ಬೆಳಗಾವಿ : ನೆರೆಯ ಮಹಾರಾಷ್ಟ್ರದಲ್ಲಿ ಈಗ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣ ಜನರ ರೋಷಕ್ಕೆ ಕಾರಣವಾಗಿದೆ. ಇದೀಗ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಅವಳನ್ನು ಕೊಲೆ ಮಾಡಿರುವ ಘಟನೆ ನೆರೆಯ ಕೊಲ್ಲಾಪುರದಲ್ಲಿ ನಡೆದಿದೆ.
ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನಲ್ಲಿ ನಾಪತ್ತೆ ಪ್ರಕರಣ ದಾಖಲಾದ ನಂತರ ಗುರುವಾರ ಸಂಜೆ ಶೀಯೆ ಎಂಬ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಕಬ್ಬಿನ ಗದ್ದೆ ಕೆಲಸಕ್ಕೆ ಬಿಹಾರದಿಂದ ವಲಸೆ ಬಂದಿದ್ದ ಕುಟುಂಬವೊಂದಕ್ಕೆ ಈ ಬಾಲಕಿ ಸಂಬಂಧಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಆತನೇ ಬಾಲಕಿಯನ್ನು ಪುಸಲಾಯಿಸಿ ಕಬ್ಬಿನ ಗದ್ದೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದ. ಬಳಿಕ ವಿಷಯ ಗೊತ್ತಾಗುತ್ತದೆ ಎಂದು ಬಾಲಕಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.