ಬೆಳಗಾವಿ : ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ 39 ನೇ ಮಹಾ ಅಧಿವೇಶನ ನಡೆದು ಬರೋಬ್ಬರಿ ನೂರು ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಈ ಅಧಿವೇಶನದ ಶತಮಾನೋತ್ಸವ ಸಮಾರಂಭಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಕರೆಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸಚಿವ ಎಚ್.ಕೆ.ಪಾಟೀಲ ಅವರು ಬೆಂಗಳೂರಿನಲ್ಲಿ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿ, ಬರಾಕ್ ಒಬಾಮಾ ಅವರು ಗಾಂಧೀಜಿ ಭಾರತದ ನಾಯಕ ಮಾತ್ರವಲ್ಲ, ಅವರೊಬ್ಬ ಜಾಗತಿಕ ನಾಯಕ ಎಂದು ಹಲವು ಬಾರಿ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಕೆಪಿಸಿಸಿಯಿಂದ ಬೆಳಗಾವಿಯಲ್ಲಿ ಏರ್ಪಡಿಸುವ ಬೆಳಗಾವಿ ಅಧಿವೇಶನದ ಶತಾಬ್ದಿ ಕಾರ್ಯಕ್ರಮಕ್ಕೆ ಬರಾಕ್ ಒಬಾಮಾ ಅವರನ್ನು ಅತಿಥಿಯಾಗಿ ಅಹ್ವಾನಿಸಲು ಚರ್ಚಿಸಲಾಗಿದೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಜನ್ಮ ಶತಮಾನೋತ್ಸವ ಡಿ.26 ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಒಬಾಮಾ ಅವರನ್ನು ಕರೆತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ 1924ರ ಡಿಸೆಂಬರ್ 26 ರಿಂದ ಎರಡು ದಿನಗಳ ಕಾಲ ಅಖಿಲ ಭಾರತ ಕಾಂಗ್ರೆಸ್ ಪಕ್ಷದ 39ನೇ ಅಧಿವೇಶನ ಆಯೋಜಿಸಲ್ಪಟ್ಟಿತ್ತು. ಆಗ ಐದು ವರ್ಷದ ಬಾಲಕಿಯಾಗಿದ್ದ ಗಾನಕೋಗಿಲೆ ಗಂಗೂಬಾಯಿ ಹಾನಗಲ್ ಅವರು ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಹಾಡಿದರು. ಅಧಿವೇಶನ ನಡೆದ ಸ್ಥಳಕ್ಕೆ ವಿಜಯನಗರ ಎಂದು ಹೆಸರಿಡಲಾಗಿತ್ತು. ಅಧಿವೇಶನಕ್ಕೆ ಆಗಮಿಸುವ ಜನರಿಗೆ ಕುಡಿಯುವ ನೀರು ಒದಗಿಸಲು ನಿರ್ಮಿಸಿದ ಬಾವಿಗೆ ಪಂಪಾ ಸರೋವರ ಎಂದು ಹೆಸರಿಟ್ಟಲಾಗಿತ್ತು. ಒಟ್ಟಾರೆ, ಇದೀಗ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳಾಗುತ್ತಿದ್ದು ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿಸಿಕೊಡಲು ಮುಂಚೂಣಿಯಲ್ಲಿ ಹೋರಾಟ ಮಾಡಿದ ಮಹಾತ್ಮಾ ಗಾಂಧಿ ಬೆಳಗಾವಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಅತ್ಯಂತ ಮಹತ್ವದ್ದಾಗಿದೆ.