ಬೆಳಗಾವಿ: ಪೋಕ್ಸೋ, ಬಾಲ್ಯವಿವಾಹ, ಬಾಲಕಾರ್ಮಿಕ ಹಾಗೂ ಇತರೆ ಕಾನೂನು ವಿಷಯಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳಿಗೆ ಅರಿವು ಹೊಂದುವದು ಅತೀ ಮುಖ್ಯವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳು ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಮ್. ಕೊಳ್ಳಾ ಹೇಳಿದರು.
ಬೈಲಹೊಂಗಲದ ಕೆ.ಆರ್.ಸಿ.ಇ.ಎಸ್. ಹೆಚ್.ವ್ಹಿ ಕೌಜಲಗಿ ಕಾನೂನು ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ನವದೆಹಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ನಿರ್ಮೂಲನಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪಿ. ಮುರಳಿ ಮೋಹನ ರೆಡ್ಡಿ ಅವರು ಕಾನೂನು ವಿದ್ಯಾರ್ಥಿಗಳಿಗೆ ಸರ್ಕಾರಿ ನ್ಯಾಯಾಧೀಶರ ಪರೀಕ್ಷೆಗಳನ್ನು ಯಾವ ರೀತಿ ಅಧ್ಯಯನ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಬಾಲ್ಯ ವಿವಾಹ ನಿಷೇದ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾಯ್ದೆ, ದತ್ತು ಅಧಿನಿಯಮ ಕಾಯ್ದೆ, ಮತ್ತು ಬಾಲ ನ್ಯಾಯ ಕಾಯ್ದೆ (ಪೋಷಣೆ ಮತ್ತು ರಕ್ಷಣೆ) ಇತರೆ ಕಾಯ್ದೆ ಬಗ್ಗೆ ತಿಳಿಸುತ್ತಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಜಿಲ್ಲೆಯಲ್ಲಿರುವ ಎಕಪೋಷಕ, ಅನಾಥ, ಪರಿತ್ಯಕ್ತ, ಬಿಕ್ಷಾಟನೆ, ಬಾಲ ಕಾರ್ಮಿಕ, ಕಾಣೆಯಾದ ಮಕ್ಕಳು, ಮಾದಕ ವ್ಯಸನಿ ಮಕ್ಕಳು, ಲೈಂಗಿಕ ದೌರ್ಜನ್ಯ ಹಾಗೂ ಶಿಕ್ಷಣದಿಂದ ವಂಚಿತರಾದ ಮಕ್ಕಳು, ಬಾಲ್ಯ ವಿವಾಹಕ್ಕೊಳಗಾದ ಮಕ್ಕಳು ಹಾಗೂ ಇನ್ನಿತರ ಯಾವುದೆ ಸಮಸ್ಯೆ ಇರುವ ಮಕ್ಕಳ ಕುರಿತು ಈ ಕಚೇರಿ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಮಕ್ಕಳಿಗೆ ಯಾವುದೇ ಸಮಸ್ಯೆ ಇದ್ದರೆ ತಕ್ಷಣವೇ ಮಕ್ಕಳ ಸಹಾಯವಾಣಿ ೧೦೯೮/೧೧೨ಗೆ ಕರೆ ಮಾಡಬೇಕೆಂದು ತಿಳಿಸಿದರು.
ಬೈಲಹೊಂಗಲ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಅಪರ್ಣಾ ಎಮ್. ಕೊಳ್ಳಾ ಅವರು ಭೇಟಿ ನೀಡಿ ವಾಸ್ತವದ ಸ್ಥಿತಿಗತಿಗಳನ್ನು ಹಾಗೂ ಮಕ್ಕಳ ಸಮಸ್ಯೆಗಳನ್ನು ಆಲಿಸಿ ಪರೀಶೀಲನೆ ನಡೆಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ, ಅಗತ್ಯದ ಸಲಹೆ ಸೂಚನೆಗಳನ್ನು ನೀಡಿದರು.
ವಕ್ಕುಂದ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಹಾಗೂ ಇಂದಿರಾನಗರದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿ ಶಾಲೆಯ ಎಲ್ಲ ಸಿಬ್ಬಂದಿಗಳಿಗೆ ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಖಡಕ್ ಸೂಚನೆ ನೀಡಿದರು.