ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತಾಂಡವವಾಡುತ್ತಿರುವ ಅತ್ಯಂತ ಭ್ರಷ್ಟಾಚಾರದಿಂದ ಬೇಸತ್ತು ತಾವೇ ಸ್ವತಃ ಹೊರ ಬಂದ್ರಾ ?
ಇದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಅಶೋಕ ದುಡಗುಂಟಿ ಅವರ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯ. ಬೆಳಗಾವಿ ಮಹಾನಗರ ಪಾಲಿಕೆ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ. ಅದರಿಂದ ಹೊರಬರುವ ಯಾವ ಲಕ್ಷಣವೂ ಸದ್ಯಕ್ಕಂತೂ ಗೋಚರಿಸುತ್ತಿಲ್ಲ. ಒಂದೆಡೆ ರಾಜಕಾರಣಿಗಳ ಇನ್ನಿಲ್ಲದ ಹಪಾಹಪಿ. ಇನ್ನೊಂದಡೆ ಅಧಿಕಾರಿ ವರ್ಗದ ಎಂದಿನ ನಿರಾಸಕ್ತಿ. ಇದೆಲ್ಲವೂ ಅತ್ಯಂತ ಉತ್ಸಾಹಿ ಅಧಿಕಾರಿಗೆ ಕೈ ಕಟ್ಟುವಂತಾಯಿತೇ ?
ಅಶೋಕ ದುಡಗುಂಟಿ ಅವರು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಅವಧಿಯಲ್ಲಿ ಮಹಾನಗರ ಪಾಲಿಕೆಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದರು. ನಸುಕಿನ 5 ಗಂಟೆಗೆ ಎದ್ದು ಮಹಾನಗರ ಪಾಲಿಕೆ ಸ್ವಚ್ಛತೆ ಕೆಲಸಗಳ ಮೇಲೆ ಹದ್ದಿನ ಕಣ್ಣಿಡುತ್ತಿದ್ದರು. ಸ್ವಚ್ಛತಾ ಕಾರ್ಮಿಕರ ಹಾಜರಾತಿ, ಅವರ ಕೆಲಸಗಳ ಮೇಲೆ ಸದಾ ನಿಗಾ ವಹಿಸುತ್ತಿದ್ದರು. ಕಾರ್ಮಿಕ ಸ್ವಚ್ಛತಾ ಕಾರ್ಮಿಕರು ಹಾಗೂ ಅಧಿಕಾರಿಗಳ ಮೇಲೆ ಇನ್ನಿಲ್ಲದ ಹಿಡಿದ ಸಾಧಿಸಿದ್ದರು. ಅವೇಳೆಯಲ್ಲಿ ತಮ್ಮ ವಾರ್ಡಿಗೆ ಆಗಮಿಸುವ ಆಯುಕ್ತರ ಭಯದಿಂದ ಕಾರ್ಮಿಕರು ಜಾಗೃತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅಶೋಕ ದುಡಗುಂಟಿ ಅವರು ಆಯುಕ್ತರಾಗಿದ್ದ ಅಷ್ಟು ದಿನಗಳ ಕಾಲ ಪ್ರತಿಯೊಂದು ವಾರ್ಡ್ ಗಳು ಸ್ವಚ್ಛ ಹಾಗೂ ಸುಂದರವಾಗಿ ಕಂಗೊಳಿಸುತ್ತಿತ್ತು. ಆದರೆ, ಇದೀಗ ಅವರು ಆಯುಕ್ತ ಹುದ್ದೆಯಿಂದ ಕೆಳಗಿಳಿಯುತ್ತಲೇ ಬೆಳಗಾವಿ ಮತ್ತೆ ತನ್ನ ಹಿಂದಿನ ನರಕ ಸದೃಶ ಸ್ಥಿತಿಯನ್ನು ಮತ್ತೆ ತೆರೆದಿಟ್ಟಿದೆ. ಸ್ವಚ್ಛತೆ ಎನ್ನುವುದಕ್ಕೆ ಸದ್ಯಕ್ಕಂತೂ ಬೆಳಗಾವಿಯಲ್ಲಿ ಮುಕ್ತಿ ಇಲ್ಲ ಎನ್ನುವ ಸ್ಥಿತಿ ಗೋಚರಿಸುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಆಡಳಿತ ಹಾಗೂ ವಿರೋಧಿ ಜನಪ್ರತಿನಿಧಿಗಳು ಬಲವಾದ ಹಿಡಿದ ಹೊಂದಿದ್ದಾರೆ. ತಾವು ಹೇಳಿದ್ದೆ ನಡೆಯಬೇಕು, ಇಲ್ಲವಾದರೆ ಯಾವುದೋ ಸಂಬಂಧವಿಲ್ಲದ ಪ್ರಕರಣದಲ್ಲಿ ಸಿಕ್ಕಿಸುತ್ತಾರೆ. ಇದು ಗುಟ್ಟಿನ ಸಂಗತಿ ಏನಲ್ಲ. ತಾವು ಹೇಳಿದ್ದೆ ನಡೆಯಬೇಕು ಎಂಬ ಉಭಯ ಕಡೆಯವರ ಹಠ ಸಾಧನೆಯಲ್ಲಿ ಆಯುಕ್ತರು ಸೇರಿದಂತೆ ಅಧಿಕಾರಿ ವರ್ಗ ಕರ್ತವ್ಯ ನಿಭಾಯಿಸುವುದು ಅತ್ಯಂತ ಸವಾಲಿನ ಸಂಗತಿ. ಆದರೂ ಮಹಾನಗರ ಪಾಲಿಕೆ ಆಯುಕ್ತರಾಗಿ ಅಶೋಕ ದುಡಗುಂಟಿ ಅವರು ಆಡಳಿತ ಮತ್ತು ವಿರೋಧಿ ಜನಪ್ರತಿನಿಧಿಗಳ ವಿಶ್ವಾಸ ಪಡೆದುಕೊಂಡು ಅತ್ಯಂತ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದರು. ಅವರ ಕಾರ್ಯವೈಖರಿ ಉಭಯ ಜನಪ್ರತಿನಿಧಿಗಳ ಜನ ಮೆಚ್ಚುಗೆ ಗಳಿಸಿತ್ತು. ಆದರೆ, ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಇನ್ನಿಲ್ಲದ ರೀತಿಯಲ್ಲಿ ತಮ್ಮ ವೈಯಕ್ತಿಕ ಹಠ ಸಾಧನೆ ಮಾಡುವ ಧೋರಣೆ ಸದಾ ಮುಂದುವರಿದಿದೆ. ಇದಕ್ಕೆ ಅಂತ್ಯವೇ ಇಲ್ಲ ಎಂಬ ರೀತಿಯಲ್ಲಿ ಪಾಲಿಕೆಯಲ್ಲಿ ಆಡಳಿತ ಮುಂದುವರಿಯಬೇಕು ಎಂಬ ಧೋರಣೆಯಿಂದ ಬೇಸತ್ತು ಅಶೋಕ ದುಡಗುಂಟಿ ಅವರು ಈಗ ಪಾಲಿಕೆ ಆಯುಕ್ತ ಪದ ತ್ಯಜಿಸಿ ಹೊರಬಂದ್ರಾ ಎಂಬ ಅನುಮಾನಗಳು ಈಗ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿವೆ.