ಇಂದು ವಿಶ್ವದಲ್ಲೆಡೆ ಸಂಭ್ರಮದಿಂದ ಬಸವಣ್ಣವರ ಜಯಂತಿಯನ್ನು ಆಚರಿಸಲಾಗುತ್ತಿದೆ. ವಿಶ್ವಗುರು ಬಸವಣ್ಣನವರು ಈ ಜಗತ್ತು ಕಂಡಂತಹ ಅಪ್ರತಿಮ ದಾರ್ಶನಿಕರು, ಸಮಾಜ ಸುಧಾರಕರು ಮಾತ್ರವಲ್ಲ ಹೊಸ ಸಮಾಜದ ನಿರ್ಮಾಪಕರು. ೮೫೦ ವರ್ಷಗಳ ಹಿಂದೆ ಅವರು ಕೈಗೊಂಡ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಕ್ರಾಂತಿಯು ಇಂದಿಗೂ ಸಹ ಇಡೀ ಜಗತ್ತಿಗೆ ಆದರ್ಶಪ್ರಾಯವಾಗಿದೆ.
ವೀರಶೈವ ಲಿಂಗಾಯತ ಸಮಾಜದ ಸಾಮೂಹಿಕ ಜಾಗೃತಿಗೆ ಒಂದು ವೇದಿಕೆಯನ್ನು ನಿರ್ಮಿಸುವ ಉದ್ದೇಶದಿಂದ ದಾವಣಗೆರೆಯ ವಿರಕ್ತಮಠದ ಪೀಠಾಧ್ಯಕ್ಷರಾಗಿದ್ದ ಪೂಜ್ಯ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ
ಶ್ರೀ ಹರ್ಡೇಕರ ಮಂಜಪ್ಪನವರ ಪ್ರೇರಣೆಯಿಂದ ೧೩, ಮೇ ೧೯೧೨ರಲ್ಲಿ ‘ಬಸವ ಜಯಂತಿ’ ಉತ್ಸವವನ್ನು ಸಾರ್ವತ್ರಿಕವಾಗಿ ಆಚರಿಸಲು ಆರಂಭಿಸಿದರು. ಮುಂದೆ ಪ್ರೊ.ಶಿ.ಶಿ.ಬಸವನಾಳರೂ ಮೊದಲ್ಗೊಂಡು ಹಲವಾರು ಸಮಾನ ಮನಸ್ಕರು ಉತ್ತರ ಕರ್ನಾಟಕದ ವಿವಿಧ ಕಡೆಗಳಲ್ಲಿ ‘ಬಸವ ಜಯಂತಿ’ ಆಚರಣೆಗೆ ವ್ಯಾಪಕವಾದ ಪ್ರಚಾರ ದೊರಕಿಸಿಕೊಟ್ಟರು. ಈ ಉತ್ಸವ ಆಚರಣೆಯ ನಿರ್ಧಾರ, ವೀರಶೈವ ಲಿಂಗಾಯತ ಸಮಾಜದ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿತ್ತು. ಸಮಾಜದ ಜನರಲ್ಲಿ ಐಕ್ಯತೆಯನ್ನು ಮೂಡಿಸಿ, ಪ್ರಚಲಿತ ಸಮಸ್ಯೆಗಳ ಚಿಂತನ ಮಾಡುವ ಉದ್ದೇಶದಿಂದ ಆರಂಭಗೊಂಡ ಬಸವ ಜಯಂತಿ ಇಂದು ನಾಡಿನಾದ್ಯಂತ ಆಚರಣೆಯಲ್ಲಿದೆ. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸಗಳನ್ನು, ಗೋಷ್ಠಿಗಳನ್ನು, ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ. ಮಹಾರಾಷ್ಟ್ರ-ಆಂಧ್ರ-ತಮಿಳುನಾಡುಗಳಲ್ಲಿ ಹಾಗೂ ದೇಶದ ವಿವಿಧೆಡೆಗೆ ಅತ್ಯಂತ ಸಂಭ್ರಮದಿಂದ ಬಸವಜಯಂತಿಯನ್ನು ಆಚರಿಸುತ್ತಿರುವುದು ಅಭಿಮಾನದ ಸಂಗತಿ.
ವಿಶ್ವಸಂದೇಶವನ್ನು ನೀಡಿದ ಅಣ್ಣನವರ ಪ್ರತಿಮೆಯನ್ನು ಲಂಡನ್ ಬ್ರಿಟಿಷ್ ಪಾರ್ಲಿಮೆಂಟಿನ ಎದುರು ಥೇಮ್ಸ್ ನದಿಯ ದಡದಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆಯನ್ನು ೧೪ ನವ್ಹೆಂಬರ್ ೨೦೧೫ ರಂದು ಭಾರತದ ಪ್ರಧಾನಿ
ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದು ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ಭಾರತದ ಸಂಸತ್ತಿನಲ್ಲಿಯೂ ಬಸವೇಶ್ವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಮಾತ್ರವಲ್ಲದೇ ಬಸವಣ್ಣನವರ ಭಾವಚಿತ್ರ ಹೊಂದಿರುವ ನಾಣ್ಯವನ್ನೂ ಹೊರಡಿಸಿದ್ದು ವಿಶೇಷ. ‘ವಚನ’ ಹೆಸರಿನ ‘ಬಹುಭಾಷಾ ವಚನ ಅನುವಾದ’ ಕೃತಿಗಳು ಡಾ.ಎಂ.ಎಂ.ಕಲಬುರ್ಗಿಯವರ ಸಂಪಾದಕತ್ವದಲ್ಲಿ ೨೦೧೨ರಲ್ಲಿ ಪ್ರಕಟಗೊಂಡಿವೆ. ೨೩ ಭಾಷೆಗಳಲ್ಲಿ ಹಾಗೂ ೨೫೦೦ ವಚನಗಳನ್ನು ಅನುವಾದಿಸಲಾಗಿದೆ.
ಬಸವಣ್ಣ ಇಂದು ಪ್ರಸ್ತುತ : ಅತ್ಯಂತ ಮುಖ್ಯವಾಗಿ ಈ ದಿನಮಾನದಲ್ಲಿ ಜಗತ್ತಿನಲ್ಲೆಡೆ ಯುದ್ದದ ವಾತಾವರಣ ಇದೆ. ಮಾನವನ ಸ್ವಾರ್ಥ ಕೇಂದ್ರಿಕೃತ ಚಿಂತನೆಗಳು ಇಂತಹ ಭಯದ ವಾತಾವರಣ ನಿರ್ಮಾಣ ಮಾಡಿದೆ. ಜಗತ್ತಿನ ಅನೇಕ ದೇಶಗಳಲ್ಲಿ ಮನುಷ್ಯರಿಗೆ ಕನಿಷ್ಠ ಸೌಕರ್ಯಗಳೂ ಇಲ್ಲವಾಗಿವೆ. ಇಂತಹ ಅಶಾಂತಿ ತುಂಬಿದ ಜಗತ್ತಿಗೆ ಶಾಂತಿ-ಸಮಾಧಾನದ ಅವಶ್ಯಕತೆ ಇದೆ. ಅದಕ್ಕಾಗಿ ಬಸವತತ್ವ ಹಿಂದೆಂದಿಗಿಂತಲೂ ಇವತ್ತು ಹೆಚ್ಚು ಪ್ರಸ್ತುತವಾಗಿದೆ. ಬಹುಶಃ ಬಸವಣ್ಣನವರ ಸಿದ್ಧಾಂತದ “ಇವ ನಮ್ಮವ ಇವ ನಮ್ಮವ” ಎಂದೆನಿಸಿ, ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬಾಳಿದರೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವುದರಲ್ಲಿ ಸಂಶಯವೇ ಇಲ್ಲ.
ಇವತ್ತು ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಎಂಬುದು ಇಲ್ಲದಾಗಿದೆ. ಆದರೆ ಭಾರತದಲ್ಲಿ ಈ ಪ್ರಜಾಪ್ರಭುತ್ವವನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದವರು ಬಸವಾದಿ ಶರಣರು. ಬಹುಶಃ ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಪ್ರಥಮ ಬೀಜ ಬಿತ್ತಲ್ಪಟ್ಟಿದ್ದು ಕನ್ನಡದ ನೆಲದಲ್ಲಿ. ಅದು ಬಸವಣ್ಣನವರು ಸ್ಥಾಪಿಸಿದ ಜಗತ್ತಿನ ಮೊಟ್ಟಮೊದಲ ಸಂಸತ್ತಿನ ಮಾದರಿಯಾದ ‘ಅನುಭವ ಮಂಟಪ’ದಿಂದ ಯಾವ ‘ಮಾಗ್ನಾಕಾರ್ಟ್’ ವನ್ನು ಪ್ರಜಾಪ್ರಭುತ್ವದ ಪ್ರಥಮ ದಾಖಲೆ ಎಂದು ಜಗತ್ತು ನಂಬಿದೆಯೋ, ಅದಕ್ಕಿಂಲೂ ೫೦-೬೦ ವರ್ಷಗಳಷ್ಟು ಹಿಂದೆಯೆ ‘ಅನುಭವ ಮಂಟಪ’ ಅಸ್ತಿತ್ವದಲ್ಲಿತ್ತು. ಅಲ್ಲಿ ಸಮಾಜದ ಎಲ್ಲಾ ವರ್ಗದ ಜಾತಿಯ ಜನರು ಸಮಾಜ-ಧರ್ಮ-ಅಧ್ಯಾತ್ಮದ ಚಿಂತನೆಯನ್ನು ಮಾಡುತ್ತಿದ್ದರು ಎಂದರೆ ಇದು ಅತ್ಯಂತ ಹೆಮ್ಮೆ-ಗೌರವದ ಸಂಗತಿ. ಆದರೆ ದುರಾದೃಷ್ಟವಶಾತ್ ಇಂದಿನ ಯುವ ಜನಾಂಗಕ್ಕೆ ಇದರ ಕಲ್ಪನೆ ಇಲ್ಲ. ಹೀಗಾಗಿ ನಮ್ಮ ಮೇಲೆ ಸಂಸ್ಥೆಗಳ ಮೇಲೆ ದೊಡ್ಡ ಜವಾಬ್ದಾರಿಯೂ ಇದೆ. ಮುಂದಿನ ಜನಾಂಗಕ್ಕೆ ಈ ಬಸವ ತತ್ವವನ್ನು ಕೊಂಡೊಯ್ಯಬೇಕಾಗಿರುವ ತುರ್ತು ಅಗತ್ಯವಿದೆ. ಇಲ್ಲವಾದರೆ ನಮ್ಮ ಯುವಜನಾಂಗ ನಮ್ಮ ಸಂಸ್ಕೃತಿಯಿಂದ ದೂರವಾಗಿ ಬಿಡುತ್ತಾರೆ.
ಅಲ್ಲದೇ ಬಸವಣ್ಣನವರ ತತ್ವ ಸಾಹಿತ್ಯ ಎಲ್ಲರಿಗೂ ಎಲ್ಲಾ ಧರ್ಮದವರಿಗೂ ಬೇಕು. ನಿಜವಾದ ಅರ್ಥದಲ್ಲಿ ಬಸವಣ್ಣನವರು ನಮ್ಮ “ಸಾಂಸ್ಕೃತಿಕ ನಾಯಕ” ಆಗಿದ್ದಾರೆ. ನಮ್ಮ ಸಂಸ್ಕೃತಿ ಉಳಿದರೆ ನಾವು ಉಳಿಯುತ್ತೇವೆ. ಹೀಗಾಗಿ ಬಸವ ಜಯಂತಿಯ ಈ ದಿನ ನಮ್ಮ ಸಾಂಸ್ಕೃತಿಕ ನಾಯಕರಾದ ಬಸವಣ್ಣವರ ಬದುಕಿನ ಆದರ್ಶಗಳನ್ನು ಪಾಲಿಸುವ ಸಂಕಲ್ಪ ನಮ್ಮದಾಗಬೇಕು.
ಬಸವಣ್ಣನವರು ಹೇಳಿರುವ ಸಂದೇಶಗಳು ಎಲ್ಲ ಕಾಲಕ್ಕೂ ದಿವ್ಯೌಷಧಿಯೆನಿಸಿವೆ. ಅವುಗಳನ್ನು ಮನನ ಮಾಡಿಕೊಳ್ಳುವುದು ಅಷ್ಟೇ ಅಗತ್ಯ. ಇಂದಿನ ರಾಜಕಾರಣ ಮೊದಲ್ಗೊಂಡು ಸಮಾಜವು ನೈತಿಕವಾಗಿ ಸಂಪೂರ್ಣವಾಗಿ ಕುಸಿದಿರುವಾಗ ಮೊದಲು ಅಣ್ಣನವರ ವಚನಗಳನ್ನು ಓದುವಂತಾಗಬೇಕು. ಸಮಾಜದ ಸರ್ವಾಂಗೀಣ ವಿಕಾಸಕ್ಕೆ ಅವರ ವಚನಗಳು ದಾರಿದೀಪವಾಗುವುದರಲ್ಲಿ ಸಂದೇಹವಿಲ್ಲ. ಕೇವಲ ಒಂದು ದಿನ ಬಸವ ಜಯಂತಿಯನ್ನು ಆಚರಿಸಿ ಕೈತೊಳೆದುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಅವರ ಜೀವನ ಸಂದೇಶವನ್ನು ಅರಿಯುವ ಹಾಗೂ ಅನುಕರಣೆಯಲ್ಲಿ ತರುವಲ್ಲಿ ಸ್ವಯಂ ನಾವೆಲ್ಲರೂ ಪ್ರಯತ್ನಿಸಬೇಕು. ಅದೇ ನಾವು ಬಸವಣ್ಣನವರಿಗೆ ಸಲ್ಲಿಸುವ ಗೌರವ. ಈ ಸಂದರ್ಭದಲ್ಲಿ ನಮ್ಮ ಮನೆಗಳಲ್ಲಿಯೇ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ.
✒️ಡಾ.ಪ್ರಭಾಕರ ಕೋರೆ
ಕಾರ್ಯಾಧ್ಯಕ್ಷರು, ಕೆಎಲ್ಇ ಸಂಸ್ಥೆ, ಬೆಳಗಾವಿ