೆರವೇರಿಸುತ್ತಾರೆ. ಎಲ್ಲ ಬಂಡಿಗಳನ್ನು ತೆಂಗಿನ ಗರಿಗಳು, ಮಾಡಿಗರಿ ಹಾಗೂ ವಿವಿಧ ಬಾವುಟಗಳಿಂದ ಶೃಂಗರಿಸಿ, ಅಂಬಲಿ, ಗುಗ್ಗರಿಯಿಂದ ತುಂಬಿ ನಿಂತಿರುತ್ತವೆ. ಅಂಬಲಿ ಬಂಡಿಗಳು ಬಸವನ ದೇವಾಲಯಕ್ಕೆ ಪ್ರದಕ್ಷಿಣೆಹಾಕಿ ಭಕ್ತಿಯನ್ನು ನೆರವೇರಿಸಲಾಗುತ್ತದೆ. ಅಲ್ಲಿಂದ ಊರ ಪಕ್ಕದಲ್ಲಿರುವ ಗದ್ದೆಯಲ್ಲಿ ಬಂಡಿಗಳನ್ನು ಸ್ಪರ್ಧಾತ್ಮಕವಾಗಿ ಓಡಿಸಿ ರೈತರು ತಮ್ಮ ತಮ್ಮ ಹೋರಿಗಳ, ಎತ್ತುಗಳ ಸಾಮರ್ಥ್ಯವನ್ನು ಕಂಡು ಮೇರೆ ಮೀರಿದ ಹರ್ಷದಿಂದ ಕುಣಿದಾಡುವ ವೈಭವ ರೋಮಾಂಚನಗೊಳಿಸುತ್ತದೆ.
ಕಿಚ್ಚಿನ ಸಂಭ್ರಮ : ಅಸಂಖ್ಯ ಭಕ್ತಗಣರಿಂದ ಮಂಗಳವಾರ(25.3.2025)‘ಕಲ್ಮೇಶ್ವರ’ ಹಾಗೂ ‘ಬಸವೇಶ್ವರ’ ದೇವರ ಕಿಚ್ಚನ್ನು ದಾಟಲು ಅಂದು ಸಾಯಂಕಾಲ ಎಲ್ಲ ಪೂರ್ವಸಿದ್ಧತೆಯನ್ನು ಮಾಡಲಾಗಿರುತ್ತದೆ. ಮೊದಲು ಊರಿನ ಗೌಡರು ಟೆಂಗಿನಶ್ರೀಫಲವನ್ನು ‘ಕಿಚ್ಚ’ನಲ್ಲಿ ಉರುಳಿಸಿ ಕಿಚ್ಚಿನ ಪ್ರವೇಶಕ್ಕೆ ಚಾಲನೆ ನೀಡುತ್ತಾರೆ. ಸರದಿಯಲ್ಲಿ ನೂರಾರು ಭಕ್ತಾದಿಗಳು ಕಿಚ್ಚನ್ನು ಹಾಯ್ದು ತಮ್ಮ ಹರಕೆಯನ್ನು ಸಲ್ಲಿಸುವ ದೃಶ್ಯ ಜಾತ್ರೆಗೆ ಹೊಸ ಮೆರುಗು ತರುತ್ತದೆ.
ಸಾಂಸ್ಕತಿಕ ಕಾರ್ಯಕ್ರಮಗಳು : ಜಾತ್ರೆಯ ಮರುದಿನ ಬುಧವಾರ ರಾತ್ರಿಯಂದು ನಾಟಕ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಸುಮಾರು ಬೆಳಗಿನ ವರೆಗೂ ಜರುಗುವ ನಾಟಕೋತ್ಸವಗಳು ರಂಜನೀಯವಾಗಿರುತ್ತವೆ. ಬುಧವಾರ ಹಾಗೂ ಗುರುವಾರದಂದು ಬಯಲು ಕುಸ್ತಿಗಳು, ಶುಕ್ರವಾರ ಬಂಡಿಗಳ ಶರತ್ತುಗಳು ಜಾತ್ರೆಯ ವೈಭವವನ್ನು ಹೆಚ್ಚಿಸುತ್ತವೆ.
ಯುಗಾದಿ ಪಾಡ್ಯೆ ಜಾತ್ರೆಯ ಕೊನೆಯ ದಿನ. ಹಲವಾರು ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸುವುದರ ಜೊತೆಗೆ ಪಂಚಾಂಗ ಶ್ರವಣ, ಅಭಿಷೇಕದ ಜೊತೆಗೆ ರಂಗುರಂಗಿನ ಮದ್ದುಗಳನ್ನು ಸಿಡಿಸುತ್ತಾರೆ. ಆ ದೃಶ್ಯವು ಜಾತ್ರೆಯ ಸೌಂದರ್ಯವನ್ನು ಇನ್ನಷ್ಟು ದ್ವಿಗುಣಗೊಳಿಸುತ್ತದೆ. ಹೀಗೆ ಸರ್ವಧರ್ಮಗಳ ಸಂಗಮತಾಣವಾಗಿರುವ ಬಸವನ ಕುಡಚಿ ನೆರೆಯ ಹಲವಾರು ಜಿಲ್ಲೆಗಳು ಹಾಗೂ ರಾಜ್ಯಗಳನ್ನು ಆಕರ್ಷಿಸಿದೆ.
* ಡಾ.ಮಹೇಶ ಸಿ.ಗುರನಗೌಡರ, ನಿರ್ದೇಶಕರು, ಕೆಎಲ್ಇ ಪ್ರಸಾರಾಂಗ