ಕ್ಷುಲ್ಲಕ ಕಾರಣಕ್ಕಾಗಿ ಅಟ್ರಾಸಿಟಿ ಕೆಸ್..?
ಕಾಕತಿ ಪೊಲೀಸರಿಂದ 7 ದಿನಗಳ ನಂತರ FIR..!
ಯಮಕನಮರಡಿಯಲ್ಲಿ ಪ್ರಾರಂಭವಾದ ರಾಜಕೀಯ ಕಿಚ್ಚು..?
ಬೆಳಗಾವಿ :ಭತ್ತದ ಸುಗ್ಗಿ ಮುಗಿದ ಮೇಲೆ ಕಣ ಕೊಡುವ ವಿಚಾರದಲ್ಲಿ ದಲಿತ ಮಹಿಳೆಯೊಬ್ಬರನ್ನು ಬೈದಿದ್ದಕ್ಕೆ ಹಾಗೂ ಕ್ಷುಲ್ಲಕ ಕಾರಣಕ್ಕಾಗಿ ಮರಾಠ ಸಮಾಜದ ವ್ಯಕ್ತಿ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ತಾಲೂಕಿನ ಅಲತಗೆ ಗ್ರಾಮದ ಭರಮಾ ಲಕ್ಷ್ಮಣ ಗುಗ್ರೇಟಕರ ಎಂಬಾತನ ಮೇಲೆ ದಲಿತ ಮಹಿಳೆ ಲಕ್ಷ್ಮಿ ಯಲ್ಲಪ್ಪಾ ಕಾಂಬಳೆ ಅವರನ್ನು ಜಾತಿ ನಿಂದನೆ ಮಾಡಿದ್ದಕ್ಕಾಗಿ ಎಸ್ಸಿಎಸ್ಟಿ ಜಾತಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ಡಿಸೆಂಬರ್ 5 ರಂದು ನಡೆದಿದೆ. ಮೊದಲು ಗ್ರಾಮದಲ್ಲಿನ ಹಿರಿಯರು ಸೇರಿ ಮಾಡಲು ಪ್ರಯತ್ನಿಸಿದ ರಾಜಿ ಸಂಧಾನ ಕೂಡ ವಿಫಲವಾಗಿದೆ. ನಂತರ ದೂರು ಹೊತ್ತು ಕಾಕತಿ ಪೊಲೀಸ ಠಾಣೆಗೆ ಬಂದು ತಿಳಿಸಿದ್ದಾರೆ. ಆಗ ಕಾಕತಿ ಪೊಲೀಸರು ಆರೋಪಿಯನ್ನು ಕರೆದು ಬುದ್ದಿವಾದ ಹೇಳಿದ್ದರೆ ಅಲ್ಲಿಗೆ ಮುಗಿಯುತಿತ್ತು. ಅಲ್ಲದೆ ಘಟನೆ ನಡೆದು ಏಳು ದಿನಗಳ ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲಿಯವರೆಗೆ ಯಾವ ಡೀಲ್ ಗಾಗಿ ಬಿಟ್ಟಿದ್ದರೆಂದು ತಿಳಿದು ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಪ್ರಕರಣದ ತನಿಖೆ ಗ್ರಾಮೀಣ ಎಸಿಪಿ ಎಸ್ ವಿ ಗಿರೀಶ್ ನೇತೃತ್ವದಲ್ಲಿ ನಡೆಯಲಿದ್ದು, ಇದು ಕ್ಷುಲ್ಲಕ ಕಾರಣಕ್ಕಾಗಿ ನಡೆದ ಘಟನೆ. ಆರೋಪಿ ದೂರುದಾರದ ಶರತ್ತುಗಳಿಗೆ ಒಪ್ಪಿಲ್ಲ. ಹೀಗಾಗಿ ಅವರು ದೂರು ದಾಖಲಿಸಿದ್ದಾರೆ. ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನನ್ನ ನೇತೃತ್ವದಲ್ಲಿ ತನಿಖೆ ನಡೆಯುತ್ತಿರುವುದಾಗಿ ಪತ್ರಿಕೆಗೆ ತಿಳಿಸಿದರು.
ಈ ಅಟ್ರಾಸಿಟಿ ಕೇಸಿನಿಂದಾಗಿ ಯಮಕನಮರಡಿಯಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ನಡುವೆ ರಾಜಕೀಯ ಕಿಚ್ಚು ಪ್ರಾರಂಭವಾಗಿದೆ. ಎರಡು ಪಕ್ಷದ ಕಾರ್ಯಕರ್ತರು ಇದರಲ್ಲಿ ನೇರಾನೇರವಾಗಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.