ಮೂಡುಬಿದಿರೆಯಲ್ಲಿ 1998 ರಲ್ಲಿ ಡಾ.ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಳ್ವಾಸ್ ಕಾಲೇಜನ್ನು ಆರಂಭಿಸಿದ್ದು, ರಜತ ಮಹೋತ್ಸವದ ಹೊಸ್ತಿಲಲ್ಲಿದೆ.
ಮೂಡುಬಿದಿರೆ :
ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯ ಮೂಲಕ ಅನನ್ಯವಾಗಿ ಗುರುತಿಸಿಕೊಂಡಿರುವ ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜು 2023-24 ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಪಡೆದಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023-24 ನೇ ಸಾಲಿನಿಂದ 10 ವರ್ಷಗಳಿಗೆ ಅನ್ವಯವಾಗುವಂತೆ ಸ್ವಾಯತ್ತ ಸ್ಥಾನಮಾನ ನೀಡುವ ಕುರಿತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) 2023ರ ಮೇ 31ರಂದು ಮಂಗಳೂರು ವಿಶ್ವವಿದ್ಯಾಲಯಕ್ಕೆ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಅನ್ವಯ ಮಂಗಳೂರು ವಿಶ್ವವಿದ್ಯಾಲಯ ವಿದ್ಯಾವಿಷಯಕ ಪರಿಷತ್ ಸಮಾಲೋಚನೆಯೊಂದಿಗೆ ಸಿಂಡಿಕೇಟ್ ಮಾಡಿರುವ ಶಿಫಾರಸು ಅನುಸರಿಸಿ ಸ್ವಾಯತ್ತ ಸ್ಥಾನಮಾನ ನೀಡಲು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸಹಮತ ಸೂಚಿಸಿ ಆದೇಶಿಸಿದೆ ಎಂದು ತಿಳಿಸಿದರು.
ಮೌಲ್ಯಾಧಾರಿತ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರೆಯುವ ಕಾರಣ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಪದವಿಗಳನ್ನು ಇನ್ನಷ್ಟು ಕಾಲಬದ್ದ ಹಾಗೂ ಸುಸಂಘಟಿತವಾಗಿ ನಡೆಸಲು ಅವಕಾಶವಾಗಲಿದೆ. ದಾಖಲಾತಿ, ಪರೀಕ್ಷೆ ಹಾಗೂ ಫಲಿತಾಂಶವನ್ನು ಸುಸಜ್ಜಿತವಾಗಿ ನಡೆಸಲು ಸಹಕಾರಿಯಾಗುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇನ್ನಷ್ಟು ವೇಗ ಸಿಗಲಿದೆ. ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಸುಸಂಘಟಿತವಾಗಿ ಆಯೋಜಿಸಲು ಅನುವು ಮಾಡಿಕೊಡಲಿದೆ. ವೃತ್ತಿಪರತೆ ಹಾಗೂ ಆಧುನಿಕ ಕೈಗಾರಿಕೆ ಮತ್ತು ಉದ್ಯಮ ವಲಯಕ್ಕೆ ಬೇಕಾದ ಕೌಶಲಭರಿತ ತರಬೇತಿಗೆ ಅವಕಾಶ ಹೆಚ್ಚಲಿದೆ ಎಂದು ಹೇಳಿದರು.
ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ರ್ಯಾಂಕ್, ಕ್ರೀಡಾ ಮತ್ತು ಸಾಂಸ್ಕೃತಿಕ ವಲಯದಲ್ಲಿ ಗಣನೀಯ ಸಾಧನೆ ಹಾಗೂ ಅತಿಹೆಚ್ಚಿನ ಉದ್ಯೋಗ ಗಳಿಕೆ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಇದ್ದರು.