ಬೆಂಗಳೂರು:
ಕನ್ನಡ ಸಾಹಿತ್ಯ ಪರಿಷತ್ತು ಚಾವುಂಡರಾಯ ದತ್ತಿ, ʻನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥ ಹಳ್ಳಿ ದತ್ತಿʼ ಹಾಗೂ ʻಕನ್ನಡ ಕಾಯಕ ದತ್ತಿʼ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಕ್ಟೋಬರ್ 21 ಶುಕ್ರವಾರ ಸಂಜೆ 4.30 ಕ್ಕೆ ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ, ನಾಡೋಜ ಡಾ. ಹಂಪ ನಾಗರಾಜಯ್ಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷ, ನಾಡೋಜ ಡಾ. ಮಹೇಶ ಜೋಶಿ ವಹಿಸಲಿದ್ದಾರೆ. ಸರ್ವೋಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳು ಹಾಗೂ ವಿಶ್ರಾಂತ ಲೋಕಾಯುಕ್ತರು ಆಗಿರುವ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಧಾರವಾಡ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ವಿಶ್ರಾಂತ ಕುಲ ಸಚಿವ ಪ್ರೊ. ಶಾಂತಿನಾಥ ದಿಬ್ಬದ ಅವರು ʻಚಾವುಂಡರಾಯ ದತ್ತಿʼ ಪ್ರಶಸ್ತಿಗೆ, ವಿಜಯವಾಣಿ ದಿನಪತ್ರಿಕೆಯ ಸಂಪಾದಕ ಕೆ.ಎನ್.ಚನ್ನೇಗೌಡ ಅವರು ʻನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿʼ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ ಕಾಯಕ ದತ್ತಿ ಪ್ರಶಸ್ತಿಯನ್ನು ಮಹಾರಾಷ್ಟ್ರ ರಾಜ್ಯದ ಗಡಿ ಭಾಗವಾದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ನಿರಂಜನ ಪ್ರಣವ ಸ್ವರೂಪಿ ಬಸವಲಿಂಗ ಮಹಾಸ್ವಾಮಿಗಳು, ಕೋಲಾರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಂಕರಪ್ಪ ಮತ್ತು ಕೊಪ್ಪಳದ ರಂಗನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಕೆ. ಇಮಾಮಸಾಬ ಅವರಿಗೆ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.